ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೊನೆಗೂ ಸಾಲದ ಬಡ್ಡಿ ದರ ಏರಿಕೆಗೆ ಗುರುವಾರ ಬ್ರೇಕ್ ಹಾಕಿ ಅಚ್ಚರಿಗೊಳಿಸಿದೆ. ಅಮೆರಿಕ, ಯುರೋಪ್ ಮೊದಲಾದೆಡೆಗಳಲ್ಲಿ ಸೆಂಟ್ರಲ್ ಬ್ಯಾಂಕ್‌ಗಳು ಇತ್ತೀಚೆಗೆ ಬಡ್ಡಿ ದರ ಏರಿಸಿರುವುದರಿಂದ ಆರ್‌ಬಿಐ ಕೂಡ ಬಡ್ಡಿ ದರ ಏರಿಸಲಿದೆ ( RBI Repo rate) ಎಂದೇ ನಿರೀಕ್ಷಿಸಲಾಗಿತ್ತು. ಆದರೆ ರೆಪೊ ದರವನ್ನು 6.5%ರ ಯಥಾಸ್ಥಿತಿಯಲ್ಲಿ ಇರಿಸಲಾಗಿದೆ. ಆದರೆ ಈ ಹಿಂದಿನ ಬಡ್ಡಿ ದರ ಏರಿಕೆಯು ಹಣದುಬ್ಬರವನ್ನು ತಗ್ಗಿಸುವ ನಿಟ್ಟಿನಲ್ಲಿ ನಿರೀಕ್ಷಿತ ಪರಿಣಾಮ ಬೀರದಿರುವುದರಿಂದ ಆರ್‌ಬಿಐ ಯಥಾಸ್ಥಿತಿಯಲ್ಲಿರಿಸಿದೆ.
ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. 2022ರ ಮೇ ಬಳಿಕ ಆರ್‌ಬಿಐ ಸತತ 6 ಸಲ ಒಟ್ಟು 2.50% ರಷ್ಟು ಬಡ್ಡಿ ದರ ಏರಿಸಿದೆ. ರೆಪೊ ದರ ಎಂದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯವ ಹಣಕ್ಕೆ ನೀಡುವ ಬಡ್ಡಿ ದರ.
2023 ಆಶಾದಾಯಕ ಎಂದ ಗವರ್ನರ್: ಈ 2023 ಆಶಾದಾಯಕವಾಗಿ ಆರಂಭವಾಗಿದೆ. ಆರ್ಥಿಕ ಮಾರುಕಟ್ಟೆಗಳು ಚೇತೋಹಾರಿಯಾಗಿವೆ. ಹೀಗಿದ್ದರೂ, ಜಾಗತಿಕವಾಗಿ ಅಭಿವೃದ್ಧಿ ಹೊಂದಿರುವ ಎಕಾನಮಿಗಳಲ್ಲಿ ಬ್ಯಾಂಕಿಂಗ್ ವಲಯದ ಬಿಕ್ಕಟ್ಟು ತಲೆದೋರಿದೆ.
ಭಾರತದ ಜಿಡಿಪಿ 2023-24ರಲ್ಲಿ 6.5%ಕ್ಕೆ ಏರಿಕೆಯಾಗಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಈ ನಡುವೆ ಹಣದುಬ್ಬರದ ಮುನ್ನೋಟವನ್ನು 5.3%ರಿಂದ 5.2%ಕ್ಕೆ ಕಡಿತಗೊಳಿಸಲಾಗಿದೆ.
ರಿಯಲ್ ಎಸ್ಟೇಟ್ ಮಾರುಕಟ್ಟೆ ದೃಷ್ಟಿಯಿಂದ ಬಡ್ಡಿ ದರ ಏರಿಕೆಯನ್ನು ತಡೆದಿರುವುದು ಉತ್ತಮ ಬೆಳವಣಿಗೆ ಎಂದು ಅನಾರಾಕ್ ಗ್ರೂಪ್ ಅಧ್ಯಕ್ಷ ಅಂಜು ಪುರಿ ತಿಳಿಸಿದ್ದಾರೆ. ಆರ್ಥಿಕ ಸ್ಥಿರತೆಗೆ ಆರ್‌ಬಿಐನ ಹಣಕಾಸು ನೀತಿ ಆದ್ಯತೆ ನೀಡಿದೆ. ಜಾಗತಿಕ ಬ್ಯಾಂಕಿಂಗ್ ಸಂಕಷ್ಟದಲ್ಲಿರುವ ಸಂದರ್ಭ ಭಾರತೀಯ ಬ್ಯಾಂಕಿಂಗ್ ಉತ್ತಮ ಸ್ಥಿತಿಯಲ್ಲಿದೆ ಎಂದು ಕೋಟಕ್ ಬ್ಯಾಂಕ್ ಸ್ಥಾಪಕ ಉದಯ್ ಕೋಟಕ್ ಹೇಳಿದ್ದಾರೆ.
ನಿಶ್ಚಿತ ಠೇವಣಿಗಳ ಬಡ್ಡಿ ದರ ಏರಿಕೆಗೂ ಬ್ರೇಕ್: ಒಂದು ವೇಳೆ ಆರ್‌ಬಿಐ ಗುರುವಾರ ರೆಪೊ ದರವನ್ನು 6.5%ರಿಂದ ಮೇಲ್ಮಟ್ಟಕ್ಕೆ ಏರಿಸಿರುತ್ತಿದ್ದರೆ, ನಿಶ್ಚಿತ ಠೇವಣಿಗಳ ಬಡ್ಡಿ ದರದಲ್ಲೂ ಏರಿಕೆಯಾಗುತ್ತಿತ್ತು. ಆದರೆ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿರುವುದರಿಂದಾಗಿ ಎಫ್‌ಡಿ ಬಡ್ಡಿ ದರ ಏರಿಕೆಗೂ ಬ್ರೇಕ್ ಬಿದ್ದಂತಾಗಿದೆ.
ನಿರ್ಮಲಾ ಸೀತಾರಾಮನ್ ಸ್ವಾಗತ: ಆರ್‌ಬಿಐ ತನ್ನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ಮೂಲಕ ಸೂಕ್ತ ನಿರ್ಧಾರ ಕೈಗೊಂಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಆರ್‌ಬಿಐ ತನ್ನ ನಿರ್ಧಾರ ಪ್ರಕಟಿಸಿದ ಬಳಿಕ ಷೇರು ಮಾರುಕಟ್ಟೆ ಸೂಚ್ಯಂಕವೂ ಚೇತರಿಸಿತು.