Site icon Vistara News

Fixed deposit : ಬ್ಯಾಂಕ್‌ಗಳಲ್ಲಿ ಏರುಗತಿಯಲ್ಲಿದ್ದ ಠೇವಣಿಗಳ ಬಡ್ಡಿ ದರ ಮತ್ತೆ ಇಳಿಕೆಯಾಗಿದ್ದೇಕೆ?

cash

ಬ್ಯಾಂಕ್‌ಗಳಲ್ಲಿ 2022ರ ಮೇ ಬಳಿಕ ಏರುಗತಿಯಲ್ಲಿದ್ದ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ (fixed deposit) ಇತ್ತೀಚೆಗೆ ಮತ್ತೆ ಇಳಿಕೆ ದಾಖಲಾಗಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ರೆಪೊ ದರವನ್ನು ಸತತ ಮೂರನೇ ತ್ರೈಮಾಸಿಕದಲ್ಲಿ ಯಥಾಸ್ಥಿತಿಯಲ್ಲಿ ಇರಿಸಿದ ಬಳಿಕ ಫಿಕ್ಸೆಡ್‌ ಡೆಪಾಸಿಟ್‌ಗಳ ಮೇಲಿನ ಬಡ್ಡಿ ದರ ಇಳಿಕೆಯಾಗುತ್ತಿದೆ.

ಸರ್ಕಾರ 2000 ರೂ, ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಬಳಿಕ ಬ್ಯಾಂಕಿಂಗ್‌ ಸಿಸ್ಟಮ್‌ನಲ್ಲಿ ಹೆಚ್ಚುವರಿ ಲಿಕ್ವಿಡಿಟಿ ಸೃಷ್ಟಿಯಾಗಿದೆ. ಇದರ ಪರಿಣಾಮ ಬ್ಯಾಂಕ್‌ಗಳಿಗೆ ಬಡ್ಡಿ ದರವನ್ನು ಏರಿಕೆ ಮಾಡುವ ಪ್ರಸಂಗ ಉದ್ಭವಿಸಿಲ್ಲ. ಎಫ್‌ಡಿ ಬಡ್ಡಿ ದರ ಏರಿಕೆಯ ಟ್ರೆಂಡ್‌ ಬಹುತೇಕ ಮುಕ್ತಾಯವಾದಂತಿದೆ.

ಬ್ಯಾಂಕ್‌ಗಳು ಬಡ್ಡಿ ದರ ಇಳಿಸಲು ಕಾರಣವೇನು? ರಿಟೇಲ್‌ ಹಣದುಬ್ಬರವು ಆರ್‌ಬಿಐನ ಸುರಕ್ಷತಾ ಮಟ್ಟವಾದ 6%ಕ್ಕಿಂತ ಕೆಳಮಟ್ಟದಲ್ಲಿ ಕಳೆದ ಏಪ್ರಿಲ್‌ನಲ್ಲಿ ಇತ್ತು. ಆದ್ದರಿಂದ ಆರ್‌ಬಿಐ ರೆಪೊ ದರ ಏರಿಕೆಯನ್ನು ತಡೆ ಹಿಡಿದಿತ್ತು. ಈ ವರ್ಷ ಮೂರು ಸಲ ಆರ್‌ಬಿಐ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿರಿಸಿತ್ತು. ಇದಕ್ಕೂ ಮುನ್ನ ಒಟ್ಟಾರೆಯಾಗಿ ಆರ್‌ಬಿಐ 11 ತಿಂಗಳಿನ ಅವಧಿಯಲ್ಲಿ 4 ಪರ್ಸೆಂಟ್‌ನಿಂದ 6.5% ಕ್ಕೆ ರೆಪೊ ದರವನ್ನು ಏರಿಸಿತ್ತು. ಸದ್ಯಕ್ಕೆ ರೆಪೊ ದರದ ಏರಿಕೆಯ ಸಾಧ್ಯತೆ ಇಲ್ಲ.

