ಹಲವು ವರ್ಷಗಳ ಬಳಿಕ ಇದೀಗ ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರಿಗೆ ಠೇವಣಿಗೆ ಸಂಬಂಧಿಸಿ 8% ಬಡ್ಡಿ ದರ ಸಿಗುತ್ತಿದೆ. (ವಿಸ್ತಾರ Money Guide) ಹೀಗಾಗಿ ಸಣ್ಣ ಉಳಿತಾಯಗಾರರಿಗೆ, ಬ್ಯಾಂಕ್ ಎಫ್‌ಡಿಗಳಲ್ಲಿ ಡಿಪಾಸಿಟ್ ಇಟ್ಟು ಬಡ್ಡಿ ದರವನ್ನು ನೆಚ್ಚಿಕೊಂಡವರಿಗೆ ಇದು ಸಿಹಿ ಸುದ್ದಿಯಾಗಿದೆ. ( Fixed deposit rate ) ಸಾರ್ವಜನಿಕ ವಲಯದ ಪಂಜಾಬ್ & ಸಿಂಧ್ ಬ್ಯಾಂಕ್ ವಾರ್ಷಿಕ 8-8.50% ಬಡ್ಡಿ ದರ ನೀಡುತ್ತಿವೆ.
ಹಣದುಬ್ಬರ ಹೆಚ್ಚಳ ಮತ್ತು ಆರ್‌ಬಿಐ ರೆಪೊ ದರ ಏರಿಕೆ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಎಫ್‌ಡಿ ಬಡ್ಡಿ ದರವನ್ನು ಏರಿಸುತ್ತಿವೆ. 200-800 ದಿನ ಅವಧಿಯ ಎಫ್‌ಡಿ ಬಡ್ಡಿ ದರವನ್ನು 8%ಕ್ಕೆ ಪರಿಷ್ಕರಿಸಬೇಕಾದ ಅನಿವಾರ್ಯತೆಯಲ್ಲಿವೆ. ಹೀಗಾಗಿ ಈಗ ಎಫ್‌ಡಿ ಬಡ್ಡಿ ದರಗಳು ಗ್ರಾಹಕರಿಗೆ ಅನುಕೂಲಕರವಾಗಿವೆ. ಕನಿಷ್ಠ 7% ಬಡ್ಡಿ ಸಿಗುತ್ತಿದೆ. ಜನವರಿಯಲ್ಲಿ ರಿಟೇಲ್ ಹಣದುಬ್ಬರ 6.52% ಆಗಿತ್ತು. ಹೀಗಾಗಿ ಅದಕ್ಕೂ ಹೆಚ್ಚಿನ ಮಟ್ಟದಲ್ಲಿ ಬಡ್ಡಿ ದರ ಇರುವುದನ್ನು ಗಮನಿಸಬಹುದು. ಆದ್ದರಿಂದ ರಿಯಲ್ ಇಂಟರೆಸ್ಟ್ ದರ ಈಗ ಧನಾತ್ಮಕವಾಗಿದೆ. 2022ರಲ್ಲಿ ಹಣದುಬ್ಬರ ಸರಾಸರಿ 6% ಕ್ಕಿಂತ ಮೇಲ್ಮಟ್ಟದಲ್ಲಿ ಇದ್ದುದರಿಂದ ಆರ್‌ಬಿಐ ರೆಪೊ ದರದಲ್ಲಿ 2.50% ಏರಿಸಿದೆ. 6.50%ಕ್ಕೆ ಪರಿಷ್ಕರಿಸಿದೆ. 2022ರ ಮೇ ಬಳಿಕ ಆರ್‌ಬಿಐ ಸತತ 6 ಸಲ ಬಡ್ಡಿ ದರ ಪರಿಷ್ಕರಿಸಿದೆ. ಜನವರಿ ವೇಳೆಗೆ ಸಾಲದ ಬೆಳವಣಿಗೆ 16.5%ಕ್ಕೆ ಏರಿಕೆಯಾಗಿತ್ತು.
ಅಂಚೆ ಇಲಾಖೆಯ ಠೇವಣಿ ಉಳಿತಾಯ ಯೋಜನೆಗಳಲ್ಲಿ ಕೂಡ ಈಗ ಎರಡು ವರ್ಷಗಳಿಗೆ 6.8% ಬಡ್ಡಿ ದರ ಸಿಗುತ್ತದೆ. 10 ವರ್ಷಗಳ ಸರ್ಕಾರಿ ಬಾಂಡ್ 7.35% ಬಡ್ಡಿ ಆದಾಯ ನೀಡುತ್ತದೆ. ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ನಿಗದಿತ ಅವಧಿತ ಠೇವಣಿಗಳ (Fixed deposits) ಬಡ್ಡಿ ದರದಲ್ಲಿ 0.65% ತನಕ ಏರಿಸಿದ್ದು, ಗರಿಷ್ಠ 7.25%ಕ್ಕೆ ವೃದ್ಧಿಸಿದೆ.
ಎಸ್‌ಬಿಐ ವೆಬ್‌ಸೈಟ್ ಪ್ರಕಾರ ನಾನಾ ಅವಧಿಗಳ ನಿಶ್ಚಿತ ಠೇವಣಿ ( ಫಿಕ್ಸೆಡ್ ಡೆಪಾಸಿಟ್) ಬಡ್ಡಿ ದರಗಳಲ್ಲಿ 0.25%ರಿಂದ 0.65% ತನಕ ಹೆಚ್ಚಳವಾಗಿದೆ. 2 ಕೋಟಿ ರೂ. ತನಕದ ಠೇವಣಿಗಳ ಬಡ್ಡಿ ದರದಲ್ಲಿ ಹೆಚ್ಚಳ ಉಂಟಾಗಿದೆ. 2022 ಡಿಸೆಂಬರ್ 13ರಿಂದ ಅನ್ವಯವಾಗುತ್ತಿದೆ. 2022ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿಗೆ ಎಸ್‌ಬಿಐ ನಿಶ್ಚಿತ ಅವಧಿಯ ಠೇವಣಿಗಳ ಬಡ್ಡಿ ದರದಲ್ಲಿ 0.80% ತನಕ ಏರಿಸಿತ್ತು.