ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾದ ಕಾರಣ ಹೆಚ್ಚಿನ ಜನ ಕೊನೆ ಕ್ಷಣದವರೆಗೂ ಐಟಿಆರ್ ಸಲ್ಲಿಸಿದ್ದಾರೆ. ದೇಶಾದ್ಯಂತ 2022-23ನೇ ಸಾಲಿನಲ್ಲಿ 6.77 ಕೋಟಿ ಜನ ಐಟಿಆರ್ ಸಲ್ಲಿಸಿದ್ದಾರೆ. ಇನ್ನು, ಇಷ್ಟು ಐಟಿಆರ್‌ಗಳಲ್ಲಿ 3.44 ಕೋಟಿ ಐಟಿಆರ್‌ಗಳನ್ನು ಆದಾಯ ತೆರಿಗೆ ಇಲಾಖೆ ಪರಿಶೀಲನೆ ಮಾಡಿದೆ. ಅದರಂತೆ, ಅರ್ಹರಿಗೆ ಆದಾಯ ತೆರಿಗೆ ಮರುಪಾವತಿ (Income Tax Refund) ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಆದರೆ, ಐಟಿಆರ್ ಸಲ್ಲಿಸಿಯೂ ಐಟಿ ರಿಫಂಡ್ ವಿಳಂಬವಾಗುವ ಸಾಧ್ಯತೆ ಇರುತ್ತದೆ. ಐಟಿಆರ್ ಸಲ್ಲಿಸಿದವರ ಕೆಲ ತಪ್ಪುಗಳು ಸೇರಿ ಹಲವು ಕಾರಣಗಳಿಂದ ವಿಳಂಬವಾಗುತ್ತದೆ. ಹೀಗೆ ಇನ್ನಷ್ಟು ವಿಳಂಬವಾಗುವುದನ್ನು ತಡೆಯಲು ಐಟಿಆರ್ ಸಲ್ಲಿಸಿದವರು ಒಂದಷ್ಟು ಪ್ರಕ್ರಿಯೆಗಳನ್ನು ಪಾಲಿಸಿದರೆ ಕ್ಷಿಪ್ರವಾಗಿ ಐಟಿ ರಿಫಂಡ್ ಪಡೆಯಬಹುದಾಗಿದೆ.
ಐಟಿ ರಿಫಂಡ್ ವಿಳಂಬಕ್ಕೆ ಕಾರಣಗಳೇನು?
- ಹೆಚ್ಚುವರಿ ದಾಖಲೆಗಳು ಬೇಕಾಗುತ್ತವೆ
- ಸರಿಯಾದ ಬ್ಯಾಂಕ್ ಖಾತೆ ಮಾಹಿತಿ ನೀಡದಿರುವುದು
- ರಿಫಂಡ್‌ಗಾಗಿ ಸರಿಯಾದ ಮಾಹಿತಿ ಒದಗಿಸದಿರುವುದು
- ಟಿಡಿಸ್ ಅಥವಾ ಟಿಸಿಎಸ್‌ನಲ್ಲಿ ಮಿಸ್‌ಮ್ಯಾಚ್ ಆಗಿರುತ್ತದೆ
- ರಿಫಂಡ್ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲೇ ಇರುವುದು
ರಿಫಂಡ್ ಆಗದಿದ್ದರೆ ಏನು ಮಾಡಬೇಕು?
