Site icon Vistara News

Financial literacy : ಹಣಕಾಸು ಶಿಕ್ಷಣ ಯಾಕೆ ಮುಖ್ಯ, ಉಳಿತಾಯಗಾರರಿಗೆ ಏಕೆ ನಷ್ಟವಾಗುತ್ತಿದೆ?

Cash

ಹಣಕಾಸು ಶಿಕ್ಷಣಕ್ಕೆ ಹಣಕಾಸು ಸಾಕ್ಷರತೆ ಮುಖ್ಯ. ನೀವು (Financial literacy ) ರಿಚ್‌ ಡ್ಯಾಡ್‌ ಪೂರ್‌ ಡ್ಯಾಡ್‌ ಕೃತಿಯನ್ನು ಓದಿರಬಹುದು. ಅದರಲ್ಲಿ ಆರಂಭದಲ್ಲೇ ಹಣಕಾಸು ಶಿಕ್ಷಣದ ಮಹತ್ತ್ವವನ್ನು ವಿವರಿಸಲಾಗಿದೆ. ಅದರ ಕೊರತೆಯಿಂದ ಔಪಚಾರಿಕ ಶಿಕ್ಷಣ ಪಡೆದವರೂ ಹೇಗೆ ಶ್ರೀಮಂತಿಕೆಯಿಂದ ವಂಚಿತರಾಗುತ್ತಾರೆ ಎಂಬುದನ್ನೂ, ಔಪಚಾರಿಕ ಶಿಕ್ಷಣದ ಕೊರತೆ ಇದ್ದರೂ, ಹಣಕಾಸು ವಿಚಾರಗಳಲ್ಲಿ ಜಾಣ್ಮೆ ಇರುವ ವ್ಯಕ್ತಿ ಹೇಗೆ ಸಿರಿವಂತನಾಗುತ್ತಾನೆ ಎಂಬುದನ್ನೂ ವಿವರಿಸಲಾಗಿದೆ.

ಹಣಕಾಸು ಶಿಕ್ಷಣದಲ್ಲಿ ಹಣದ ಹರಿವು (Cash flow) ಬಗ್ಗೆ ತಿಳಿಯುವುದು ಅತ್ಯಂತ ಮುಖ್ಯ. ಬಡವರು ಮತ್ತು ಮಧ್ಯಮ ವರ್ಗದ ಜನರು ಏಕೆ ಬಡವರಾಗಿಯೇ ಉಳಿಯುತ್ತಾರೆ ಎಂದರೆ, ಹಣಕಾಸು ಶಿಕ್ಷಣದ ಕೊರತೆಯ ಪರಿಣಾಮ ಅವರು ಹಣದ ಹರಿವಿನ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ತಮ್ಮ ಜೇಬಿನಿಂದ ಹೊರ ಹೋಗುವ ಹಣದ ಮೇಲೆ ಅವರಿಗೆ ಹಿಡಿತ ಇರುವುದಿಲ್ಲ. ಜೇಬಿನಿಂದ ಹಣವು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ, ಹೂಡಿಕೆಯ ರೂಪದಲ್ಲಿ ಷೇರು ಮಾರುಕಟ್ಟೆಗೆ, ಸಾಲದ ಮರು ಪಾವತಿ ವಿಚಾರದಲ್ಲಿ ಬ್ಯಾಂಕಿಗೆ ಹೋಗುತ್ತಿರುತ್ತದೆ. ಮನೆ, ಕಾರು, ಕ್ರೆಡಿಟ್‌ ಕಾರ್ಡ್‌ ಎಂದು ಸಾಲ ಬೆಳೆಯುತ್ತದೆ. ಆದರೆ ಇವೆಲ್ಲ ಹಣದ ಹರಿವಿನ ಮೇಲೆ ಹಿಡಿತ ಸಾಧಿಸಬೇಕು. ಆಗ ಶ್ರೀಮಂತಿಕೆ ಬರುತ್ತದೆ.

ಅಮೆರಿಕ ಮೊದಲಾದ ಶ್ರೀಮಂತ ದೇಶಗಳಲ್ಲಿ ತೆರಿಗೆ ರೂಪದಲ್ಲಿ ಸಂಗ್ರಹವಾದ ಹಣವನ್ನು (Tax dollars) ಶ್ರೀಮಂತರು ಬಳಸುತ್ತಾರೆ. ಅರೆ, ಇದು ಹೇಗೆ ಎನ್ನುತ್ತೀರಾ? ಶ್ರೀಮಂತರು ಬ್ಯಾಂಕ್‌ಗಳಿಣಂದ ಸಾಲ ಪಡೆಯಲು ಹಿಂದೇಟು ಹಾಕುವುದಿಲ್ಲ. ಸಾಲವನ್ನು ಪಡೆದು ಆಸ್ತಿಗಳನ್ನು ಮಾಡುತ್ತಾರೆ. ಅದು ಬ್ಯಾಂಕಿನ ಹಣ. ಅದರಲ್ಲಿ ಶ್ರೀಮಂತರು ಅಸೆಟ್‌ ಖರೀದಿಸುತ್ತಾರೆ. ಮತ್ತಷ್ಟು ಸಿರಿವಂತರಾಗುತ್ತಾರೆ. ಅಲ್ಲಿ ಶ್ರೀಮಂತರು ತಮ್ಮ ಉಳಿತಾಯದ ಹಣವನ್ನು ಷೇರು ಪೇಟೆಯಲ್ಲಿ ಹಾಕದೆ, ಮತ್ತಷ್ಟು ಆಸ್ತಿಗಳನ್ನು ಗಳಿಸಲು ವಿನಿಯೋಗಿಸುತ್ತಾರೆ. ಆದರೆ ಇದಕ್ಕೆಲ್ಲ ಹಣಕಾಸು ಶಿಕ್ಷಣ ಮುಖ್ಯವಾಗುತ್ತದೆ.

