Site icon Vistara News

Entry and exit : ಷೇರುಗಳನ್ನು ಯಾವಾಗ ಖರೀದಿಸಬೇಕು, ಯಾವಾಗ ಮಾರಾಟ ಮಾಡಬೇಕು?

bse sensex

ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರನ್ನು ಕಾಡುವ ಪ್ರಶ್ನೆಯಿದು. ( Entry and exit ) ಯಾವಾಗ ಷೇರುಗಳನ್ನು ಖರೀದಿಸಬೇಕು ಮತ್ತು ಯಾವಾಗ ಮಾರಾಟ ಮಾಡಬೇಕು? ಎನ್ನೋದು. ಕೆಲವು ಸೈಕಾಲಜಿಕಲ್‌ ಕಾರಣಗಳಿಂದಾಗಿ ಇದನ್ನು ನಿರ್ಧರಿಸುವುದು ಕಷ್ಟವಾಗುವುದು ಸಹಜ. ನೀವು ಆಯ್ಕೆ ಮಾಡಿದ ಷೇರು ಮರು ದಿನವೇ ಜಿಗಿಯಬಹುದು. ಅಥವಾ ನಷ್ಟಕ್ಕೀಡಾಗಬಹುದು. ಕೆಳಗೆ ಬಿದ್ದ ಷೇರು ದರ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯಾಗಬುದು. ಅಥವಾ ದೀರ್ಘಾವಧಿಗೆ ನಷ್ಟದಲ್ಲಿ ಇರಬಹುದು. ಇದನ್ನು ಗ್ರಹಿಸುವುದು ಕಷ್ಟ.

ಮಾರುಕಟ್ಟೆಯಲ್ಲಿ ಷೇರುಗಳ ದರಗಳು ಕಡಿಮೆಯಾಗಿದ್ದಾಗ ಖರೀದಿಸಬೇಕು ಹಾಗೂ ದರಗಳು ಏರಿದಾಗ ಮಾರಿ ಬಿಡಬೇಕು. ಆದರೆ ಇದಕ್ಕೆ ಮಾರುಕಟ್ಟೆಯಲ್ಲಿ ಪ್ರವಾಹದ ವಿರುದ್ಧ ಈಜುವುದು ಗೊತ್ತಿರಬೇಕು. ಆದ್ದರಿಂದ ಭಾವುಕತನಗಳನ್ನು ಬಿಟ್ಟು ವೃತ್ತಿಪರವಾಗಿ ಆಲೋಚಿಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕರಗತಗೊಳಿಸಬೇಕು. ವಾರೆನ್‌ ಬಫೆಟ್‌ ಒಂದು ಮಾತನ್ನು ಹೇಳುತ್ತಾರೆ- ನೀವು ಷೇರನ್ನು ಮುಂದಿನ 10 ವರ್ಷಗಳ ಕಾಲ ಇಟ್ಟುಕೊಳ್ಳಲು ಆಲೋಚಿಸದಿದ್ದರೆ, ಮುಂದಿನ 10 ನಿಮಿಷಕ್ಕೂ ಖರೀದಿಸಬಾರದು.

ಷೇರು ಮಾರುಕಟ್ಟೆಯಲ್ಲಿ ಷೇರುಗಳ ದರಗಳನ್ನು ಅಧ್ಯಯನ ಮಾಡಲು ಶೇರ್‌ ಪ್ರೈಸ್‌ ಇಂಡೆಕ್ಸ್‌ ಅನ್ನು ಗಮನಿಸುವುದು ಉತ್ತಮ. ಬಿಎಸ್‌ಇ ಸೆನ್ಸೆಕ್ಸ್‌ ( ಎಸ್‌ &ಪಿ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಸೆನ್ಸಿಟಿವ್‌ ಇಂಡೆಕ್ಸ್)‌ ಮತ್ತು ಎನ್‌ಎಸ್‌ಇ ನಿಫ್ಟಿ 50 ( ಸ್ಟಾಂಡರ್ಡ್‌ & ಪೂರ್ಸ್‌ ಸಿಎನ್‌ ಎಕ್ಸ್‌ ನಿಫ್ಟಿ ) ಎರಡು ಮಹತ್ವದ ಇಂಡೆಕ್ಸ್‌ಗಳಾಗಿವೆ. ಡೌವ್‌ ಜಾನ್ಸ್‌ ಥಿಯರಿ: ಷೇರು ಮಾರುಕಟ್ಟೆಯಲ್ಲಿ ಷೇರುಗಳ ದರಗಳ ಚಲನವಲನಗಳನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಡೌವ್‌ ಜಾನ್ಸ್‌ ಥಿಯರಿ ಜನಪ್ರಿಯವಾಗಿದೆ. ಅಮೆರಿಕ ಮೂಲದ ಚಾರ್ಲ್ಸ್‌ ಎಚ್‌ ಡೌ ಎಂಬ ಮಾರುಕಟ್ಟೆ ಸಂಶೋಧಕ, ಪತ್ರಕರ್ತರು ಇದನ್ನು ಕಂಡುಹಿಡಿದರು. ಅವರೇ ವಾಲ್‌ ಸ್ಟ್ರೀಟ್‌ ಜರ್ನಲ್‌ನ ಮೊದಲ ಸಂಪಾದಕರೂ ಆಗಿದ್ದರು.

