ಮುಂಬೈ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆ (Lok Sabha Election 2024)ಯ 7 ಹಂತಗಳ ಮತದಾನ ಪೂರ್ಣಗೊಂಡಿದೆ. ಶನಿವಾರ (ಜೂನ್ 1) ಚುನಾವಣೋತ್ತರ ಸಮೀಕ್ಷೆ (Exit Polls) ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಹುದ್ದೆಗೆ ಏರುವುದು ಬಹುತೇಕ ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಷೇರುಗಳು, ಬಾಂಡ್‌ಗಳು ಮತ್ತು ರೂಪಾಯಿ ಮೌಲ್ಯ ಸೋಮವಾರ ಏರಿಕೆಯಾಗಲಿದೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ.
ಸಂಸತ್ತಿನಲ್ಲಿ ಬಹುಮತಕ್ಕೆ ಅಗತ್ಯವಾದ 272 ಸೀಟನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸುಲಭವಾಗಿ ಪಡೆದುಕೊಳ್ಳಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಫಲಿತಾಂಶ ಮಂಗಳವಾರ (ಜೂನ್ 4) ಪ್ರಕಟವಾಗಲಿದೆ. ಕಡಿಮೆ ಮತದಾನದ ಪ್ರಮಾಣ ಮತ್ತು ಹಲವಾರು ರಾಜ್ಯಗಳಲ್ಲಿ ಬಿಗಿಯಾದ ಸ್ಪರ್ಧೆಗಳಿಂದಾಗಿ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ 400 ಸ್ಥಾನಗಳ ಗುರಿಯನ್ನು ತಲುಪಲು ಬಿಜೆಪಿ ವಿಫಲವಾಗಬಹುದು ಎಂಬ ಆತಂಕದಿಂದ ಇತ್ತೀಚಿನ ಷೇರು ಮಾರುಕಟ್ಟೆ ಚಂಚಲತೆಯಿಂದ ಕೂಡಿತ್ತು. ಇದುವ ಹೂಡಿಕೆದಾರರನ್ನು ಆತಂಕಕ್ಕೆ ತಳ್ಳಿತ್ತು. ಸದ್ಯ ಚುನಾವಣೋತ್ತರ ಸಮೀಕ್ಷೆಯಿಂದ ಷೇರು ಮಾರುಕಟ್ಟೆಯಲ್ಲಿ ಜಿಗಿತ ಕಂಡು ಬರುವ ಸಾಧ್ಯತೆ ಇದೆ.
“ಫಲಿತಾಂಶದ ಬಗ್ಗೆ ಕೆಲವು ಸಂದೇಹಗಳು ಇದ್ದವು. ಈ ಬಗ್ಗೆ ಕೆಲವರು ಆತಂಕಕ್ಕೊಳಗಾಗಿದ್ದರಿಂದ ಷೇರು ಮಾರುಕಟ್ಟೆಯಲ್ಲಿ ಚಂಚಲತೆ ಹೆಚ್ಚಾಗಿತ್ತು. ಚುನಾವಣೋತ್ತರ ಸಮೀಕ್ಷೆಯಿಂದ ಆತಂಕ ನಿವಾರಣೆಯಾಗಿದೆ. ಹೀಗಾಗಿ ಮಾರುಕಟ್ಟೆಗಳು ಸೋಮವಾರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬಹುದುʼʼ ಎಂದು ಮುಂಬೈಯ ಡಿಎಸ್‌ಪಿ ಮ್ಯೂಚುವಲ್ ಫಂಡ್‌ನ ಈಕ್ವಿಟಿಗಳ ಮುಖ್ಯಸ್ಥ ವಿನೀತ್ ಸಾಂಬ್ರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಂತಿಮ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳಿಗಿಂತ ಭಿನ್ನವಾಗಿದ್ದರೂ, ಎನ್‌ಡಿಎ ಒಕ್ಕೂಟಕ್ಕೆ ಗೆಲುವು ನಿಶ್ಚಿತ ಎನ್ನಲಾಗಿದೆ. ಭಾರತೀಯ ಷೇರುಗಳು ಮೇ ತಿಂಗಳಲ್ಲಿ ದಾಖಲೆಯ ಮಟ್ಟವನ್ನು ತಲುಪಿದರೆ, ಬಾಂಡ್ ಸುಮಾರು ಒಂದು ವರ್ಷದಲ್ಲಿ ಗರಿಷ್ಠ ಮಟ್ಟದ ಹತ್ತಿರದಲ್ಲಿದೆ. ಜೂನ್ 4ರ ಫಲಿತಾಂಶ ಚುನಾವಣೋತ್ತರ ಸಮೀಕ್ಷೆಯೊಂದಿಗೆ ಹೊಂದಿಕೆಯಾದರೆ ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು ಹೊಸ ದಾಖಲೆಯನ್ನು ತಲುಪಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣಾ ಫಲಿತಾಂಶಕ್ಕೆ ಮುಂಚಿತವಾಗಿ ವಿದೇಶಿ ಹೂಡಿಕೆದಾರರು ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದರಿಂದ ಮುಖ್ಯ ಗೇಜ್ ಕಳೆದ ವಾರ ಸುಮಾರು ಶೇ. 2ರಷ್ಟು ಕುಸಿದು 22,531ಕ್ಕೆ ತಲುಪಿದೆ.
ಇದನ್ನೂ ಓದಿ: Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್ ಗಳಿಕೆ!
ಕೆಲವು ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ʼʼಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಜೂನ್ 4ರ ಬಳಿಕ ಭಾರತದ ಷೇರು ಮಾರುಕಟ್ಟೆಯನ್ನು ಹಿಡಿಯಲು ಆಗುವುದಿಲ್ಲʼʼ ಎಂದು ಹೇಳಿದ್ದರು. ʼʼಜೂನ್ 4ರ ಬಳಿಕ ಹೂಡಿಕೆದಾರರಿಗೆ ಭಾರಿ ಲಾಭವಾಗಲಿದೆʼʼ ಎಂದು ಗೃಹ ಸಚಿವ ಅಮಿತ್ ಶಾ ಕೂಡ ವಿಶ್ವಾಸ ವ್ಯಕ್ತಪಡಿಸಿದ್ದರು. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರತದ ಷೇರುಪೇಟೆಯು ಮಹತ್ವದ ಸ್ಥಾನ ಪಡೆದಿದೆ. ಹಾಂಕಾಂಗ್, ಜಪಾನ್, ಚೀನಾ ಹಾಗೂ ಅಮೆರಿಕದ ನಂತರ ಭಾರತದ ಷೇರುಪೇಟೆಯು ಬೃಹತ್ ಷೇರು ಮಾರುಕಟ್ಟೆ ಎನಿಸಿದೆ. ಹೀಗಾಗಿ ಚುನಾವಣಾ ಫಲಿತಾಂಶದತ್ತ ಎಲ್ಲರ ಕಣ್ಣು ನೆಟ್ಟಿದೆ.