Site icon Vistara News

Finance management : ನೆಮ್ಮದಿಯ ಸ್ವಾವಲಂಬಿ ಬದುಕಿಗೆ 7 ಹಣಕಾಸು ಸೂತ್ರಗಳು

cash note

ಜೀವನದಲ್ಲಿ ಬಡವರಿಗೆ, ಜನ ಸಾಮಾನ್ಯರಿಗೆ ದಿನ ಬೆಳಗಾದರೆ ಒಂದೇ ಕನಸು. (Finance management ) ಅದು ಏನೆಂದರೆ ನೆಮ್ಮದಿಯ ಸ್ವಾವಲಂಬಿ ಬದುಕು ಮತ್ತು ಹಣಕಾಸು ವಿಚಾರಗಳಲ್ಲಿ ಯಾರ ಬಳಿಯೂ ಕೈಚಾಚದಿರುವಂಥ ಬಾಳು ಬೇಕು ಎನ್ನುವುದು. ಹೌದು ಇದು ಖಂಡಿತ ಸಾಧ್ಯ ಕೂಡ. ಈ ನಿಟ್ಟಿನಲ್ಲಿ 7 ಹಣಕಾಸು ನಿರ್ವಹಣೆಯ ಸೂತ್ರಗಳನ್ನು ನೋಡೋಣ.

ಮೊದಲನೆಯದಾಗಿ ಜೀವನದಲ್ಲಿ ಉಳಿತಾಯ ಮಾಡುವ ಅಭ್ಯಾಸವನ್ನು ಇಟ್ಟುಕೊಳ್ಳಿ. ಹೂಡಿಕೆದಾರರಾಗಿ ನೀವು ಎಷ್ಟು ಸಾಧ್ಯವೋ ಅಷ್ಟು ಬೇಗ ಹಣವನ್ನು ಇನ್ವೆಸ್ಟ್‌ ಮಾಡಲು ಆರಂಭಿಸಿ. ಮಕ್ಕಳಲ್ಲಿಯೂ ಹಣದ ಉಳಿತಾಯದ ಪ್ರಜ್ಞೆಯನ್ನು ಮೂಡಿಸಿ. ಜೀವನದ ಆರಂಭಿಕ ಕಾಲ ಘಟ್ಟದಲ್ಲಿ ಹಣ ಉಳಿತಾಯ ಮಾಡುವುದು ಸುಲಭವಲ್ಲ. ಏಕೆಂದರೆ ಆಗ ಆದಾಯದ ಪ್ರಮಾಣವೂ ಕಡಿಮೆಯಾಗಿರುತ್ತದೆ. ಥಿಯೊಡಾರ್‌ ರೂಸ್‌ವೆಲ್ಟ್‌ ಹೀಗೆನ್ನುತ್ತಾನೆ- ನೀವು ಏನನ್ನು ಪಡೆದಿದ್ದೀರೋ ಅದರಿಂದಲೇ, ನಿಮಗೆ ಏನು ಸಾಧ್ಯವೋ ಅದನ್ನು ನೀವು ಇರುವಲ್ಲಿಯೇ ಮಾಡಿ. ದೀರ್ಘಕಾಲ ಸರಿಯಾದ ಉಳಿತಾಯದಿಂದ ಸಿಗುವ ದೊಡ್ಡ ಲಾಭವೇನೆಂದರೆ, ಚಕ್ರಬಡ್ಡಿಯ ಲಾಭ. ಕಂಪೌಂಡ್‌ ಇಂಟರೆಸ್ಟ್‌ ಎನ್ನುತ್ತಾರೆ.

ಎರಡನೆಯದಾಗಿ ಆದಾಯ ಸೃಷ್ಟಿಸುವ ಆಸ್ತಿಗಳಲ್ಲಿ ಹೂಡಿಕೆ ಮಾಡಿ. ಉದಾಹರಣೆಗೆ ಮ್ಯೂಚುವಲ್‌ ಫಂಡ್, ಬಾಡಿಗೆಗೆ ನೀಡಿರುವ ಪ್ರಾಪರ್ಟಿಗಳು, ನಿವೇಶನ, ಕೃಷಿ ಭೂಮಿ, ಡಿವಿಡೆಂಡ್‌ ನೀಡುವ ಷೇರುಗಳು ಎಲ್ಲವೂ ಆದಾ ಸೃಷ್ಟಿಸುವ ಆಸ್ತಿಗಳಾಗಿವೆ.

