Site icon Vistara News

Financial statement : ಕಂಪನಿಗಳ ಬ್ಯಾಲೆನ್ಸ್‌ಶೀಟ್‌ನಲ್ಲಿ ಏನೇನಿರುತ್ತದೆ, ಷೇರು ಹೂಡಿಕೆದಾರರು ಏಕೆ ಓದಬೇಕು?

stock invest

ಷೇರು ವಿನಿಮಯ ಕೇಂದ್ರದಲ್ಲಿ ನೋಂದಣಿಯಾಗಿರುವ ಪ್ರತಿಯೊಂದು ಕಂಪನಿಯೂ ತನ್ನ ಬಿಸಿನೆಸ್‌ಗೆ ಸಂಬಂಧಿಸಿ ಬ್ಯಾಲೆನ್ಸ್‌ಶೀಟ್‌ ಅನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕಾಗುತ್ತದೆ. ( Financial statement ) ಕ್ರಮಬದ್ಧ ಕಂಪನಿಗಳು ತಮ್ಮ ಪ್ರಾಫಿಟ್‌ & ಲಾಸ್‌ ಅಕೌಂಟ್‌ ಮತ್ತು ಬ್ಯಾಲೆನ್ಸ್‌ ಶೀಟ್‌ ಎಂಬ ಎರಡು ಫೈನಾನ್ಸಿಯಲ್‌ ಸ್ಟೇಟ್‌ಮೆಂಟ್‌ಗಳನ್ನು ಸಿದ್ಧಪಡಿಸುತ್ತದೆ. ಹಾಗಾದರೆ ಇದರ ಬಗ್ಗೆ ತಿಳಿಯೋಣ. ಪ್ರಾಫಿಟ್‌ & ಲಾಸ್‌ ಅಕೌಂಟ್‌, ಕಂಪನಿ ಅಥವಾ ಸಂಸ್ಥೆಯ ಆದಾಯ ಮತ್ತು ಖರ್ಚು ವೆಚ್ಚಗಳು ಎಷ್ಟೆಂಬುದನ್ನು ತಿಳಿಸುತ್ತದೆ. ಬ್ಯಾಲೆನ್ಸ್‌ ಶೀಟ್‌ ಕಂಪನಿಯ ಆಸ್ತಿಗಳು ಮತ್ತು ಖರ್ಚು ವೆಚ್ಚಗಳು ಎಷ್ಟೆಂಬುದನ್ನು ತಿಳಿಸುತ್ತದೆ. ಕಂಪನಿಯ ಆಸ್ತಿಗಳು ಮತ್ತು ಲಾಯಬಿಲಿಟೀಸ್‌ ಅಥವಾ ಉತ್ತರದಾಯಿತ್ವವನ್ನು, ಅಂದರೆ ಸಾಲ, ಋಣ ಬಾಧ್ಯತೆಗಳ ವಿವರಗಳನ್ನು ಕೂಡ ಒಳಗೊಂಡಿರುತ್ತದೆ.

