ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ( Bengaluru-Mysuru Expressway ) ಬೈಕ್, ಸ್ಕೂಟರ್, ಆಟೊ ರಿಕ್ಷಾ ಸಂಚಾರಕ್ಕೆ ನಿಷೇಧ ವಿಧಿಸುವ ಆದೇಶ ಶೀಘ್ರದಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ. ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ( National Highways Authority of India -NHAI ) ಈ ಬಗ್ಗೆ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಎನ್‌ಎಚ್‌ಎಐ ಅಧಿಕಾರಿಗಳ ಪ್ರಕಾರ, ಹೈ ಸ್ಪೀಡ್ ಕಾರಿಡಾರ್‌ನಲ್ಲಿ ಬೈಕ್, ಸ್ಕೂಟರ್ ಇತ್ಯಾದಿ ದ್ವಿ ಚಕ್ರ ವಾಹನಗಳು ಮತ್ತು ನಿಧಾನವಾಗಿ ಸಂಚರಿಸುವ ಆಟೊ ರಿಕ್ಷಾ ಮುಂತಾದ ತ್ರಿ ಚಕ್ರ ವಾಹನಗಳು ಸಂಚರಿಸಿದರೆ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲ, ಅಪಘಾತಗಳ ಸಾಧ್ಯತೆ ಹೆಚ್ಚು. ಹೀಗಾಗಿ 6 ಲೇನ್ ಗಳಲ್ಲಿ ಅವುಗಳಿಗೆ ನಿರ್ಬಂಧ ಜಾರಿಯಾಗಲಿದೆ. ಆದರೆ ಇಕ್ಕೆಲಗಳಲ್ಲಿ ಇರುವ ಸರ್ವೀಸ್ ರಸ್ತೆಯಲ್ಲಿ ಈ ವಾಹನಗಳು ಮುಕ್ತವಾಗಿ ಸಂಚರಿಸಬಹುದು. ಈ ಬಗ್ಗೆ ಗಜೆಟ್ ಅಧಿಸೂಚನೆ ಶೀಘ್ರ ಪ್ರಕಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಕ್ಸ್‌ಪ್ರೆಸ್ ವೇಯ 6 ಲೇನ್‌ಗಳಲ್ಲಿ ವಾಹನಗಳ ಸರಾಸರಿ ವೇಗ 120 ಕಿ.ಮೀ ಮತ್ತು 140 ಕಿ.ಮೀ ನಡುವೆ ಇರುತ್ತದೆ. ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿರುವ ಹೆದ್ದಾರಿಯಲ್ಲಿ ಈಗ ಬೈಕ್, ಆಟೊಗಳು ಕಾರುಗಳ ಜತೆ ಸಂಚರಿಸುತ್ತಿವೆ.
ಕೇಂದ್ರ ಸರ್ಕಾರದ ಭಾರತ್‌ಮಾಲಾ ಪರಿಯೋಜನಾ (Bharatmala Pariyojana -BMP) ಭಾಗವಾಗಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. 118 ಕಿ.ಮೀ ಕಾರಿಡಾರ್ ಎರಡು ಹಂತಗಳಲ್ಲಿ ನಿರ್ಮಾಣವಾಗಿದೆ. ನಿಡಘಟ್ಟ-ಮೈಸೂರು ನಡುವೆ 61 ಕಿ.ಮೀ ಹಾಗೂ ಬೆಂಗಳೂರು ಮತ್ತು ನಿಡಘಟ್ಟ ನಡುವೆ 58 ಕಿ.ಮೀ ದೂರವನ್ನು ಒಳಗೊಂಡಿದೆ. ಹೆದ್ದಾರಿ ಯೋಜನೆಯು 8 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್, 42 ಸಣ್ಣ ಸೇತುವೆಗಳು, 64 ಅಂಡರ್ ಪಾಸ್, 11 ಓವರ್‌ಪಾಸ್, ನಾಲ್ಕು ರೋಡ್ ಓವರ್ ಬ್ರಿಡ್ಜ್, 5 ಬೈಪಾಸ್‌ಗಳನ್ನು ಒಳಗೊಂಡಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಪ್ಲಾಜಾಗಳನ್ನು ಎನ್‌ಎಚ್‌ಎಐ ತೆರವುಗೊಳಿಸುವ ಸಾಧ್ಯತೆ ಇದೆ. ಹಾಗಾದರೆ ಟೋಲ್ ಸಂಗ್ರಹ ಇರುವುದಿಲ್ಲ ಎಂದು ಭಾವಿಸುತ್ತೀರಾ? ಟೋಲ್ ಸಂಗ್ರಹ ನಡೆಯಲಿದೆ. ಆದರೆ ಅದಕ್ಕಾಗಿ ಆಟೊಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಶನ್ ತಂತ್ರಜ್ಞಾನ (Automatic Number Plate Recognition) ಬಳಸಿಕೊಂಡು ಟೋಲ್ ಶುಲ್ಕವನ್ನು ಸಂಗ್ರಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (National Highways Authority of India) ಈಗ ಈ ಎಎನ್‌ಪಿಆರ್ ತಂತ್ರಜ್ಞಾನವನ್ನು ದಿಲ್ಲಿ-ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಬಳಸುತ್ತಿದೆ. ಕ್ರಮೇಣ ಇತರ ಎಕ್ಸ್‌ಪ್ರೆಸ್‌ವೇಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಸ್ತರಿಸಲಿದೆ. ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲೂ ಈ ತಂತ್ರಜ್ಞಾನ ಅಳವಡಿಕೆಯಾಗುವ ನಿರೀಕ್ಷೆ ಇದೆ.