Site icon Vistara News

ಫೇಸ್‌ಬುಕ್‌ Vs ಫೆಸ್‌ಬೇಕ್: ಜಾಲತಾಣದ ಹೆಸರು ಬಳಸಿದ್ದಕ್ಕೆ ಬೆಂಗಳೂರು ಮೂಲದ ಬೇಕರಿಗೆ ದಂಡ

facebake

ಬೆಂಗಳೂರು: ಬೆಂಗಳೂರಿನ ಬೇಕರಿ ಅಂಗಡಿಯೊಂದು ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಹೆಸರನ್ನು ದುರ್ಬಳಕೆ ಮಾಡಿದ್ದಕ್ಕಾಗಿ ದಿಲ್ಲಿ ಹೈಕೋರ್ಟ್‌ನಿಂದ ದಂಡನೆಗೆ ಗುರಿಯಾಗಿದೆ.

ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಕಂಪನಿಯು ದಿಲ್ಲಿ ಹೈಕೋರ್ಟ್‌ನಲ್ಲಿ ಈ ಬೇಕರಿ ಮಾಲೀಕರ ವಿರುದ್ಧ ತನ್ನ ಟ್ರೇಡ್‌ ಮಾರ್ಕ್‌ ಅನ್ನು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಕೇಸ್‌ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ಬೇಕರಿ ವಿರುದ್ಧ ತೀರ್ಪು ಕೊಟ್ಟಿದೆ. ಜತೆಗೆ ೫೦,೦೦೦ ರೂ. ದಂಡವನ್ನೂ ವಿಧಿಸಿದೆ.

ಬೆಂಗಳೂರಿನ ಈ ಬೇಕರಿಗೆ ” ಫೆಸ್‌ಬೇಕ್‌ʼ ಎಂಬ ಹೆಸರಿಡಲಾಗಿತ್ತು. ಫೆಸ್‌ಬೇಕ್‌ ಅಥವಾ ಫೇಸ್‌ ಕೇಕ್‌ ಇತ್ಯಾದಿ ಯಾವುದೇ ಹೆಸರನ್ನು ಬಳಸುವಂತಿಲ್ಲ. ಫೇಸ್‌ಬುಕ್‌ನ ಟ್ರೇಡ್‌ ಮಾರ್ಕ್‌ ಅನ್ನು ದುರ್ಬಳಕೆ ಮಾಡುವಂತಿಲ್ಲ ಎಂದು ಕೋರ್ಟ್‌ ಆದೇಶಿಸಿದೆ. ಜತೆಗೆ ಫೇಸ್‌ಬುಕ್‌ನ ವೆಬ್‌ಸೈಟ್‌, ಇ-ಮೇಲ್‌ ಅನ್ನು ಹೋಲುವ ವೆಬ್‌ಸೈಟ್‌, ಇ-ಮೇಲ್‌ ಐಡಿಗಳನ್ನೂ ತನ್ನ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕೆ ಬಳಸುವಂತಿಲ್ಲ ಎಂದು ಬೇಕರಿಗೆ ನಿರ್ಬಂಧಿಸಿದೆ.

ಮೆಟಾ ಕಂಪನಿಯು ೨೦೨೦ರಲ್ಲಿ ” ಫೆಸ್‌ಬೇಕ್‌ʼ ಬೇಕರಿಯ ಮಾಲೀಕ ನೌಫೆಲ್‌ ಮಲೋಲ್‌ ಎಂಬುವರ ವಿರುದ್ಧ ಕೇಸ್‌ ದಾಖಲಿಸಿತ್ತು. ಫೇಸ್‌ಬೇಕ್‌ ಹೆಸರು ಹಾಗೂ www.facebake.in ಎಂಬ ವೆಬ್‌ಸೈಟ್‌ ಬಳಕೆ ಮಾಡದಂತೆ ಕೋರ್ಟ್‌ ಮೆಟ್ಟಿಲೇರಿತ್ತು.

ನ್ಯಾಯಮೂರ್ತಿ ನವೀನ್‌ ಚಾವ್ಲಾ ಅವರು ನೀಡಿರುವ ತೀರ್ಪಿನಲ್ಲಿ, ಫೆಸ್‌ಬೇಕ್‌ ಹೆಸರಿನ ಬೋರ್ಡ್‌, ಪ್ಯಾಕೇಜಿಂಗ್‌, ಲೇಬಲ್‌, ಸಾಮಾಗ್ರಿಗಳನ್ನು ಅಳಿಸಬೇಕು ಅಥವಾ ನಾಶಪಡಿಸಬೇಕು ಎಂದು ಸೂಚಿಸಲಾಗಿದೆ. ಮೊಕದ್ದಮೆಗೆ ಸಂಬಂಧಿಸಿ ಮೆಟಾಗೆ ಉಂಟಾಗಿರುವ ಖರ್ಚುಗಳನ್ನೂ ಭರಿಸುವಂತೆ ಬೇಕರಿ ಮಾಲೀಕರಿಗೆ ಸೂಚಿಸಲಾಗಿದೆ.

ಬೇಕರಿಯ ಹೆಸರು ಮತ್ತು ವೆಬ್‌ಸೈಟ್‌ ವಿಳಾಸಗಳಲ್ಲಿ ಕೆಲ ವ್ಯತ್ಯಾಸಗಳಿದ್ದರೂ, ಒಟ್ಟಾರೆಯಾಗಿ ಫೇಸ್‌ಬುಕ್‌ ಟ್ರೇಡ್‌ ಮಾರ್ಕ್‌ ಅನ್ನು ದುರ್ಬಳಕೆ ಮಾಡಲಾಗಿದೆ. ಇದು ಕಾನೂನು ಬಾಹಿರ ಎಂದು ಕೋರ್ಟ್‌ ಹೇಳಿದೆ. ಪ್ರಮುಖ ಬ್ರ್ಯಾಂಡ್‌ಗಳ ಟ್ರೇಡ್‌ ಮಾರ್ಕ್‌ಗಳನ್ನು, ಹೆಸರನ್ನು ಅಲ್ಪ ಸ್ವಲ್ಪ ಬದಲಾವಣೆ ಮಾಡಿ ದುರ್ಬಳಕೆ ಮಾಡುವವರಿಗೆ ಇದು ಪಾಠವಾಗಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.

Exit mobile version