ಮುಂಬಯಿ: ಕೇರಳ ಮೂಲದ ಖಾಸಗಿ ವಲಯದ ಫೆಡರಲ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಜತೆ ವಿಲೀನಕ್ಕೆ ಸಂಬಂಧಿಸಿ ಆರಂಭಿಕ ಹಂತದ ಮತುಕತೆ ನಡೆಸಿದೆ ಎಂದು ವರದಿಯಾಗಿದೆ. ಈ ವರದಿಗಳ ಬೆನ್ನಲ್ಲೇ ಫೆಡರಲ್ ಬ್ಯಾಂಕಿನ ಷೇರು ದರ 7% ಏರಿಕೆಯಾಯಿತು. (Bank merger) ಬ್ಯಾಂಕಿನ ಷೇರು ದರ 129 ರೂ.ಗೆ ಜಿಗಿದಿದ್ದು, ಇದು ಸಾರ್ವಕಾಲಿಕ ಹೆಚ್ಚಳವಾಗಿದೆ. ಆದರೆ ಈ ನಡುವೆ ಫೆಡರಲ್ ಬ್ಯಾಂಕ್, ಮಾತುಕತೆ ನಡೆದಿರುವ ಮಾಧ್ಯಮ ವರದಿಗಳು ಕೇವಲ ವದಂತಿಯಷ್ಟೇ ಎಂದು ತಿಳಿಸಿತು.
” ಫೆಡರಲ್ ಬ್ಯಾಂಕ್ ಮತ್ತೊಂದು ಖಾಸಗಿ ಬ್ಯಾಂಕ್ ಜತೆಗೆ ವಿಲೀನವಾಗಲಿದೆ ಎಂಬ ಕೆಲ ಮಾಧ್ಯಮ ವರದಿಗಳು ವದಂತಿಗಳಾಗಿವೆʼʼ ಎಂದು ಷೇರು ವಿನಿಮಯ ಕೇಂದ್ರಕ್ಕೆ ಫೆಡರಲ್ ಬ್ಯಾಂಕ್ ವಿವರಣೆ ನೀಡಿತು.
ಬ್ಯಾಂಕಿನ ಷೇರು ದರ 6 ತಿಂಗಳಲ್ಲಿ 12% ಹೆಚ್ಚಳ
ಕಳೆದ ಕೆಲವು ದಿನಗಳಿಂದ ಬ್ಯಾಂಕಿನ ಷೇರು ದರದಲ್ಲಿ 12% ಏರಿಕೆಯಾಗಿದೆ. ಕಳೆದ 6 ತಿಂಗಳುಗಳಲ್ಲಿ ಬ್ಯಾಂಕ್‌ನ ಷೇರು ದರದಲ್ಲಿ 25% ಹೆಚ್ಚಳವಾಗಿದೆ. ವಿಲೀನಕ್ಕೆ ಸಂಬಂಧಿಸಿದ ಪ್ರಶ್ನೆಗೆ ಕೋಟಕ್ ಬ್ಯಾಂಕ್ ಪ್ರತಿಕ್ರಿಯಿಸಿಲ್ಲ.
ಕೇರಳದ ಕೊಚ್ಚಿನ್‌ನಲ್ಲಿ 1931ರಲ್ಲಿ ಸ್ಥಾಪನೆಯಾಗಿರುವ ಫೆಡರಲ್ ಬ್ಯಾಂಕ್ ಈಗ 1,272 ಶಾಖೆಗಳನ್ನು ಒಳಗೊಂಡಿದೆ. ಅಬುಧಾಬಿ, ಕತಾರ್, ಜುವೈತ್, ಒಮಾನ್ ಮತ್ತು ದುಬೈನಲ್ಲಿ ಕಚೇರಿಯನ್ನು ಒಳಗೊಂಡಿದೆ. ಎನ್ನಾರೈ ಮೂಲದ ಗ್ರಾಹಕರು ಬ್ಯಾಂಕಿಗೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಗಮನಿಸಬಹುದು. 1 ಕೋಟಿಗೂ ಹೆಚ್ಚು ಗ್ರಾಹಕರ ನೆಲೆಯನ್ನು ಹೊಂದಿರುವ ಬ್ಯಾಂಕ್ 15 ಲಕ್ಷಕ್ಕೂ ಹೆಚ್ಚು ಎನ್ನಾರೈ ಗ್ರಾಹಕರನ್ನು ಒಳಗೊಂಡಿದೆ. 2021-22ರಲ್ಲಿ 1,40,000 ಕೋಟಿ ರೂ. ಹಣವನ್ನು ಎನ್ನಾರೈಗಳು ಫೆಡರಲ್ ಬ್ಯಾಂಕ್ ಮೂಲಕ ರವಾನಿಸಿದ್ದರು.
ಖರೀದಿಸಿದರೆ ಕೋಟಕ್ ಬ್ಯಾಂಕಿಗೆ ಲಾಭವೇನು?