ಪ್ರಾಫಿಟ್ & ಲಾಸ್ ಅಕೌಂಟ್, ಕಂಪನಿ ನಷ್ಟದಲ್ಲಿ ಇದೆಯೇ ಅಥವಾ ಲಾಭದಲ್ಲಿ ಇದೆಯೇ ಎಂಬುದನ್ನು ತಿಳಿಸುತ್ತದೆ. ಖರ್ಚಿಗಿಂತ ಜಾಸ್ತಿ ಆದಾಯ ಸಿಕ್ಕಿದಾಗ ಸಂಸ್ಥೆಯ ಲಾಭ ಹೆಚ್ಚುತ್ತದೆ. ಆದರೆ ಆದಾಯಕ್ಕಿಂತ ಖರ್ಚು ಹೆಚ್ಚಾದಾಗ ಸಂಸ್ಥೆ ನಷ್ಟಕ್ಕೀಡಾಗುತ್ತದೆ.
ಕಂಪನಿಯೊಂದಕ್ಕೆ ಖರ್ಚುಗಳು ಹಲವಾರು ಲೆಕ್ಕದಲ್ಲಿ ಇರುತ್ತದೆ. ಕಚ್ಚಾ ವಸ್ತುಗಳ ಖರೀದಿ, ಸಿಬ್ಬಂದಿ ವೇತನ, ಪ್ರಯಾಣದ ಖರ್ಚು, ಆಡಳಿತಾತ್ಮಕ ಖರ್ಚು, ಸಾಲದ ಬಡ್ಡಿ ಪಾವತಿಗೆ ಹಣ ಖರ್ಚಾಗುತ್ತದೆ. ಕಂಪನಿಗೆ ತನ್ನ ಉತ್ಪನ್ನ ಅಥವಾ ಸೇವೆಯ ಮಾರಾಟದ ಮೂಲಕ ಆದಾಯ ಸಿಗುತ್ತದೆ. ಕಂಪನಿಯ ಪ್ರಮುಖ ಅಥವಾ ಕೋರ್ ಆಕ್ಟಿವಿಟೀಸ್‌ಗಳಿಂದ ಅದು ಬರುತ್ತದೆ. ಇತರ ಮೂಲಗಳಿಂದ ಕಂಪನಿ ಪಡೆಯುವ ಆದಾಯವನ್ನು ಇತರ ಆದಾಯ ಅಥವಾ Other income ಎನ್ನುತ್ತಾರೆ. ಕಂಪನಿಗೆ ತನ್ನ ಕೋರ್ ಆಕ್ಟಿವಿಟಿಗಳಿಂದ ಹೆಚ್ಚು ಆದಾಯ ಬರುತ್ತಿದ್ದರೆ, ಅದರ ಆರೋಗ್ಯ ಚೆನ್ನಾಗಿದೆ ಎಂದರ್ಥ. ಆದರೆ ಕಂಪನಿಯು ತನ್ನ ಆದಾಯಕ್ಕಾಗಿ ಇತರ ಮೂಲಗಳನ್ನೇ ಅವಲಂಬಿಸಿದೆ ಎಂದರೆ ಷೇರು ಹೂಡಿಕೆದಾರರು ಆಗ ಆಲೋಚಿಸಬೇಕಾಗುತ್ತದೆ.

ಬ್ಯಾಲೆನ್ಸ್‌ಶೀಟ್‌ನಲ್ಲಿ ಏನೇನಿರುತ್ತದೆ? ಒಂದು ಕಂಪನಿಯ ಬ್ಯಾಲೆನ್ಸ್ ಶೀಟ್‌ ನಲ್ಲಿ ( balance sheet) ಲಾಯಬಿಲಿಟೀಸ್ ಅಥವಾ ಉತ್ತರದಾಯಿತ್ವ ಮತ್ತು ಅಸೆಟ್ ಅಥವಾ ಆಸ್ತಿ ಎಂಬ ಎರಡು ವಿಭಾಗಗಳಿರುತ್ತದೆ. ಲಾಯಬಿಲಿಟೀಸ್‌ ನಲ್ಲಿ ಕಂಪನಿಯ ಬಂಡವಾಳ, ಸಾಲ, ಹಾಲಿ ಇರುವ ಸಾಲ, ಬ್ಯಾಂಕ್ ಓವರ್ ಡ್ರಾಫ್ಟ್ ವಿವರ ಇರುತ್ತದೆ. ಮತ್ತೊಂದು ವಿಭಾಗದಲ್ಲಿ ಫಿಕ್ಸೆಡ್ ಅಸೆಟ್, ಭೂಮಿ, ಕಟ್ಟಡಗಳು, ಯಂತ್ರೋಪಕರಣಗಳು, ಬ್ಯಾಂಕ್ ಬ್ಯಾಲೆನ್ಸ್, ಇನ್ವೆಂಟರಿಗಳ ವಿವರಗಳು ಇರುತ್ತವೆ.
ಕಂಪನಿಯು ತನ್ನ ಮಾಲೀಕರಿಂದ ಎರವಲು ಪಡೆಯುವ ಹಣ ಬಂಡವಾಳವಾಗಿದ್ದರೆ, ಹೊರಗಿನಿಂದ ಪಡೆಯುವ ಹಣ ಸಾಲವಾಗುತ್ತದೆ. ಬ್ಯಾಲೆನ್ಸ್‌ ಶೀಟ್‌ನ ಲಾಯಬಿಲಿಟಿಸ್ ವಿಭಾಗದಲ್ಲಿ ಇವೆರಡೂ ಇರುತ್ತವೆ. ಪೂರೈಕೆದಾರರು ಮತ್ತು ವೆಂಡರ್ಸ್ ಕೂಡ ಸಾಮಗ್ರಿ, ಸೇವೆಗಳ ಖರೀದಿಗೆ ಸಾಲ ಮಾಡಿರಬಹುದು. ಅದೂ ಲಾಯಬಿಲಿಟಿಸ್ ವ್ಯಾಪ್ತಿಗೆ ಬರುತ್ತದೆ.