ನೀವು ಐಟಿಆರ್ ಸಲ್ಲಿಸಿ ತುಂಬ ದಿನ ಆದರೂ ನಿಮ್ಮ ಬ್ಯಾಂಕ್ ಖಾತೆಗೆ ರಿಫಂಡ್ ಮೊತ್ತ ಜಮೆಯಾಗದಿದ್ದರೆ ಮೊದಲು ಇ-ಮೇಲ್ ಚೆಕ್ ಮಾಡಬೇಕು. ಹೆಚ್ಚುವರಿ ದಾಖಲೆ, ಮಾಹಿತಿ ಬೇಕಾಗಿದ್ದರೆ ಆದಾಯ ತೆರಿಗೆ ಇಲಾಖೆಯು ನಿಮಗೊಂದು ಮೇಲ್ ಕಳುಹಿಸಿರುತ್ತದೆ. ಆಗ ನೀವು, ಅಗತ್ಯ ಮಾಹಿತಿ ಒದಗಿಸಿದರೆ ರಿಫಂಡ್ ಆಗುತ್ತದೆ. ಹಾಗೊಂದು ವೇಳೆ ರಿಫಂಡ್ ಕಾಲಮಿತಿ ಮುಗಿದಿದ್ದರೆ (Expire) ರಿಫಂಡ್‌ಗೆ ಮತ್ತೆ ಅರ್ಜಿ (Reissue) ಸಲ್ಲಿಸಬೇಕು. ರಿಫಂಡ್ ಸ್ಟೇಟಸ್‌ನಲ್ಲಿ Returned ಅಂತ ಇದ್ದರೆ, ಆಗ ನೀವು ಇ-ಫೈಲಿಂಗ್ ಪೋರ್ಟಲ್ ಅತೌಆ ಅಸೆಸಿಂಗ್ ಆಫೀಸರ್‌ಗೆ ಮತ್ತೆ ಅರ್ಜಿ (Reissue) ಸಲ್ಲಿಸಬೇಕು.
ದೂರು ಸಲ್ಲಿಸುವುದು ಹೇಗೆ?
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ 30 ದಿನಗಳೊಳಗೆ ರಿಫಂಡ್ ಆಗಿರುವುದನ್ನು ದೃಢಪಡಿಸಿಕೊಳ್ಳಬೇಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನಿಮಗೆ ರಿಫಂಡ್ ಆಗದಿರಲು ಕಾರಣ ನೀಡಿರದಿದ್ದರೆ (Non-receipt) ಈ ಕುರಿತು incometax.gov.inಗೆ ಭೇಟಿ ನೀಡಿ ದೂರು ನೀಡಬಹುದು. ಹಾಗೆಯೇ, 1800-103-4455ಗೆ (Toll Free) ಕರೆ ಮಾಡಿ ದೂರು ಸಲ್ಲಿಸಬಹುದು. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯೊಳಗೆ ಮಾತ್ರ ಕರೆ ಮಾಡಿ ದೂರು ನೀಡಬಹುದು.
ಇದನ್ನೂ ಓದಿ: ITR Filing: ಈ ವರ್ಷ ದಾಖಲೆ ಐಟಿಆರ್ ಸಲ್ಲಿಕೆ, ಎಷ್ಟು ಮಂದಿ ಸಲ್ಲಿಸಿದ್ದಾರೆ ನೋಡಿ!
ರಿಫಂಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಇ-ಫೈಲಿಂಗ್ ವೆಬ್‌ಸೈಟ್ incometaxindiaefiling.gov.in ಅಥವಾ ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್‌ನ tin.nsdl.comಗೆ ಭೇಟಿ ನೀಡುವ ಮೂಲಕ ರಿಫಂಡ್ ಸ್ಟೇಟಸ್ ಚೆಕ್ ಮಾಡಬಹುದಾಗಿದೆ. ಹಾಗೆಯೇ, www.incometax.gov.in ಗೆ ಭೇಟಿ ನೀಡಿ, ಲಾಗ್ ಇನ್ ಆಗಿಯೂ ಸ್ಟೇಟಸ್ ಚೆಕ್ ಮಾಡಬಹುದಾಗಿದೆ. ಪ್ಯಾನ್‌ಕಾರ್ಡ್ ಹಾಗೂ ಪಾಸ್‌ವರ್ಡ್ ನಮೂದಿಸಬೇಕು. ನಂತರ ಇ-ಫೈಲ್ (E-File) ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್‌ಕಮ್ ಟ್ಯಾಕ್ಸ್ ರಿಟರ್ನ್ (Income Tax Return) ಆಯ್ಕೆ ಮಾಡಿಕೊಂಡು ವ್ಯೂ ಫೈಲ್ಡ್ ರಿಟರ್ನ್ (View Filed Return) ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ನಂತರ ವ್ಯೂ ಡಿಟೇಲ್ಸ್ ಆಪ್ಶನ್ (View Details Option) ಆಯ್ಕೆ ಮಾಡಿಕೊಂಡರೆ ಸ್ಟೇಟಸ್ ಕಾಣುತ್ತದೆ.