ಉದ್ಯಮಿ ಉದಯ್ ಕೋಟಕ್ ಅವರು 19 ವರ್ಷಗಳ ಹಿಂದೆ (2003) ಸ್ಥಾಪಿಸಿದ ಕೋಟಕ್ ಮಹೀಂದ್ರಾ ಬ್ಯಾಂಕ್, ಮುಂಬಯಿನಲ್ಲಿ ಪ್ರಧಾನ ಕಚೇರಿಯನ್ನು ಒಳಗೊಂಡಿದೆ. ಒಂದು ವೇಳೆ ಕೋಟಕ್ ಮಹೀಂದ್ರಾ ಭವಿಷ್ಯದ ದಿನಗಳಲ್ಲಿ ಫೆಡರಲ್ ಬ್ಯಾಂಕ್ ಅನ್ನು ಖರೀದಿಸಿದರೆ, ದಕ್ಷಿಣ ಭಾರತದಲ್ಲಿ ವಿಸ್ತರಣೆಗೆ ಸಹಕಾರಿಯಾಗಲಿದೆ.
ಸಾರ್ವಜನಿಕ ಬ್ಯಾಂಕ್‌ಗಳ ವಿಲೀನ: ಕಳೆದ 2019ರಲ್ಲಿ ನಡೆದ ಬ್ಯಾಂಕ್‌ಗಳ ವಿಲೀನದ ಪರಿಣಾಮ ಭಾರತದಲ್ಲಿ ಈಗ ಒಟ್ಟು 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು 21 ಖಾಸಗಿ ವಲಯದ ಬ್ಯಾಂಕ್‌ಗಳಿವೆ. ಮುಂದಿನ ಹಂತದಲ್ಲಿ ಬ್ಯಾಂಕ್‌ಗಳ ವಿಲೀನದ ಮೂಲಕ 4-5 ದೊಡ್ಡ ಬ್ಯಾಂಕ್‌ಗಳನ್ನು ಸೃಷ್ಟಿಸಲು ಸರ್ಕಾರ ಮುಂದಾಗಿದೆ.
ಭಾರತದಲ್ಲಿರುವ ಸಾರ್ವಜನಿಕ ಬ್ಯಾಂಕ್‌ಗಳು- 2022
ಬ್ಯಾಂಕ್ ಹೆಸರು | ಸ್ಥಾಪನೆ | ಪ್ರಧಾನ ಕಚೇರಿ |
ಬ್ಯಾಂಖ್ ಆಫ್ ಬರೋಡಾ | 1908 | ವಡೋದರಾ |
ಬ್ಯಾಂಕ್ ಆಫ್ ಇಂಡಿಯಾ | 1906 | ಮುಂಬಯಿ |
ಬ್ಯಾಂಕ್ ಆಫ್ ಮಹಾರಾಷ್ಟ್ರ | 1935 | ಪುಣೆ |
ಕೆನರಾ ಬ್ಯಾಂಕ್ | 1906 | ಬೆಂಗಳೂರು |
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ | 1911 | ಮುಂಬಯಿ |
ಇಂಡಿಯನ್ ಬ್ಯಾಂಕ್ | 1907 | ಚೆನ್ನೈ |
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ | 1937 | ಚೆನ್ನೈ |
ಪಂಜಾಬ್ & ಸಿಂಧ್ ಬ್ಯಾಂಕ್ | 1908 | ನವ ದೆಹಲಿ |
ಪಂಜಾಬ್ ನ್ಯಾಷನಲ್ ಬ್ಯಾಂಕ್ | 1894 | ನವ ದೆಹಲಿ |
ಎಸ್‌ಬಿಐ | 1955 | ಮುಂಬಯಿ |
ಯುಕೊ ಬ್ಯಾಂಕ್ | 1943 | ಕೋಲ್ಕೊತಾ |
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ | 1919 | ಮುಂಬಯಿ |
ಖಾಸಗಿ ವಲಯದ ಬ್ಯಾಂಕ್‌ಗಳು: ಎಕ್ಸಿಸ್ ಬ್ಯಾಂಕ್, ಬಂಧನ್ ಬ್ಯಾಂಕ್, ಸಿಎಸ್‌ಬಿ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್, ಡಿಸಿಬಿ ಬ್ಯಾಂಕ್, ಧನಲಕ್ಷ್ಮಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಜಮ್ಮು & ಕಾಶ್ಮೀರ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಐಡಿಬಿಐ ಬ್ಯಾಂಕ್, ನ್ಯಾಶನಲ್ ಬ್ಯಾಂಕ್, ಆರ್‌ಬಿಎಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ತಮಿಳ್ನಾಡ್ ಮರ್ಚಂಟೈಲ್ ಬ್ಯಾಂಕ್, ಯೆಸ್ ಬ್ಯಾಂಕ್.