ನವದೆಹಲಿ: ಹಣಕಾಸು ಸಚಿವಾಲಯ ಉಚಿತ ಪಡಿತರ ಯೋಜನೆಯನ್ನು ಸೆಪ್ಟೆಂಬರ್ ಬಳಿಕ ಮುಂದುವರಿಸಲು ಹಣಕಾಸು ಸಚಿವಾಲಯ ಆಕ್ಷೇಪಿಸಿದೆ.
ಉಚಿತ ಪಡಿತರ ಯೋಜನೆಯ ವಿಸ್ತರಣೆ ಅಥವಾ ಯಾವುದೇ ಮಹತ್ತರ ತೆರಿಗೆ ಕಡಿತಕ್ಕೆ ಮುಂದಾದರೆ ಸರ್ಕಾರದ ವಿತ್ತೀಯ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹಣಕಾಸು ಸಚಿವಾಲಯ ಎಚ್ಚರಿಸಿದೆ.
ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (PMGKAY) ಕಳೆದ ಮಾರ್ಚ್‌ನಲ್ಲಿ ೬ ತಿಂಗಳಿಗೆ, ಅಂದರೆ ಸೆಪ್ಟೆಂಬರ್ ತನಕ ವಿಸ್ತರಿಸಿತ್ತು.
ಆಹಾರ ಸಬ್ಸಿಡಿ ೩.೭ ಲಕ್ಷ ಕೋಟಿ ರೂ.ಗೆ ಏರಿಕೆ ಸಂಭವ
ಸರ್ಕಾರ ೨೦೨೨-೨೩ರಲ್ಲಿ ಆಹಾರ ಸಬ್ಸಿಡಿ ಸಲುವಾಗಿ ಬಜೆಟ್‌ನಲ್ಲಿ ೨.೦೭ ಲಕ್ಷ ಕೋಟಿ ರೂ.ಗಳನ್ನು ಮಂಜೂರು ಮಾಡಿತ್ತು. ಸೆಪ್ಟೆಂಬರ್ ತನಕ ಪಿಎಂಜಿಕೆವೈ ಅನ್ನು ವಿಸ್ತರಿಸಿದ ಪರಿಣಾಮ ಆಹಾರ ಸಬ್ಸಿಡಿ ಬಿಲ್ ೨.೮೭ ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿತ್ತು. ಸೆಪ್ಟೆಂಬರ್ ಬಳಿಕ ಮತ್ತೆ ೬ ತಿಂಗಳಿಗೆ ವಿಸ್ತರಿಸಿದರೆ ೨೦೨೨-೨೩ರ ಆಹಾರ ಸಬ್ಸಿಡಿ ಬಿಲ್ ೩.೭ ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ಇದರಿಂದಾಗಿ ವಿತ್ತೀಯ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಹಣಕಾಸು ಸಚಿವಾಲಯ ಎಚ್ಚರಿಸಿದೆ.
ಹಣಕಾಸು ಸಚಿವಾಲಯ ಸಲ್ಲಿಸಿರುವ ಆಂತರಿಕ ಟಿಪ್ಪಣಿಯಲ್ಲಿ, ಉಚಿತ ಪಡಿತರ ವಿತರಣೆ, ರಸಗೊಬ್ಬರ ಸಬ್ಸಿಡಿ ಹೆಚ್ಚಳ, ಅಡುಗಡ ಅನಿಲಕ್ಕೆ ಸಬ್ಸಿಡಿ ಮರು ಜಾರಿ, ಪೆಟ್ರೋಲ್-ಡೀಸೆಲ್ ಮೇಲೆ ಅಬಕಾರಿ ಸುಂಕ ಕಡಿತ ಇತ್ಯಾದಿ ಕ್ರಮಗಳಿಂದ ವಿತ್ತೀಯ ಪರಿಸ್ಥಿತಿ ಮೇಲೆ ಒತ್ತಡ ಸೃಷ್ಟಿಸಲಿದೆ. ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದಿಂದ ೧ ಲಕ್ಷ ಕೋಟಿ ರೂ. ಕಂದಾಯ ನಷ್ಟವಗಲಿದೆ ಎಂದು ಹಣಕಾಸು ಸಚಿವಾಲಯ ಅಂದಾಜಿಸಿದೆ.
ಲಾಕ್ ಡೌನ್ ಸಂದರ್ಭ ಜಾರಿಗೊಳಿಸಿದ್ದ ಉಚಿತ ಪಡಿತರ
ಕೋವಿಡ್-೧೯ ಹತ್ತಿಕ್ಕಲು ೨೦೨೦ರ ಮಾರ್ಚ್ ೧೯ರಂದು ಮೊದಲ ಲಾಕ್ ಡೌನ್ ಘೋಷಿಸಿದ ಸಂದರ್ಭ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಆರಂಭಿಸಲಾಗಿತ್ತು. ಈ ಯೋಜನೆಯ ಅಡಿಯಲ್ಲಿ ೫ ಕೆ.ಜಿ ಉಚಿತ ಅಕ್ಕಿ ಅಥವಾ ಗೋಧಿ ಮತ್ತು ೧ ಕೆಜಿ ಬೇಳೆಕಾಳನ್ನು ೮೧ ಕೋಟಿ ಜನತೆಗೆ ಪ್ರತಿ ತಿಂಗಳು ವಿತರಿಸಲಾಯಿತು.