Site icon Vistara News

Airbus A380 | ಎಮಿರೇಟ್ಸ್‌ನಿಂದ ಬೆಂಗಳೂರಿಗೆ ಮೊದಲ ಬಾರಿಗೆ ಏರ್‌ಬಸ್‌ ಎ380 ಹಾರಾಟ

emirates airbus

ಬೆಂಗಳೂರು: ದುಬೈ ಮೂಲದ ಎಮಿರೇಟ್ಸ್‌ ಏರ್‌ಲೈನ್‌, ಬೆಂಗಳೂರಿಗೆ ಅಕ್ಟೋಬರ್‌ ೩೦ರಿಂದ ವಿಶ್ವದಲ್ಲೇ ಅತಿ ದೊಡ್ಡ ವಿಮಾನ ಎಂದೇ ಖ್ಯಾತವಾಗಿರುವ ಏರ್‌ಬಸ್‌ ಎ೩೮೦ (Airbus A380 ) ಹಾರಾಟವನ್ನು ಮೊಟ್ಟ ಮೊದಲ ಬಾರಿಗೆ ಆರಂಭಿಸಲಿದೆ. ಮುಂಬಯಿ ಬಳಿಕ ಎರಡನೇ ನಗರವಾಗಿ ಬೆಂಗಳೂರಿಗೆ ಏರ್‌ ಬಸ್‌ ಎ೩೮೦ ವಿಮಾನದ ಹಾರಾಟವನ್ನು ಎಮಿರೇಟ್ಸ್‌ ಏರ್‌ಲೈನ್‌ ಆರಂಭಿಸುತ್ತಿದೆ.

ಬೆಂಗಳೂರಿನಿಂದ ದುಬೈಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಈ ದಿಗ್ಗಜ, ಐಷಾರಾಮಿ, ಜಂಬೊ ಜೆಟ್ ವಿಮಾನದ ಅನುಕೂಲ ಸಿಗಲಿದೆ.‌ ಅಕ್ಟೋಬರ್‌ ೩೦ರ ಭಾನುವಾರ ಮೊದಲ ಬಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಏರ್‌ಬಸ್‌ ೩೮೦ ಬಂದಿಳಿಯಲಿದೆ.

ವಿಮಾನವನ್ನು ಮೇಲ್ದರ್ಜೆಗೆ ಏರಿಸುವುದರಿಂದ ಪ್ರಯಾಣಿಕರಿಗೆ ಪ್ರಯಾಣದ ಅನುಭವ ಹೆಚ್ಚು ಸುಧಾರಿತವಾಗಲಿದೆ. ಎಮಿರೇಟ್ಸ್‌ ಏರ್‌ಲೈನ್‌ ೩೦ಕ್ಕೂ ಹೆಚ್ಚು ಏರ್‌ಪೋರ್ಟ್‌ಗಳಿಗೆ ಎ೩೮೦ ವಿಮಾನ ಹಾರಾಟವನ್ನು ಕಲ್ಪಿಸಿದೆ. ೧೩೦ಕ್ಕೂ ಹೆಚ್ಚು ಸ್ಥಳಗಳಿಗೆ ಏರ್‌ಲೈನ್‌ ವಿಮಾನ ಹಾರಾಟ ಸಂಪರ್ಕವನ್ನು ಒದಗಿಸುತ್ತಿದೆ.

ಏರ್‌ಬಸ್‌ ಎ೩೮೦ ವಿಮಾನವು ಎಕಾನಮಿ, ಬಿಸಿನೆಸ್‌ ಮತ್ತು ಫಸ್ಟ್‌ ಕ್ಲಾಸ್‌ ದರ್ಜೆಯ ಪ್ರಯಾಣ ವ್ಯವಸ್ಥೆಯನ್ನು ಗ್ರಾಹಕರಿಗೆ ಒದಗಿಸುತ್ತದೆ.

