ಅಹಮದಾಬಾದ್: ಇದೇ ಮೊದಲ ಬಾರಿಗೆ ಅಂಚೆ ಇಲಾಖೆ ಗುಜರಾತ್‌ನಲ್ಲಿ ದ್ರೋನ್ ಮೂಲಕ ಪಾರ್ಸೆಲ್ ಅನ್ನು ರವಾನಿಸಿದೆ.
ರಾಜ್ಯದ ಕಛ್ ಜಿಲ್ಲೆಯಲ್ಲಿ ಈ ಪ್ರಯೋಗ ನಡೆಸಲಾಗಿದೆ. 46 ಕಿ.ಮೀ ದೂರವನ್ನು 30 ನಿಮಿಷಗಳಲ್ಲಿ ಡ್ರೋನ್ ಕ್ರಮಿಸಿ ಪಾರ್ಸೆಲ್ ಒಂದನ್ನು ರವಾನಿಸಿದೆ. ಭುಜ್ ತಾಲ್ಲೂಕಿನ ಹಬೇ ಗ್ರಾಮದಿಂದ ಭಾಚು ತಾಲ್ಲೂಕಿನ ನೆರ್ ಗ್ರಾಮಕ್ಕೆ ಡ್ರೋನ್ ಮೂಲಕ ಪತ್ರವನ್ನು ರವಾನಿಸಲಾಯಿತು.
ಇದು ಪ್ರಾಯೋಗಿಕ ಹಂತವಾಗಿದ್ದು, ಇದರ ಯಶಸ್ಸನ್ನು ಅವಲಂಬಿಸಿ ಇಲಾಖೆ ಮುಂದಿನ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.
“ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತೀಯ ಅಂಚೆ ಇಲಾಖೆ ಯಶಸ್ವಿಯಾಗಿ ಪತ್ರ ಬಟವಾಡೆಯನ್ನು ಡ್ರೋನ್ ಮೂಲಕ ನೆರವೇರಿಸಿದೆ. ಅಂಚೆಯ ಇತಿಹಾಸದಲ್ಲಿಯೇ ಮೊದಲ ಸಲ ಇಂಥ ಪ್ರಯೋಗ ನಡೆದಿದೆʼʼ ಎಂದು ಇಲಾಖೆ ತಿಳಿಸಿದೆ.
ಇದು ಔಷಧಗಳ ಪಾರ್ಸೆಲ್ ಆಗಿತ್ತು ಎಂದು ಕೇಂದ್ರ ಸಚಿವ ದೇವುಸಿನ್ಹ್ ಚೌಹಾಣ್ ತಿಳಿಸಿದ್ದಾರೆ. ದೇಶದಲ್ಲಿ ಡ್ರೋನ್ ಮಹೋತ್ಸವ್ 2022 ನಡೆಯುತ್ತಿರುವ ವೇಳೆಯಲ್ಲಿ ಅಂಚೆ ಇಲಾಖೆ ಈ ಪ್ರಯೋಗ ನಡೆಸಿದೆ. ಕೃಷಿ, ಕ್ರೀಡೆ, ರಕ್ಷಣೆ ಮತ್ತು ವಿಪತ್ತು ನಿರ್ವಹಣೆ ಮೊದಲಾದ ವಲಯಗಳಲ್ಲಿ ಡ್ರೋನ್ ಬಳಕೆ ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.