Site icon Vistara News

GOOD NEWS| ಬ್ಯಾಂಕ್‌ಗಳಲ್ಲಿ ಏರಿಕೆಯಾಗಲಿದೆ ನಿಶ್ಚಿತ ಠೇವಣಿ (FD) ಬಡ್ಡಿ ದರ

RBI

ಮುಂಬಯಿ: ಬ್ಯಾಂಕ್‌ಗಳಲ್ಲಿ ಠೇವಣಿಗಳನ್ನು ಇಟ್ಟು ಬಡ್ಡಿ ದರದ ಆದಾಯ ಪಡೆಯುವವರಿಗೆ ಇಲ್ಲಿದೆ ಸಿಹಿ ಸುದ್ದಿ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ರೆಪೊ ದರವನ್ನು ೦.೫೦% (RBI repo rate hike) ಏರಿಕೆ ಮಾಡಿರುವುದರಿಂದ, ಬ್ಯಾಂಕ್‌ಗಳಲ್ಲಿ ನಿಶ್ಚಿತ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರ ಕೂಡ ಹೆಚ್ಚಳವಾಗಲಿದೆ. ಪಿಂಚಣಿ ಮತ್ತು ಬಡ್ಡಿ ಆದಾಯವನ್ನು ಅವಲಂಬಿಸಿರುವ ಹಿರಿಯ ನಾಗರಿಕರಿಗೆ ಇದು ನಿರಾಳ ಮೂಡಿಸಬಹುದು.

ಕಳೆದ ೯೩ ದಿನಗಳಲ್ಲಿ ಆರ್‌ಬಿಐ ತನ್ನ ರೆಪೊ ದರದಲ್ಲಿ ಒಟ್ಟು ೧.೪% ಏರಿಕೆ ಮಾಡಿದೆ. ಇದು ಬ್ಯಾಂಕ್‌ಗಳ ಎಫ್‌ಡಿಗಳಲ್ಲಿ ಹೂಡಿಕೆ ಮಾಡುವ ಸಣ್ಣ ಉಳಿತಾಯಗಾರರಿಗೆ ಹೆಚ್ಚಿನ ಬಡ್ಡಿಯನ್ನು ನೀಡುವ ಸಾಧ್ಯತೆ ಇದೆ. ಏಕೆಂದರೆ ಬ್ಯಾಂಕ್‌ಗಳಿಗೆ ಇದೀಗ ಆರ್‌ಬಿಐನಿಂದ ರೆಪೊ ದರದ ಆಧಾರದಲ್ಲಿ ಹಣ ಪಡೆಯುವುದರಿಂದ ಸಾಲ ವಿತರಣೆಯ ವೆಚ್ಚ ಹೆಚ್ಚುತ್ತದೆ. ಹೀಗಾಗಿ ಠೇವಣಿದಾರರಿಗೆ ನೀಡುವ ಬಡ್ಡಿಯನ್ನು ಏರಿಸಿ,‌ ತಮಗೆ ಅಗತ್ಯವಿರುವ ಫಂಡ್ ಸಂಗ್ರಹಿಸಲು ಬ್ಯಾಂಕ್‌ಗಳು ಮುಂದಾಗುವುದು ಸಹಜ. ರೆಪೊ ದರ ಮುಂಬರುವ ತ್ರೈಮಾಸಿಕಗಳಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇರುವುದರಿಂದ ಎಫ್‌ಡಿ ಬಡ್ಡಿ ದರ ಏರಿಕೆಯನ್ನು ನಿರೀಕ್ಷಿಸಲಾಗಿದೆ. ಹೀಗಿದ್ದರೂ, ಈ ವರ್ಷ ಇನ್ನು ಎರಡು ಸಲ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆ ನಡೆಯಲಿದೆ. ಎರಡು ತಿಂಗಳಿಗೊಮ್ಮೆ ಎಂಪಿಸಿ ಸಭೆ ನಡೆಯುತ್ತದೆ.

