ಸ್ಯಾನ್ ಫ್ರಾನ್ಸಿಸ್ಕೊ: ಫೇಸ್‌ಬುಕ್ ಸ್ಥಾಪಕ ಜುಕರ್‌ಬರ್ಗ್ ಅವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ತಮ್ಮ ಮನೆಯನ್ನು ೩೧ ದಶಲಕ್ಷ ಡಾಲರ್‌ಗೆ (ಅಂದಾಜು ೨೪೫ ಕೋಟಿ ರೂ.) ಮಾರಾಟ ಮಾಡಿದ್ದಾರೆ.
ಅಮೆರಿಕದ ಪಶ್ಚಿಮ ಕರಾವಳಿಯ ನಗರಗಳಲ್ಲಿ ಹಲವಾರು ಮನೆಗಳನ್ನು ಹೊಂದಿರುವ ಮಾರ್ಕ್ ಜುಕರ್‌ಬರ್ಗ್, ಸ್ಯಾನ್ ಫ್ರಾನ್ಸಿಸ್ಕೊದಲ್ಲಿನ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. ೨೦೧೨ರಲ್ಲಿ ೧೦ ದಶಲಕ್ಷ ಡಾಲರ್‌ಗೆ (೧ ಕೋಟಿ ರೂ.) ಅವರು ೭,೦೦೦ ಚದರ ಅಡಿ ವಿಸ್ತೀರ್ಣದ ಈ ಆಸ್ತಿಯನ್ನು ಜುಕರ್‌ಬರ್ಗ್ ಖರೀದಿಸಿದ್ದರು.
೨೦೧೨ರಲ್ಲಿ ಫೇಸ್‌ಬುಕ್ ಐಪಿಒ ನಡೆದ ಬಳಿಕ ಈ ಬಂಗಲೆಯನ್ನು ಜುಕರ್ ಬರ್ಗ್ ಖರೀದಿಸಿದ್ದರು. ಬಳಿಕ ಮನೆಯ ನವೀಕರಣವೂ ನಡೆದಿತ್ತು. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಈ ವರ್ಷ ಇದುವರೆಗೆ ನಡೆದಿರುವ ಅತಿ ದುಬಾರಿ ಮನೆ ಮಾರಾಟ ಇದಾಗಿದೆ.
ಮನೆ ಮಾರಾಟ ಮಾಡಿದ್ದೇಕೆ? ಇದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಆದರೆ ಮನೆಯ ನವೀಕರಣ ಮಾಡುತ್ತಿದ್ದ ಸಂದರ್ಭ ನೆರೆಹೊರೆಯ ನಿವಾಸಿಗಳು ಶಬ್ದ, ಧೂಳು, ಮಾಲಿನ್ಯ ಉಂಟಾಗುತ್ತಿದೆ ಎಂದು ದೂರಿದ್ದರು. ನವೀಕರಣ ಆದ ಬಳಿಕ ಕೂಡ ಜುಕರ್‌ಬರ್ಗ್ ಅವರ ಭದ್ರತಾ ಸಿಬ್ಬಂದಿ ಪಾರ್ಕಿಂಗ್ ಸ್ಥಳವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.