ಅಸೆಟ್ಸ್ ಎಂದರೆ ನಿಮ್ಮಲ್ಲಿ ಇರುವಂಥದ್ದು. ಸಾಲ ಮಾಡಿ ತಂದಿರುವುದು ಕೂಡ ಅಸೆಟ್ ಅಥವಾ ಆಸ್ತಿ ಎನ್ನಿಸುತ್ತದೆ. ಆಸ್ತಿಗಳಲ್ಲಿ ಕಟ್ಟಡಗಳು, ಯಂತ್ರೋಪಕರಣಗಳು, ವಾಹನಗಳು ಫಿಕ್ಸೆಡ್ ಅಸೆಟ್ ವ್ಯಾಪ್ತಿಗೆ ಬರುತ್ತದೆ. ಅಸೆಟ್‌ನಲ್ಲಿ ಕರೆಂಟ್ ಅಸೆಟ್ಸ್ ಎಂಬ ವಿಧವಿದೆ. ಇದರಲ್ಲಿ ಸಾಮಾಗ್ರಿಗಳು, ನಗದು, ಬ್ಯಾಂಕ್ ಬ್ಯಾಲೆನ್ಸ್ ಮತ್ತು ಸಾಲಗಳು ಬರುತ್ತದೆ.
ಕಂಪನಿಗಳಲ್ಲಿ ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್ ಆಂಡ್ ಲಾಸ್ ಅಕೌಂಟ್‌ಗಳನ್ನು ಚಾರ್ಟರ್ಡ್ ಅಕೌಂಟೆಂಟ್‌ಗಳು ಸಿದ್ಧಪಡಿಸುತ್ತಾರೆ. ಹೀಗಿದ್ದರೂ, ಬಿಸಿನೆಸ್ ಮ್ಯಾನೇಜ್ ಮಾಡುವವರು ಈ ಸ್ಟೇಟ್‌ ಮೆಂಟ್‌ಗಳನ್ನು ತಿಳಿದುಕೊಳ್ಳಬೇಕು.
ಬ್ಯಾಲೆನ್ಸ್‌ ಶೀಟ್ ಓದಲು ಬಲ್ಲವರು ಅದನ್ನು ಮಾಡಲೂ ತಿಳಿದುಕೊಂಡಿರಬೇಕು ಎಂಬ ಮಾತಿದೆ. ಆದರೆ ಅದು ಸರಿಯಲ್ಲ. ಬ್ಯಾಲೆನ್ಸ್ ಶೀಟ್ ಮಾಡುವುದು ಹೇಗೆ ಎಂದು ಗೊತ್ತಿರದಿದ್ದರೂ, ಅದನ್ನು ಓದಲು ಹಾಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ನೀವು ಕಂಪನಿಗಳ ಪ್ರಾಫಿಟ್ ಆಂಡ್ ಲಾಸ್ ಅಕೌಂಟ್ ಹಾಗೂ ಬ್ಯಾಲೆನ್ಸ್ ಶೀಟ್ ಅನ್ನು ಸರಳವಾಗಿ ಹಾಗೂ ಅರ್ಥವಾಗುವಂತೆ ಓದಿದರೆ ಸಾಕು, ಕಂಪನಿಯ ಆರೋಗ್ಯ ಹೇಗೆ ಇದೆ ಎಂಬುದು ಗೊತ್ತಾಗುತ್ತದೆ. ಒಂದು ವೇಳೆ ಕಂಪನಿ ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿದ್ದರೆ, ಷೇರು ಹೂಡಿಕೆದಾರರು ಬ್ಯಾಲೆನ್ಸ್ ಶೀಟ್ ಓದಿ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Money Guide: ಹೋಮ್‌ಲೋನ್‌ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ

