ಮುಂಬಯಿ: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ ಇಪಿಎಫ್‌ಒ ಷೇರು ಮಾರುಕಟ್ಟೆಯಲ್ಲಿ ತನ್ನ ಹೂಡಿಕೆಯ ಮಿತಿಯನ್ನು ಈಗಿನ 15%ರಿಂದ 25%ಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ಸಾಲಪತ್ರ ಇತ್ಯಾದಿಗಳಲ್ಲಿ ಹೂಡಿಕೆಯಿಂದ ಉಂಟಾಗುವ ಕೊರತೆಯನ್ನು ಸರಿದೂಗಿಸಲು ಇಪಿಎಫ್‌ಒ ಪರಿಶೀಲಿಸಿದೆ.
ಈಕ್ವಿಟಿಗಳಲ್ಲಿ ಇಪಿಎಫ್‌ಒ ಹೂಡಿಕೆ 25%ಕ್ಕೆ ಏರಿದರೆ, ಪ್ರತಿ ತಿಂಗಳು ಸುಮಾರು 3,000 ಕೋಟಿ ರೂ.ಗಳನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಿದೆ. ಇದರಿಂದ ಆದಾಯ ಹೆಚ್ಚಳವಾದರೆ, ಪಿಎಫ್‌ದಾರರಿಗೆ ಬಡ್ಡಿ ಆದಾಯವನ್ನು ಹೆಚ್ಚಿಸಬಹುದು.
ಹಣಕಾಸು ಹೂಡಿಕೆ ಮತ್ತು ಲೆಕ್ಕ ಪತ್ರ ಸಮಿತಿ ಎರಡು ವಾರಗಳ ಹಿಂದೆ ಈ ಬಗ್ಗೆ ಸಭೆ ಸೇರಿ ಚರ್ಚಿಸಿದೆ. ಜೂನ್ ಕೊನೆಯವಾರ ನಡೆಯುವ ಪಿಎಫ್‌ಒದ ಟ್ರಸ್ಟಿಗಳ ಕೇಂದ್ರೀಯ ಮಂಡಳಿ ಸಭೆಯಲ್ಲಿ (ಸಿಬಿಟಿ) ಈ ಕುರಿತು ಪ್ರಸ್ತಾಪವಾಗುವ ಸಾಧ್ಯತೆ ಇದೆ. ಸಭೆಯ ಶಿಫಾರಸ್ಸನ್ನು ಕಾರ್ಮಿಕ ಮತ್ತು ಹಣಕಾಸು ಸಚಿವಾಲಯಕ್ಕೆ ಬಳಿಕ ಅನುಮೋದನೆಗೆ ಕಳುಹಿಸಲಾಗುವುದು.
ಎರಡು ಹಂತಗಳಲ್ಲಿ ಇಪಿಎಫ್‌ಒದ ಈಕ್ವಿಟಿ ಹೂಡಿಕೆ ಹೆಚ್ಚಳವಾಗುವ ಸಾಧ್ಯತೆ ಇದೆ. ಮೊದಲನೆಯದಾಗಿ 20%ಕ್ಕೆ ಹಾಗೂ ಬಳಿಕ 25%ಕ್ಕೆ ಹೆಚ್ಚಳ ನಿರೀಕ್ಷಿಸಲಾಗಿದೆ. ಇಪಿಎಫ್‌ಒ ಇಟಿಎಫ್‌ಗಳ ಮೂಲಕ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುತ್ತದೆ. ಈಕ್ವಿಟಿ ಎಂದರೆ ಮ್ಯೂಚುವಲ್ ಫಂಡ್, ಷೇರು ಎಲ್ಲವೂ ಇರುತ್ತದೆ.
ಇಪಿಎಫ್‌ಒ ಅಧಿಕಾರಿಗಳು ಪ್ರಮುಖ ಮ್ಯೂಚುವಲ್ ಫಂಡ್‌ಗಳ ಜತೆಗೆ ಮಾತುಕತೆ ನಡೆಸಿದ್ದಾರೆ. ಈಕ್ವಿಟಿ ಯೋಜನೆಗಳಲ್ಲಿ ಸಿಗುವ ಆದಾಯಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಸದ್ಯಕ್ಕೆ ಇಪಿಎಫ್‌ಒ ಎಸ್‌ಬಿಐ ಮ್ಯೂಚುವಲ್ ಫಂಡ್ ಮತ್ತು ಯುಟಿಐ ಮ್ಯೂಚುವಲ್ ಫಂಡ್ ಗಳು ನಿರ್ವಹಿಸುವ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುತ್ತದೆ.
ಇದನ್ನೂ ಓದಿ: PF ಬಡ್ಡಿದರ 40 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಕೆ, 8.5%ರಿಂದ 8.1%ಕ್ಕೆ ಕಡಿತ