Site icon Vistara News

Moonlighting policy | ಸ್ವಿಗ್ಗಿಯ ಮೂನ್‌ಲೈಟಿಂಗ್‌ ನೀತಿಯ ಜಾರಿ ಕಷ್ಟಕರ: ಸಿಐಇಎಲ್‌ ಎಚ್‌ಆರ್‌ ಸರ್ವೀಸ್

Moonlighting policy

ಬೆಂಗಳೂರು: ಆನ್‌ಲೈನ್‌ ಆಹಾರ ಮಾರಾಟ ವಲಯದ ಸ್ವಿಗ್ಗಿ ಪರಿಚಯಿಸಲು ಹೊರಟಿರುವ ಮೂನ್‌ಲೈಟಿಂಗ್‌ ನೀತಿಯು ಮೇಲ್ನೋಟಕ್ಕೆ ಚೆನ್ನಾಗಿರುವಂತೆ ಕಂಡರೂ, ( Moonlighting policy) ಅನುಷ್ಠಾನ ಕಷ್ಟಕರ ಹಾಗೂ ಸವಾಲುಗಳಿಂದ ಕೂಡಿದೆ ಎಂದು ಸಿಐಇಎಲ್‌ ಎಚ್‌ಆರ್‌ ಸರ್ವೀಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆದಿತ್ಯ ನಾರಾಯಣ್‌ ಮಿಶ್ರಾ ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

ಸ್ವಿಗ್ಗಿಯು ತನ್ನ ಉದ್ಯೋಗಿಗಳ ಅನುಕೂಲಕ್ಕಾಗಿ ಮೂನ್‌ಲೈಟಿಂಗ್‌ ನೀತಿ ಜಾರಿಗೊಳಿಸಿದೆ. ಸ್ವಿಗ್ಗಿಯ ಉದ್ಯೋಗಿಗಳು ತಮ್ಮ ಕೆಲಸದ ಅವಧಿ ಮುಕ್ತಾಯವಾದ ಬಳಿಕ ಬೇರೆ ಕಡೆಗಳಲ್ಲಿಯೂ ಕೆಲಸ ಮಾಡಬಹುದು. ಕಂಪನಿಯ ಕೆಲಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ಬಿಡುವಿನ ವೇಳೆ ಎರಡನೇ ಉದ್ಯೋಗವನ್ನೂ ಮಾಡಬಹುದು. ಆದರೆ ಎಲ್ಲ ಪೂರ್ಣಕಾಲಿಕ ಉದ್ಯೋಗಿಗಳಿಗೆ ಇದನ್ನು ವಿಸ್ತರಿಸುವುದು ಹಾಗೂ ಅದನ್ನು ಪರಿಶೀಲಿಸುವುದು ಕಷ್ಟಕರ. ಎಲ್ಲ ಉದ್ಯೋಗಿಗಳಿಗೂ ಹಲವು ಟಾಸ್ಕ್‌ಗಳನ್ನು ನಡೆಸುವುದು ಅಸಾಧ್ಯವಾಗಬಹುದು. ಇದರಿಂದ ಅವರಿಗೆ ಕೊಟ್ಟಿರುವ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ಕಷ್ಟವಾಗಬಹುದು. ನೀತಿಯಲ್ಲಿ ಸ್ಪಷ್ಟತೆ ಇರಬೇಕು. ಇದಕ್ಕೆ ಸಾಕಷ್ಟು ಪ್ರಯೋಗಶಿಲತೆಯ ಅಗತ್ಯ ಇದೆ. ಕಂಪನಿಯ ಗೌಪ್ಯತೆಗೆ ಧಕ್ಕೆಯಾಗುವ ಅಪಾಯವೂ ಇದೆ. ಕೆಲ ಉದ್ಯೋಗಿಗಳು ಇದನ್ನು ದುರ್ಬಳಕೆ ಮಾಡುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಆದಿತ್ಯ ನಾರಾಯಣ್‌ ಮಿಶ್ರಾ.

ಕಾನೂನು ಪ್ರಕಾರ ಅವಕಾಶ ಇಲ್ಲ

ಈಗಿನ ಕಾರ್ಮಿಕ ಕಾನೂನುಗಳ ಪ್ರಕಾರ ಏಕಕಾಲಕ್ಕೆ ಎರಡು ಕಡೆ ಉದ್ಯೋಗಕ್ಕೆ ಅವಕಾಶ ಇಲ್ಲ. ಪೂರ್ಣಕಾಲಿಕ ಉದ್ಯೋಗಿಗೆ ಒಂದಕ್ಕಿಂತ ಹೆಚ್ಚು ಕಂಪನಿ ಅಥವಾ ಸಂಸ್ಥೆಯಲ್ಲಿ ಏಕಕಾಲಕ್ಕೆ ಕೆಲಸ ಮಾಡಲು ಅಸಾಧ್ಯ. ಕಾನೂನು ಪ್ರಕಾರ ಉದ್ಯೋಗದಾತರು ಉದ್ಯೋಗಿಗೆ ತಿಂಗಳಿಗೆ ನಿರ್ದಿಷ್ಟ ಗಂಟೆಗಳ ಕಾಲ ಮತ್ತೊಂದು ಕಡೆ ಕನ್ಸಲ್ಟೆಂಟ್‌ ಅಥವಾ ಸಲಹೆಗಾರ ಅಥವಾ ಅರೆ ಕಾಲಿಕ ಕೆಲಸಗಾರರಾಗಿ ಕೆಲಸ ಮಾಡಲು ಅವಕಾಶ ನೀಡಿದರೆ ಆಗಬಹುದು.

ಯಾರಿಗೆ ಸೂಕ್ತ?: ಸಲಹೆಗಾರ, ತರಬೇತುದಾರ, ಶಿಕ್ಷಕ, ಬರವಣಿಗೆ, ಡಿಸೈನಿಂಗ್‌, ಸೋಶಿಯಲ್‌ ಮೀಡಿಯಾ ಎಂಗೇಜಿಂಗ್‌, ಡಿಜಿಟಲ್‌ ಮಾರ್ಕೆಟಿಂಗ್‌, ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌, ಟೆಸ್ಟಿಂಗ್‌ ಮತ್ತು ಅಕೌಂಟಿಂಗ್‌ ವಲಯದಲ್ಲಿ ಮೂನ್‌ಲೈಟಿಂಗ್‌ ಪದ್ಧತಿ ಸೂಕ್ತವಾಗಬಹುದು ಎನ್ನುತ್ತಾರೆ ನಾರಾಯಣ್‌ ಮಿಶ್ರಾ.

ಮೂನ್‌ಲೈಟಿಂಗ್‌ ಮೋಸ ಎಂದ ವಿಪ್ರೊ ಬಾಸ್‌ ರಿಷಾದ್ ಪ್ರೇಮ್‌ಜೀ: ಈ ನಡುವೆ ವಿಪ್ರೊ ಅಧ್ಯಕ್ಷ ರಿಷಾದ್ ಪ್ರೇಮ್‌ಜೀ ಅವರು ಮೂನ್‌ಲೈಟಿಂಗ್‌ ನೀತಿಯನ್ನು ಮೋಸ ಎಂದು ಬಣ್ಣಿಸಿದ್ದಾರೆ. ಒಂದು ಕಡೆ ನಿಯಮಿತ ಉದ್ಯೋಗ ಮಾಡುವವರು ಮತ್ತೊಂದು ಕಡೆ ಕೆಲಸ ಮಾಡುವುದು ಎಂದರೆ ವಂಚನೆ ಮಾಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Exit mobile version