ಮೂರನೆಯದಾಗಿ ನಿಮ್ಮ ಹೂಡಿಕೆಯ ನಿರ್ದಿಷ್ಟ ಭಾಗವನ್ನು ತುರ್ತು ಅಗತ್ಯ ವೆಚ್ಚಗಳನ್ನು ಈಡೇರಿಸಲು ನಿಗದಿಯಾಗಿರಲಿ. ದೊಡ್ಡ ಮೊತ್ತವು ದೀರ್ಘಕಾಲೀನ ಅಗತ್ಯಗಳನ್ನು ಪೂರೈಸಲು ಇರಲಿ. ಅಲ್ಪ ಕಾಲೀನ ಹೂಡಿಕೆಗಳು ಆದಾಯ ಸೃಷ್ಟಿಸುವಂತೆ ಇರಲಿ. ದೀರ್ಘಕಾಲೀನ ಹೂಡಿಕೆಗಳು ಮೌಲ್ಯವನ್ನು ಹೆಚ್ಚಿಸುವಂತಿರಲಿ.

ನಾಲ್ಕನೆಯದಾಗಿ ಖರ್ಚುಗಳನ್ನು ಮಾಡುವಾಗ ಸಾಕಷ್ಟು ಸಲ ಯೋಚಿಸಿ. ಲಭ್ಯವಿರುವ ಆಯ್ಕೆಗಳನ್ನೆಲ್ಲ ಪರಿಶೀಲಿಸಿ. ಆರ್ಥಿಕವಾಗಿ ಜಾಣ್ಮೆಯ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಐದನೆಯದಾಗಿ ಹೂಡಿಕೆ ವೈವಿಧ್ಯಮಯವಾಗಿರಲಿ. ಹಾಗಂತ ತೀರಾ ವೈವಿಧ್ಯಮಯವಾಗಿರಬೇಕಿಲ್ಲ. ಏಕೆಂದರೆ ಅದರಿಂದ ನಿಮ್ಮ ಹೂಡಿಕೆಯನ್ನು ನಗದೀಕರಿಸುವುದು ಕಷ್ಟವಾದೀತು.

ಆರನೆಯದಾಗಿ ಅಲ್ಪಕಾಲೀನ ಭವಿಷ್ಯವನ್ನು ಕಂಡುಕೊಂಡ ಬಳಿಕ ಸ್ವಲ್ಪ ರಿಸ್ಕ್‌ ತೆಗೆದುಕೊಂಡು ಹೂಡಿಕೆ ಮುಂದುವರಿಸಿ. ಸೇಫ್‌ ಇನ್ವೆಸ್ಟ್‌ ಮೆಂಟ್‌ಗಳು ಹೆಚ್ಚು ಆದಾಯವನ್ನು ಕೊಡುವುದಿಲ್ಲ. ರಿಸ್ಕ್‌ ಇದ್ದಲ್ಲಿ ರಿಟರ್ನ್‌ ಕೂಡ ಇರುತ್ತದೆ ಎಂಬುದನ್ನು ಮರೆಯಬಾರದು.

ಇದನ್ನೂ ಓದಿ: ITR filing online for AY 2023-24 : ವೇತನದಾರರಿಗೆ ಆನ್‌ಲೈನ್‌ನಲ್ಲಿ ಐಟಿ ರಿಟರ್ನ್ಸ್‌ ಸಲ್ಲಿಕೆಗೆ ಕಂಪ್ಲೀಟ್‌ ಗೈಡ್

ಏಳನೆಯದಾಗಿ ಸ್ವಂತ ಮನೆಯನ್ನು ಹೊಂದಿ. ಇದಕ್ಕಾಗಿ ಅಗತ್ಯವಿದ್ದರೆ ಗೃಹ ಸಾಲವನ್ನೂ ಪಡೆಯಿರಿ. ಸಾಕಷ್ಟು ಮೊತ್ತದ ವಿಮೆಯನ್ನೂ ಪಡೆಯಿರಿ. ಟರ್ಮ್‌ ಇನ್ಷೂರೆನ್ಸ್‌ ಮತ್ತು ಆರೋಗ್ಯ ವಿಮೆಯನ್ನು ತಪ್ಪದೆ ಖರೀದಿಸಿ. ಇಳಿ ವಯಸ್ಸಿನ ಆರ್ಥಿಕ ಭದ್ರತೆಗಾಗಿ ನ್ಯಾಶನಲ್‌ ಪೆನ್ಷನ್‌ ಸ್ಕೀಮ್‌, ಸಾರ್ವಜನಿಕ ಭವಿಷ್ಯನಿಧಿ (ಪಿಪಿಎಫ್)‌ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಿ. ನಿಮ್ಮ ವೈಯಕ್ತಿಕ ಹಣಕಾಸಿನ ಸಮಗ್ರ ಜವಾಬ್ದಾರಿಯನ್ನು ನೀವೇ ವಹಿಸಿಕೊಳ್ಳಿ. ಹಣವನ್ನು ನಿರ್ವಹಿಸುವ ಸಲುವಾಗಿ ಒಂದಷ್ಟು ಸಮಯವನ್ನು ನಿಗದಿಪಡಿಸಿ.

Exit mobile version