ಷೇರುದಾರರು ಏಕೆ ಬ್ಯಾಲೆನ್ಸ್‌ಶೀಟ್‌ ಓದಬೇಕು? ಕಂಪನಿಗಳ ಷೇರುಗಳನ್ನು ಖರೀದಿಸುವವರು, ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು, ಕಾರ್ಪೊರೇಟ್‌ ಬಾಂಡ್‌ಗಳನ್ನು ಖರೀದಿಸುವವರು, ಕಂಪನಿಗಳ ಬ್ಯಾಲೆನ್ಸ್‌ ಶೀಟ್‌ ಅನ್ನು ಓದಬೇಕು. ಇದರಿಂದ ಕಂಪನಿಯ ಆರ್ಥಿಕ ಆರೋಗ್ಯ ತಿಳಿಯುತ್ತದೆ. ಕಂಪನಿಯು ಸದ್ಯದ ಹಾಗೂ ದೀರ್ಘಕಾಲೀನ ನಿರ್ವಹಣೆಯನ್ನು ಮಾಡಬಲ್ಲುದೇ, ಸಾಲಗಳನ್ನು ಮರು ಪಾವತಿಸಬಲ್ಲುದೇ? ಸಾಲ ಎಷ್ಟಿದೆ? ಕಂಪನಿಯ ಆದಾಯ ಹೇಗಿದೆ ಎಂಬಿತ್ಯಾದಿ ಅಮೂಲ್ಯ ವಿವರಗಳು ಲಭಿಸುತ್ತವೆ. ತಮ್ಮ ಹೂಡಿಕೆ ಕಂಪನಿಯ ಯಾವ ವೆಚ್ಚಕ್ಕಾಗಿ ಬಳಕೆಯಾಗುತ್ತದೆ ಹಾಗೂ ಮತ್ತದರ ಭವಿಷ್ಯವೇನು ಎಂಬುದು ಗೊತ್ತಾಗುತ್ತದೆ.

ನೀವು ನಿಮ್ಮ ಹಣಕಾಸು ವಿಚಾರಕ್ಕೆ ಸಂಬಂಧಿಸಿ ಕೂಡ ಪರ್ಸನಲ್ ಬ್ಯಾಲೆನ್ಸ್ ಶೀಟ್ ಅನ್ನು ಸಿದ್ಧಪಡಿಸಿದರೆ ಅತ್ಯಂತ ಉಪಯುಕ್ತವಾಗುತ್ತದೆ. ಇದು ನಿಮ್ಮದೇ ಫೈನಾನ್ಸ್‌ಗೆ ಸ್ಪಷ್ಟವಾದ ಚೌಕಟ್ಟನ್ನು ನೀಡುತ್ತದೆ. ( Financial statement ) ನಿಮ್ಮ ಹೂಡಿಕೆ, ಖರೀದಿಸಿದ ಆಸ್ತಿ, ಸಂಪತ್ತಿನ ಮೇಲೆ ನಿಮ್ಮ ಹಿಡಿತವನ್ನು ಖಚಿತಗೊಳಿಸುತ್ತದೆ. ನಿಮ್ಮ ಹಣದ ನಿರ್ವಹಣೆಯನ್ನು ಸುಧಾರಿಸುತ್ತದೆ.

Exit mobile version