ನವ ದೆಹಲಿ: ಕೇಂದ್ರ ಸರ್ಕಾರ 4 ಇ-ಸ್ಕೂಟರ್ ಕಂಪನಿಗಳಿಗೆ ದ್ವಿ ಚಕ್ರವಾಹನ ಉತ್ಪಾದನೆಗೆ ಸಂಬಂಧಿಸಿ 500 ಕೋಟಿ ರೂ. ನೆರವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. (FAME II sops) ಈ ಹಿನ್ನೆಲೆಯಲ್ಲಿ ಈ ಕಂಪನಿಗಳು ಗ್ರಾಹಕರಿಗೆ ಇ-ಸ್ಕೂಟರ್‌ಗಳ ಚಾಜರ್‌ಗಳ ಮೌಲ್ಯವನ್ನು ಮರುಪಾವತಿಸಲು (reimburse) ಒಪ್ಪಿವೆ. FAME II ಸ್ಕೀಮ್ ಅಡಿಯಲ್ಲಿ ಓಲಾ ಎಲೆಕ್ಟ್ರಿಕ್, ಅಥೆರ್, ಟಿವಿಎಸ್ ಮತ್ತು ಹೀರೊ ಮೊಟೊಕಾರ್ಪ್‌ಗೆ ಸಬ್ಸಿಡಿ ಸಿಗಲಿದೆ.
ಓಲಾಗೆ ಭಾರಿ ಕೈಗಾರಿಕೆ ಸಚಿವಾಲಯದಿಂದ ಅತಿ ಹೆಚ್ಚು ಮೊತ್ತ, ಅಂದರೆ 370 ಕೋಟಿ ರೂ. ಸಿಗುವ ನಿರೀಕ್ಷೆ ಇದೆ. ಅಥೆರ್‌ಗೆ 275 ಕೋಟಿ ರೂ, ಟಿವಿಎಸ್‌ಗೆ 150 ಕೋಟಿ ರೂ, ಹೀರೊಮೊಟೊ ಕಾರ್ಪ್‌ಗೆ 28-30 ಕೋಟಿ ರೂ. ಸಬ್ಸಿಡಿ ನೆರವು ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಆರಂಭಿಕ ಹಂತದಲ್ಲಿ 500 ಕೋಟಿ ರೂ. ಬಿಡುಗಡೆ ಮಾಡಿದ ಬಳಿಕ 288 ಕೋಟಿ ರೂ. ಹೆಚ್ಚುವರಿ ನೆರವು ಕೂಡ ಬಿಡುಗಡೆಯಾಗಲಿದೆ.
ಅಥೆರ್ 95,000 ಗ್ರಾಹಕರಿಗೆ 140 ಕೋಟಿ ರೂ. ಹಣವನ್ನು ಮರು ಪಾವತಿಸಲಿದೆ. ಅಥೆರ್ 450X ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಸುವವರಿಗೆ (Ather 450X ) ನೆರವು ಲಭಿಸಲಿದೆ. ಹಾಗೆಯೇ ಓಲಾ 1 ಲಕ್ಷ ಗ್ರಾಹಕರಿಗೆ ( ಓಲಾ ಎಸ್1 ಪ್ರೊ) ನೆರವು ನೀಡಲಿದೆ. ಕೇಂದ್ರ ಸರ್ಕಾರ ಫೇಮ್ II ಅಡಿಯಲ್ಲಿ ಮುಂದಿನ ಕೆಲ ವರ್ಷಗಳ ಅವಧಿಗೆ 10,000 ಕೋಟಿ ರೂ.ಗಳ ನೆರವನ್ನು ಘೋಷಿಸಿತ್ತು. ಆದರೆ ಕಂಪನಿಗಳು ಸಬ್ಸಿಡಿ ನೆರವಿನಲ್ಲಿ ವಿಳಂಬವಾಗುತ್ತಿರುವುದರ ಬಗ್ಗೆ ದೂರಿದ್ದವು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 5000 ಕೋಟಿ ರೂ. ಬಿಲ್ ಚುಕ್ತಾ ಮಾಡಲು ಪರಿಶೀಲಿಸಿದೆ.
ಸರ್ಕಾರ ತನ್ನ ಎಲೆಕ್ಟ್ರಿಕ್ ವೆಹಿಕಲ್ ಸಬ್ಸಿಡಿ ಯೋಜನೆಯ ಅಡಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗೆ (electric buses) ಕೂಟ ಸಬ್ಸಿಡಿ ನೆರವು ನೀಡಲು ಉದ್ದೇಶಿಸಿದೆ. ಎಲೆಕ್ಟ್ರಿಕ್ ತ್ರಿ ಚಕ್ರ ವಾಹನಗಳಿಗೆ ನೀಡುವ ಸಬ್ಸಿಡಿ ಯೋಜನೆಯಲ್ಲಿ 2,000 ಕೋಟಿ ರೂ. ಫಂಡ್ ಬಳಕೆಯಾಗಿಲ್ಲ. ಹೀಗಾಗಿ ಅದನ್ನು ಎಲೆಕ್ಟ್ರಿಕ್ ಬಸ್‌ಗಳಿಗೆ ನೀಡಲು ಉದ್ದೇಶಿಸಲಾಗಿದೆ.