ಇದನ್ನೂ ಓದಿ: Stock Investment : ಷೇರು ಹೂಡಿಕೆದಾರರು ಉತ್ತಮ ಭವಿಷ್ಯದ ಇಂಡಸ್ಟ್ರಿಗಳನ್ನು ಗುರುತಿಸುವುದು ಹೇಗೆ?

ಹಾಗಾದರೆ ಏನಿದು ಡೌವ್‌ ಜಾನ್ಸ್‌ ಥಿಯರಿ? ಇದು ಷೇರು ಮಾರುಕಟ್ಟೆಯ ಯಾವುದಾದರೂ ಒಂದು ವಲಯದ ಷೇರುಗಳು ಅವರೇಜ್‌ ಏರಿಕೆಯಾದರೆ ( ಉದಾಹರಣೆಗೆ ಇಂಡಸ್ಟ್ರೀಸ್‌ ಅಥವಾ ಸಾರಿಗೆ) ಟ್ರೆಂಡ್‌ ಏರುಗತಿಯನ್ನು ಹಿಡಿಯುತ್ತದೆ ಎಂದು ಈ ಥಿಯರಿ ಹೇಳುತ್ತದೆ. ಇದು ಷೇರುಗಳ ದರಗಳ ಚಲನವಲನಗಳನ್ನು ಮೂರು ವಿಧಗಳಲ್ಲಿ ವಿಂಗಡಿಸುತ್ತದೆ. ಪ್ರೈಮರಿ ಮೂವ್‌ ಮೆಂಟ್‌, ಸೆಕೆಂಡರಿ ಮೂವ್‌ ಮೆಂಟ್‌ ಹಾಗೂ ದಿನ ನಿತ್ಯದ ಏರಿಳಿತಗಳು ಎಂದು ವರ್ಗೀಕರಿಸುತ್ತದೆ. ಪ್ರೈಮರಿ ಮೂವ್‌ ಮೆಂಟ್‌ನಲ್ಲಿ ಮಾರುಕಟ್ಟೆಯ ಕಳೆದ 1 ರಿಂದ 3 ವರ್ಷಗಳ ಮಾರುಕಟ್ಟೆ ಟ್ರೆಂಡ್‌ ಅನ್ನು ಅಧ್ಯಯನ ನಡೆಸಲಾಗುತ್ತದೆ. ಸೆಕೆಂಡರಿ ಮೂವ್‌ಮೆಂಟ್‌ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೆಲ ವಾರಗಳ ಹಿಂದಿನ ತನಕದ ಟ್ರೆಂಡ್‌ ಅನ್ನು ಪರಿಗಣಿಸಲಾಗುತ್ತದೆ. ಮೂರನೆಯ ವಿಧ ದಿನ ನಿತ್ಯದ ಏರಿಳಿತಗಳ ಅಧ್ಯಯನ.

ಷೇರು ಮಾರುಕಟ್ಟೆಯಲ್ಲಿ ಗರಿಷ್ಠ ಲಾಭ ಮತ್ತು ಕನಿಷ್ಠ ನಷ್ಟ ಎಂಬ ಪರಿಕಲ್ಪನೆ ಇಲ್ಲ. ನೀವು ಗರಿಷ್ಠ ಲಾಭ ಪಡೆಯಬೇಕಾದರೆ ಮಾರುಕಟ್ಟೆಯಲ್ಲಿ ಎಂದೆಂದಿಗೂ ಕಾಯುತ್ತಲೇ ಇರಬೇಕಾಗುತ್ತದೆ. ಕನಿಷ್ಠ ನಷ್ಟದ ತನಕ ಕಾಯುತ್ತೇನೆ ಎಂದರೂ ಕಾಯುತ್ತಲೇ ಇರಬೇಕಾಗುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು? ನಿಮ್ಮ ಷೇರು ದರ ಏರುಗತಿಯಲ್ಲಿದ್ದರೆ ಎಲ್ಲವನ್ನೂ ಒಮ್ಮೆಗೇ ಮಾರದಿರಿ. ಹಂತ ಹಂತಗಳಲ್ಲಿ ಮಾರಾಟ ಮಾಡಿ. ಒಂದು ವೇಳೆ ಯಾವುದಾದರೂ ಷೇರಿನ ದರ ಇಳಿಕೆಯಾಗುತ್ತಿದ್ದರೆ ಕೂಡ ಎಲ್ಲವನ್ನೂ ಒಟ್ಟಿಗೇ ಖರೀದಿಸದಿರಿ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 20-25% ಲಾಭ ಸಿಗುವುದಿದ್ದರೆ ಅಂಥ ಸ್ಥಿತಿಯನ್ನು ಲಾಭದಾಯಕ ಎನ್ನುತ್ತಾರೆ. ನೀವು ಖರೀದಿಸಿದ ಷೇರು ಕುಸಿಯುತ್ತಿದ್ದರೆ, ನಿರ್ದಿಷ್ಟ ಹಂತದ ಬಳಿಕ ಮಾರಿ ಬಿಡಿ. ಎಷ್ಟು ನಷ್ಟ ಭರಿಸಬಹುದು ಎಂದು ಮೊದಲೇ ಲೆಕ್ಕಾಚಾರ ಹಾಕಿಟ್ಟುಕೊಳ್ಳಿ.

Exit mobile version