ಇದನ್ನೂ ಓದಿ: Money Guide: ಹೋಮ್‌ಲೋನ್‌ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ

ಹಣದ ಬಗ್ಗೆ ನಿಮಗೆ ಶಾಲೆಗಳಲ್ಲಿ ಏನನ್ನು ಕಲಿಸಿದ್ದಾರೆ? ಬಹುತೇಕ ಮಂದಿಯ ಉತ್ತರ- ಏನೂ ಇಲ್ಲ ಎಂಬುದೇ ಆಗಿರುತ್ತದೆ. ಅವರು ಏನಾದರೂ ಕಲಿತಿದ್ದರೆ-ಶಾಲೆಗೆ ಹೋಗು-ಚೆನ್ನಾಗಿ ಕಲಿ-ಉದ್ಯೋಗ ಗಿಟ್ಟಿಸು- ಮನೆ, ಕಾರು ಖರೀದಿಸು- ಸಾಲದಿಂದ ಮುಕ್ತನಾಗು- ದೀರ್ಘಕಾಲೀನ ಹೂಡಿಕೆಗೆ ಸ್ಟಾಕ್ಸ್‌ಗಳಲ್ಲಿ ಒಂದಷ್ಟು ಹಣ ಹೂಡಿಕೆ ಮಾಡು. ಇಷ್ಟೇ ಆಗಿರುತ್ತದೆ.

ಆದರೆ ಜಾಗತೀಕರಣದ ಯುಗದಲ್ಲಿ ಅನಿಶ್ಚಿತತೆಯೇ ಸಾಮಾನ್ಯ ಎನ್ನಿಸಿದೆ. ಉದ್ಯೋಗದಲ್ಲಿ ಸ್ಥಿರತೆಯನ್ನು ನಿರೀಕ್ಷಿಸಲಾಗದು. ರೊಬಾಟ್‌ಗಳೂ, ಎಐ ತಂತ್ರಜ್ಞಾನಗಳೂ ಅಧಿಕ ಸಂಬಳದ ವೈಟ್‌ ಕಾಲರ್ ಉದ್ಯೋಗಗಳನ್ನು ಕಸಿದುಕೊಳ್ಳಬಹುದು. ವೈದ್ಯರು, ವಕೀಲರು, ಅಕೌಂಟೆಂಟ್‌ಗಳೂ, ಉತ್ಪಾದನಾ ವಲಯದ ನೂರಾರು ಹುದ್ದೆಗಳಲ್ಲಿ ಇರುವವರೂ ರೊಬಾಟ್‌ ತಂತ್ರಜ್ಞಾನದ ಬೆಳವಣಿಗೆಯಿಂದ ತಮ್ಮ ಉದ್ಯೋಗಕ್ಕೆ ಏನಾದರೂ ತೊಂದರೆ ಇದೆಯೇ ಎಂದು ಆತಂಕಪಡುವ ಸ್ಥಿತಿ ಉಂಟಾಗಿದೆ. ರೊಬಾಟ್‌ಗಳಿಗೆ ಸಂಬಳ ಬೇಡ, ಬೋನಸ್‌ ಬೇಡ, ಬಡ್ತಿ ಬೇಡ, ವೈದ್ಯಕೀಯ ಬೆನಿಫಿಟ್‌ ಬೇಡ. ನಿವೃತ್ತಿಯ ಪ್ಲಾನ್‌ ಕೂಡ ಅಗತ್ಯವಿಲ್ಲ.

ಹೀಗಿರುವಾಗ ಶಾಲೆಗೆ ಹೋಗು-ಕಲಿ-ಉದ್ಯೋಗ ಪಡೆದು ಬದುಕು ಎಂಬ ಹಿತವಚನ ಪ್ರಸ್ತುತ ಎನ್ನಿಸದು. ಕಾಲೇಜುಗಳಲ್ಲಿ ಸಾಲದ ಮೂಲಕ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಭಾರಿ ಸಂಬಳದ ಉದ್ಯೋಗ ಸಿಗದೆ ಪಡಿಪಾಟಲು ಅನುಭವಿಸುತ್ತಿರುವ ನಿದರ್ಶನಗಳೂ ಇವೆ.

ಉಳಿತಾಯಗಾರರಿಗೆ ನಷ್ಟ: ನೀವು ಗಮನಿಸಿರಬಹುದು, 90ರ ದಶಕದಲ್ಲಿ ಬ್ಯಾಂಕ್‌ಗಳಲ್ಲಿ ಫಿಕ್ಸೆಡ್‌ ಡೆಪಾಸಿಟ್‌ ಮೇಲೆ 10% ಬಡ್ಡಿ ಸಿಗುತ್ತಿತ್ತು. ಆದರೆ ಈಗ 6-7% ಸಿಕ್ಕಿದರೆ ಹೆಚ್ಚು ಎಂಬಂತಾಗಿದೆ. ಮತ್ತೊಂದು ಕಡೆ ಹಣದುಬ್ಬರವೂ ಕಾಡುತ್ತಿದೆ. ಹೀಗಾಗಿ ಬ್ಯಾಂಕ್‌ ಫಿಕ್ಸೆಡ್‌ ಡೆಪಾಸಿಟ್‌ ಯೋಜನೆಗಳಲ್ಲಿ ಇಡು ಹಣ ನಿರೀಕ್ಷಿತ ಮಟ್ಟದಲ್ಲಿ ಬೆಳೆಯುವುದಿಲ್ಲ. ಉಳಿತಾಯಗಾರರ ಹಣ ಸೊರಗುತ್ತಿದೆ.

Exit mobile version