ಮುಂಬಯಿ: ಸಣ್ಣ ಉಳಿತಾಯಗಾರರಿಗೆ ಇದು ಸಿಹಿ ಸುದ್ದಿ. (FD Interest rate) ಹಲವಾರು ಬ್ಯಾಂಕ್‌ಗಳು ನಿಶ್ಚಿತ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಏರಿಸಿದೆ. ಖಾಸಗಿ ವಲಯದ ಐಸಿಐಸಿ ಬ್ಯಾಂಕ್ ಶುಕ್ರವಾರದಿಂದ ತನ್ನ ಎಫ್‌ಡಿ ದರವನ್ನು (Fixed deposits) ಹೆಚ್ಚಿಸಿದೆ. ಇದೇ ರೀತಿ ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯಸ್ ಬ್ಯಾಂಕ್ ಕೂಡ ತಮ್ಮ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏರಿಸಿವೆ.
ಐಸಿಐಸಿಐ ಬ್ಯಾಂಕ್ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳ ಬಡ್ಡಿ ದರದಲ್ಲಿ 0.25%ರಿಂದ 0.50% ತನಕ ಏರಿಸಿದೆ. ಬ್ಯಾಂಕ್ ಈಗ 7 ದಿನಗಳಿಂದ 10 ವರ್ಷ ತನಕದ ನಿಶ್ಚಿತ ಅವಧಿಯ ಠೇವಣಿಗಳಿಗೆ ವಾರ್ಷಿಕ 3.5%ರಿಂದ 7.10% ತನಕ ಸಾಮಾನ್ಯ ನಾಗರಿಕರಿಗೆ ಬಡ್ಡಿ ನೀಡುತ್ತದೆ. ವೆಬ್‌ಸೈಟ್ ಪ್ರಕಾರ ಹಿರಿಯ ನಾಗರಿಕರಿಗೆ ಬ್ಯಾಂಕ್ 0.5% ಹೆಚ್ಚು ಬಡ್ಡಿ ನೀಡುತ್ತದೆ. ಆರ್‌ಬಿಐ ಇತ್ತೀಚೆಗೆ ರೆಪೊ ದರವನ್ನು ಏರಿಸಿದ ಬಳಿಕ ಬ್ಯಾಂಕ್‌ಗಳು ಎಫ್‌ಡಿ ಬಡ್ಡಿಯನ್ನು ಪರಿಷ್ಕರಿಸಿವೆ. ಫೆಬ್ರವರಿ 8ರಂದು ರೆಪೊ ದರವನ್ನು 6.25%ರಿಂದ 6.50%ಕ್ಕೆ ಏರಿಸಲಾಗಿತ್ತು. 2022ರ ಮೇಯಿಂದ 2.50% ಏರಿಸಲಾಗಿದೆ. ಐಸಿಐಸಿಐ ಬ್ಯಾಂಕ್‌ನಲ್ಲಿ ಸಾಮಾನ್ಯ ನಾಗರಿಕರಿಗೆ 15-18 ತಿಂಗಳಿನಿಂದ 2 ವರ್ಷ ತನಕದ ಠೇವಣಿಗೆ 7.10% ಬಡ್ಡಿ ನೀಡಲಾಗುತ್ತದೆ.
ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ (SBI) ಫೆಬ್ರವರಿ 15ರಂದು ಬಡ್ಡಿ ದರವನ್ನು 0.25% ತನಕ ಏರಿಸಿತ್ತು. 7 ದಿನಗಳಿಂದ 10 ವರ್ಷ ಅವಧಿಯ ಠೇವಣಿಗಳಿಗೆ ಇದು ಅನ್ವಯಿಸುತ್ತದೆ. ಸಾಮಾನ್ಯ ನಾಗರಿಕರಿಗೆ ಗರಿಷ್ಠ 7% ಬಡ್ಡಿ ನೀಡಿದರೆ, ಹಿರಿಯ ನಾಗರಿಕರಿಗೆ 7.5% ಬಡ್ಡಿ ಸಿಗುತ್ತದೆ. ಎಸ್‌ಬಿಐ 400 ದಿನಗಳ ಅವಧಿಯ ವಿಶೇಷ ಎಫ್‌ಡಿ ಯೋಜನೆ ಆರಂಭಿಸಿದ್ದು, ಇದರಲ್ಲಿ 7.10% ಬಡ್ಡಿ ಸಿಗಲಿದೆ. ಹಿರಿಯನಾಗರಿಕರಿಗೆ 7.60% ಬಡ್ಡಿ ದೊರೆಯಲಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಫೆಬ್ರವರಿ 21 ರಂದು ಬಡ್ಡಿ ದರ ಪರಿಷ್ಕರಿಸಿದ್ದು, 3-7% ತನಕ ಬಡ್ಡಿ ನೀಡುತ್ತದೆ. ಪಿಎನ್‌ಬಿ ಸಾಮಾನ್ಯ ನಾಗರಿಕರಿಗೆ 666 ದಿನಗಳ ಯೋಜನೆಯಲ್ಲಿ 7.25% ಬಡ್ಡಿ ನೀಡಲಿದೆ. ಯಸ್ ಬ್ಯಾಂಕ್ 3.25%ರಿಂದ 7.50% ತನಕ ಬಡ್ಡಿ ನೀಡುತ್ತಿದೆ.