ದಿನಕ್ಕೆ ಒಂದು ಸಲ ಈ ಏರ್‌ಬಸ್‌ ಎ೩೮೦ ವಿಮಾನದ ಹಾರಾಟ ದುಬೈ-ಬೆಂಗಳೂರು ನಡುವೆ ನಡೆಯಲಿದೆ. ದುಬೈ ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌ನಿಂದ ( DXB) ಸ್ಥಳೀಯ ಕಾಲಮಾನ ಪ್ರಕಾರ ರಾತ್ರಿ ೯.೨೫ಕ್ಕೆ ಹೊರಟು, ಬೆಂಗಳೂರಿಗೆ ಸ್ಥಳೀಯ ಕಾಲಮಾನ ಪ್ರಕಾರ ಬೆಳಗ್ಗಿನ ಜಾವ 2.30ಕ್ಕೆ ತಲುಪಲಿದೆ. ಸ್ಥಳೀಯ ಕಾಲಮಾನ ಪ್ರಕಾರ ೪.೩೦ಕ್ಕೆ ಮತ್ತೆ ಹೊರಟು ದುಬೈಗೆ ಸ್ಥಳೀಯ ಕಾಲಮಾನ ಪ್ರಕಾರ ಬೆಳಗ್ಗೆ ೭.೧೦ಕ್ಕೆ ತಲುಪಲಿದೆ.

ದುಬೈನಿಂದ ಮುಂಬಯಿ ಮಾರ್ಗವಾಗಿ ೨೦೧೪ರಿಂದಲೇ ಎನಿರೇಟ್ಸ್‌ ಎ೩೮೦ ಹಾರಾಟ ನಡೆಯುತ್ತಿದೆ. ಇದೀಗ ದುಬೈ-ಬೆಂಗಳೂರು ನಡುವೆಯೂ ಪ್ರಯಾಣಿಕರಿಗೆ ಈ ಸೌಲಭ್ಯ ಸಿಗಲಿದೆ ಎಂದು ಏರ್‌ಲೈನ್‌ ತಿಳಿಸಿದೆ. ಬೆಂಗಳೂರಿನ ಗ್ರಾಹಕರಿಗೆ ೨೦೦೬ರಿಂದ ಎಮಿರೇಟ್ಸ್‌ ಸೇವೆ ಲಭ್ಯವಿದೆ.

ಟಿಕೆಟ್‌ ದರ ಎಷ್ಟು?

ಪ್ರಸ್ತುತ ದುಬೈನಿಂದ ಬೆಂಗಳೂರಿಗೆ ೪೦೦-೬೦೦ ದಿರ್ಹಾಮ್ಸ್‌ (೮,೬೨೬-೧೦,೭೮೨ ರೂ.) ಇದೆ. ಎಮಿರೇಟ್ಸ್‌ನಲ್ಲಿ ಎಕಾನಿಮಿ ದರ್ಜೆಯ ಸೀಟ್‌ಗೆ ೯೦೦ ದಿರ್ಹಾಮ್ಸ್‌ (೧೯,೪೦೮ ರೂ.) ದರ ಇದೆ.

ನವೆಂಬರ್‌ ೧ರಿಂದ ಎ೩೮೦ ಹಾರಾಟ ಆರಂಭವಾದ ಬಳಿಕ ಎಕಾನಮಿ ಟಿಕೆಟ್‌ ದರ ೮೧೫ ದಿರ್ಹಾಮ್ಸ್‌ಗೆ (೧೭,೫೭೫ ರೂ.) ಇಳಿಕೆಯಾಗುವ ನಿರೀಕ್ಷೆ ಇದೆ. ದುಬೈ-ಬೆಂಗಳೂರು ನಡುವೆ ಹಾರಾಟ ನಡೆಸಲಿರುವ ಈ ಏರ್‌ಬಸ್‌ ೩೮೦ ವಿಮಾನಕ್ಕೆ EK568/569 ಎಂಬ ಹೆಸರಿದೆ. ವಿಶ್ವದ ಅತಿ ದೊಡ್ಡ ವಿಮಾನ ಬೆಂಗಳೂರಿನ ನೆಲವನ್ನು ಸ್ಪರ್ಶಿಸುವ ಕ್ಷಣಗಳನ್ನು ಕುತೂಹಲಿಗಳು ಕಾಯುತ್ತಿದ್ದಾರೆ.

ವಿಶ್ವದ ಅತಿ ದೊಡ್ಡ ವಿಮಾನ ಖ್ಯಾತಿಯ ಏರ್‌ಬಸ್‌ ಎ೩೮೦ರಲ್ಲಿ ಏನೇನಿದೆ?

Exit mobile version