ವಾಷಿಂಗ್ಟನ್: ಅಮೆರಿಕದಲ್ಲಿ ಫೆಡರಲ್ ರಿಸರ್ವ್ ತನ್ನ ಬಡ್ಡಿ ದರದಲ್ಲಿ ಮತ್ತೆ 0.50% ಏರಿಕೆ ಮಾಡಿದೆ. ಇದರೊಂದಿಗೆ ಅಲ್ಲಿ ಈಗ ಬಡ್ಡಿ ದರ 4.50%ಕ್ಕೆ ತಲುಪಿದೆ. ಇದು ಕಳೆದ 15 ವರ್ಷದಲ್ಲಿಯೇ ಗರಿಷ್ಠ ಪ್ರಮಾಣವಾಗಿದೆ. 2007ರಿಂದೀಚೆಗಿನ ಗರಿಷ್ಠ ಮಟ್ಟಕ್ಕೆ ಬಡ್ಡಿ ದರವನ್ನು ಫೆಡರಲ್ ರಿಸರ್ವ್ ಏರಿಸಿದ್ದು, ಭವಿಷ್ಯದಲ್ಲಿ ಇದೇ ಉನ್ನತ ಮಟ್ಟದ ದರವನ್ನು ಮುಂದುವರಿಸುವುದಾಗಿಯೂ, ಅಗತ್ಯ ಬಿದರೆ ಮತ್ತಷ್ಟು ದರ ಹೆಚ್ಚಿಸುವ ಸುಳಿವನ್ನೂ ನೀಡಿದೆ.
ಅಮೆರಿಕ ಬಡ್ಡಿ ದರ ಏರಿಸಿದ್ದೇಕೆ?
ಅಮೆರಿಕದಲ್ಲಿ ಹಣದುಬ್ಬರ 7.1% ರ ಉನ್ನತ ಮಟ್ಟದಲ್ಲಿದೆ. ಅಮೆರಿಕದ ಇತಿಹಾಸವನ್ನು ಗಮನಿಸಿದರೆ 2% ಆಸುಪಾಸಿನಲ್ಲಿ ಹಣದುಬ್ಬರ ಇರುವುದು ಸಾಮಾನ್ಯ ಮತ್ತು ಸುರಕ್ಷಿತ ಮಟ್ಟ. ಹೀಗಾಗಿ ಈ ಉನ್ನತ ಮಟ್ಟದ ಹಣದುಬ್ಬರವನ್ನು ಸುರಕ್ಷಿತ ಮಟ್ಟಕ್ಕೆ ಇಳಿಸುವ ಗುರಿಯನ್ನು ಸರ್ಕಾರ ಮತ್ತು ಫೆಡರಲ್ ರಿಸರ್ವ್ ಹೊಂದಿದೆ. ಇದಕ್ಕಾಗಿ ನಿರಂತರವಾಗಿ ಬಡ್ಡಿ ದರ ಏರಿಸುತ್ತಿದೆ. ಫೆಬ್ರವರಿಯಲ್ಲಿ ಮುಂದಿನ ಫೆಡರಲ್ ಸಭೆ ನಡೆಯಲಿದೆ.
ಅಮೆರಿಕದದಲ್ಲಿ 2023ರಲ್ಲಿ ಆರ್ಥಿಕ ಹಿಂಜರಿತ ಆಗಲಿದೆ ಎಂಬ ಅಂದಾಜಿದೆ. ಹೀಗಿದ್ದರೂ, ಹಣದುಬ್ಬರ ಗರಿಷ್ಠ ಪ್ರಮಾಣದಲ್ಲಿ ಇರುವ ಹಿನ್ನೆಲೆಯಲ್ಲಿ ಫೆಡರಲ್ ರಿಸರ್ವ್ ಅದನ್ನು ತಗ್ಗಿಸಲು ಆದ್ಯತೆ ನೀಡಿದೆ. ಇದಕ್ಕಾಗಿ ಬಡ್ಡಿ ದರವನ್ನು ಏರಿಸುತ್ತಿದೆ.
ಭಾರತದ ಆರ್‌ಬಿಐ ಮೇಲೆ ಪ್ರಭಾವ ಏನು?
ಭಾರತದಲ್ಲಿ ಕಳೆದ ನವೆಂಬರ್‌ನಲ್ಲಿ ರಿಟೇಲ್ ಹಣದುಬ್ಬರ ಆರ್‌ಬಿಐ ಟಾರ್ಗೆಟ್ ಒಳಗೆಯೇ ಬಂದಿದೆ. 5.88%ಕ್ಕೆ ಇಳಿಕೆಯಾಗಿದೆ. ಹೀಗಾಗಿ ಮುಂದಿನ ಹಣಕಾಸು ನೀತಿ ಸಭೆಯಲ್ಲಿ ಆರ್‌ಬಿಐ ಬಡ್ಡಿ ದರ ಏರಿಕೆಯ ಮಟ್ಟವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಎರಡನೆಯದಾಗಿ ಅಮೆರಿಕದಲ್ಲಿನ ಆರ್ಥಿಕ ಹಿಂಜರಿತದ ಪರಿಣಾಮ ತೈಲ ದರ ಇಳಿಯುವ, ಕಚ್ಚಾ ಸಾಮಾಗ್ರಿಗಳ ದರ ತಗ್ಗುವ ಸಾಧ್ಯತೆ ಇದೆ. ಇದು ಭಾರತಕ್ಕೆ ಅನುಕೂಲಕರವಾಗುವ ಸಾಧ್ಯತೆ ಇದೆ. ಹಣದುಬ್ಬರ ಮತ್ತಷ್ಟು ಇಳಿಯುವ ಸಾಧ್ಯತೆಯೂ ಇದೆ. ಹೀಗಾಗಿ ಅಮೆರಿಕ ಮಾದರಿಯಲ್ಲಿ ಇಲ್ಲಿ ಬಡ್ಡಿ ದರ ಏರಿಕೆ ಸಾಧ್ಯತೆ ಕಡಿಮೆಯಾಗಿದೆ.