ಬೆಂಗಳೂರು: ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು (ವರ್ಕ್ ಫ್ರಮ್ ಹೋಮ್) ಅಂತ್ಯಗೊಳಿಸಿದ್ದು, ವಾರಕ್ಕೆ ಮೂರು ಸಲ ಕಚೇರಿಗೆ ಬರುವುದು ಕಡ್ಡಾಯವಾಗಿದೆ. ಈ ನಡುವೆ ಕಚೇರಿಗೆ ಹಾಜರಾಗಲು ಉದ್ಯೋಗಿಗಳು ಹಿಂದೇಟು ಹಾಕುತ್ತಿದ್ದಾರೆ. ಟಿಸಿಎಸ್ ಟೆಕ್ಕಿಗಳ ಮನವೊಲಿಕೆಗೆ ಜಾಲತಾಣಗಳಲ್ಲಿ ನಾನಾ ಪೋಸ್ಟ್‌ಗಳನ್ನು ಪ್ರಕಟಿಸಿದೆ.
ಈ ಸಂಬಂಧ ಉದ್ಯೋಗಿಗಳಿಗೆ ಟಿಸಿಎಸ್ ಸೂಚಿಸಿದೆ. ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿದಿರುವುದು, ಲಸಿಕೆ ವಿತರಣೆ ಪ್ರಗತಿದಾಯಕವಾಗಿರುವುದರಿಂದ ಹಳೆಯ ಪದ್ಧತಿಯಂತೆ ಉದ್ಯೋಗಿಗಳು ಕಚೇರಿಗೆ ಬರಬೇಕು ಎಂದು ಕಂಪನಿ ಇ-ಮೇಲ್ ಮೂಲಕ ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ಈಗ ಟಿಸಿಎಸ್ ಕಚೇರಿಗಳಿಗೆ ಗ್ರಾಹಕರು ಭೇಟಿ ನೀಡುತ್ತಿದ್ದಾರೆ. ಕನಿಷ್ಠ ವಾರಕ್ಕೆ ಮೂರು ದಿನ ಕಚೇರಿಗೆ ಬರುವುದು ಕಡ್ಡಾಯ ಎಂದು ತಿಳಿಸಿದೆ. ಒಂದು ವೇಳೆ ಉದ್ಯೋಗಿಗಳು ಈ ನಿಯಮವನ್ನು ಉಲ್ಲಂಘಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು. ಹಾಗೂ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ.
ಟಿಸಿಎಸ್‌ನ 25×25 ಮಾದರಿ
ಟಿಸಿಎಸ್ 25×25 ಮಾದರಿಯನ್ನು ಅನುಸರಿಸಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಎಲ್ಲರೂ ಕಚೇರಿಗೆ ಬರಬೇಕಾಗಿದೆ ಎಂದು ಟಿಸಿಎಸ್ ವಕ್ತಾರರು ತಿಳಿಸಿದ್ದಾರೆ. ಸಿಇಒ ರಾಜೇಶ್ ಗೋಪಿನಾಥನ್ ಅವರು ಪರಿಚಯಿಸಿರುವ ಈ ಯೋಜನೆಯ ಪ್ರಕಾರ 2025ರ ವೇಳೆಗೆ ಟಿಸಿಎಸ್‌ನಲ್ಲಿ ಕೇವಲ 25% ಉದ್ಯೋಗಿಗಳು ಕಚೇರಿಯಿಂದ ಕೆಲಸ ಮಾಡಲಿದ್ದಾರೆ. ಉಳಿದವರು ಮನೆಯಿಂದಲೇ ಕೆಲಸ ಮಾಡಲಿದ್ದಾರೆ. ಆದರೆ ಈ ಪರಿವರ್ತನೆಗೆ ಮುನ್ನ ಎಲ್ಲರೂ ಕಚೇರಿಗೆ ಹಾಜರಾಗುವುದು ಮುಖ್ಯ ಎಂದು ಟಿಸಿಎಸ್ ವಕ್ತಾರರು ತಿಳಿಸಿದ್ದಾರೆ.
ಕಚೇರಿಗೆ ಹಾಜರಾಗಲು ಉದ್ಯೋಗಿಗಳ ಹಿಂದೇಟು: ಟಿಸಿಎಸ್ ತನ್ನ ಉದ್ಯೋಗಿಗಳಿಗೆ ಕಚೇರಿಗೆ ಬರಲು ಸೂಚಿಸಿದ್ದರೂ, ಬರುತ್ತಿರುವವರ ಸಂಖ್ಯೆ ಕೇವಲ 20% ಆಗಿದೆ. ಹೀಗಾಗಿ ಉದ್ಯೋಗಿಗಳನ್ನು ಮನವೊಲಿಸಲು ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ನಾನಾ ಬಗೆಯ ಪೋಸ್ಟ್‌ಗಳನ್ನು ಟಿಸಿಎಸ್ ಪ್ರಕಟಿಸಿ ಓಲೈಕೆ ಮಾಡುತ್ತಿದೆ.
ಜಾಲತಾಣಗಳಲ್ಲಿ ಟಿಸಿಎಸ್ ಅಭಿಯಾನ: ಟಿಸಿಎಸ್ ತನ್ನ ಉದ್ಯೋಗಿಗಳನ್ನು ಆಕರ್ಷಿಸಲು ಸಾಮಾಜಿಕ ಜಾಲತಾಣಗಳಲ್ಲಿ ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಪ್ರಕಟಿಸಿದೆ. ” ನಿಮ್ಮ ನೆಚ್ಚಿನ ಕಚೇರಿ ನಿಮ್ಮನ್ನು ಎದುರು ನೋಡುತ್ತಿದೆ. ಕಾಫಿ ವಿರಾಮದ ಅವಧಿ ನಿಮ್ಮ ಚಿಟ್ ಚಾಟ್ ಅನ್ನು ಮಿಸ್ ಮಾಡಿಕೊಳ್ಳುತ್ತಿದೆ, ಬನ್ನಿ ಎಂಬಿತ್ಯಾದಿ ಸಂದೇಶಗಳನ್ನು ಪ್ರಕಟಿಸಲಾಗಿದೆ.