ಎಫ್‌ಡಿ ಬಡ್ಡಿ ದರ ೮%ರ ತನಕ ಏರಿಕೆಯಾಗಬಹುದೇ?: ಕಳೆದ ೯೩ ದಿನಗಳ ಅವಧಿಯಲ್ಲಿ ಮೂರು ಹಂತಗಳಲ್ಲಿ ಒಟ್ಟು ೧.೪% ರೆಪೊ ದರ ಏರಿಕೆಯಾಗಿದೆ. ಸತತ ಮೂರು ಸಲ ರೆಪೊ ದರ ಏರಿಕೆ ಆಗಿರುವುದರಿಂದ ನಿಶ್ಚಿತ ಠೇವಣಿಗಳ ಬಡ್ಡಿ ದರ ಹೆಚ್ಚಳಕ್ಕೆ ಹಾದಿ ಸುಗಮವಾಗಿದೆ. ಠೇವಣಿಗಳಿಗೆ ತೀರಾ ಅತ್ಯಲ್ಪ ಬಡ್ಡಿ ಸಿಗುವ ಕಾಲ ಈಗ ಹಿಂದೆ ಸರಿದಿದೆ.

ಈಗ ಯಾವುದಾದರೂ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿಗೆ ಬಡ್ಡಿ ದರ ೬.೫% ಇದೆ ಎಂದಿಟ್ಟುಕೊಳ್ಳಿ (ಎಲ್ಲ ಬ್ಯಾಂಕ್‌ಗಳಲ್ಲಿ ಇರುವುದಿಲ್ಲ) ೦.೫೦% ರೆಪೊ ದರ ಏರಿಕೆ ಬಡ್ಡಿಯ ಮೇಲೆ ಸಂಪೂರ್ಣ ವರ್ಗವಾದರೆ ೭%ಕ್ಕೆ ಏರಿಕೆಯಾಗಲಿದೆ. ಆಗ ೫ ವರ್ಷ ಅವಧಿಯ ೧ ಲಕ್ಷ ರೂ. ಎಫ್‌ಡಿಯ ಬಡ್ಡಿಯಲ್ಲಿ ಹೆಚ್ಚುವರಿ ೩,೪೩೬ ರೂ. ಸಿಗಲಿದೆ.

ಇದೀಗ ಎಫ್‌ಡಿ ಬಡ್ಡಿ ದರ ೮%ಕ್ಕೆ ಏರಿಕೆಯಾಗಲಿದೆಯೇ ಎಂಬ ಚರ್ಚೆ ನಡೆಯುತ್ತಿದೆ. ಕೆಲವು ತಜ್ಞರ ಪ್ರಕಾರ ಮುಂದಿನ ೩-೪ ತ್ರೈಮಾಸಿಕಗಳಲ್ಲಿ ಆರ್‌ಬಿಐಗೆ ೦.೫೦%ರಿಂದ ೧% ಹೆಚ್ಚುವರಿ ರೆಪೊ ದರ ಏರಿಕೆಗೆ ಅವಕಾಶ ಇದೆ. ಆಗ ಎಫ್‌ಡಿ ಬಡ್ಡಿ ದರವನ್ನು ೮%ಕ್ಕೆ ಏರಿಸಲೂ ಅವಕಾಶ ಸೃಷ್ಟಿಯಾಗಲಿದೆ ಎನ್ನುತ್ತಾರೆ ತಜ್ಞರು. ಆದರೆ ಸದ್ಯಕ್ಕೆ ಅಷ್ಟೆಲ್ಲ ಆಗದಿದ್ದರೂ, ತುಸು ಏರಿಕೆಯ ಅನುಕೂಲ ಪಡೆಯಬಹುದು.

ಇದನ್ನೂ ಓದಿ: RBI repo rate hike| ಬೆಲೆ ಏರಿಕೆಯನ್ನು ಇಳಿಸಲು ಬಡ್ಡಿ ದರ ಹೆಚ್ಚಳದ ಅಸ್ತ್ರ ಪ್ರಯೋಗಿಸಿದ ಆರ್‌ಬಿಐ

Exit mobile version