ಚಲಾವಣೆಯಿಂದ 2000 ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡ ಬಳಿಕ ಬ್ಯಾಂಕಿಂಗ್‌ ವಲಯದಲ್ಲಿ ಲಿಕ್ವಿಡಿಟಿ ಹೆಚ್ಚಳವಾಗಿದೆ. ಪ್ರಸಕ್ತ ಆರ್ಥಿಕ ವರ್ಷಕ್ಕೆ ಕ್ರೆಡಿಟ್‌ ಗ್ರೋತ್‌ ಕೂಡ ಸಕಾರಾತ್ಮಕವಾಗಿದೆ. ಸರ್ಕಾರಿ ಬಾಂಡ್‌ಗಳ ಉತ್ಪತ್ತಿ ಇತ್ತೀಚೆಗೆ ಇಳಿಕೆಯಾಗಿರುವುದು ಕೂಡ ಪ್ರಭಾವ ಬೀರಿದೆ ಎನ್ನುತ್ತಾರೆ ಸ್ಟೇಬಲ್‌ ಮನಿ ಸಂಸ್ಥೆಯ ಸಹ ಸಂಸ್ಥಾಪಕ ಸೌರಭ್‌ ಜೈನ್.‌

ಎಫ್‌ಡಿ ಬಡ್ಡಿ ದರ ಮತ್ತಷ್ಟು ಇಳಿಕೆಯಾಗಲಿದೆಯೇ?: ಡಿಸಿಬಿ ಬ್ಯಾಂಕ್‌ ತನ್ನ ಫಿಕ್ಸೆಡ್‌ ಡೆಪಾಸಿಟ್‌ ಬಡ್ಡಿ ದರದಲ್ಲಿ 0.50% ತನಕ ಕಡಿತಗೊಳಿಸಿದೆ. ಎಕ್ಸಿಸ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮತ್ತು ಇಂಡಸ್‌ಇಂಡ್‌ ಬ್ಯಾಂಕ್‌ ಕೂಡ ಎಫ್‌ಡಿ ಬಡ್ಡಿ ದರವನ್ನು ಇತ್ತೀಚೆಗೆ ಇಳಿಸಿದೆ.

ಈ ಸಂದರ್ಭದಲ್ಲಿ ಎಫ್‌ಡಿಯಲ್ಲಿ ಹೂಡಿಕೆ ಮಾಡುವುದಿದ್ದರೆ, ಸದ್ಯದ ಭವಿಷ್ಯದಲ್ಲಿ ಗಣನೀಯ ಏರಿಕೆ ಆಗದಿರುವ ಎಫ್‌ಡಿ ಸ್ಕೀಮ್‌ಗಳಲ್ಲಿಯೇ ಹೂಡಿಕೆ ಮಾಡುವುದು ಸೂಕ್ತ. ಬಹುತೇಕ ಬ್ಯಾಂಕ್‌ಗಳು 18 ತಿಂಗಳಿನಿಂದ ಮೂರು ವರ್ಷ ಅವಧಿಯ ಎಫ್‌ಡಿಗೆ 7-7.20% ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರು ಮೂರು ವರ್ಷಗಳ ಎಫ್‌ಡಿಗೆ 7.5% ಬಡ್ಡಿ ಪಡೆಯಬಹುದು. ಒಂದೇ ಎಫ್‌ಡಿಯಲ್ಲಿ ನಿಮ್ಮ ಎಲ್ಲ ಹಣ ಹೂಡಿಕೆ ಮಾಡುವುದರ ಬದಲಿಗೆ ಭಿನ್ನ ಅವಧಿಯ ಎಫ್‌ಡಿಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ ಎನ್ನುತ್ತಾರೆ ತಜ್ಞರು.

ಸಣ್ಣ ಹಣಕಾಸು ಬ್ಯಾಂಕ್‌ಗಳು (small finance banks) ನಿರ್ದಿಷ್ಟ ಅವಧಿಯ ಎಫ್‌ಡಿಗಳಿಗೆ 8.5-9% ಬಡ್ಡಿ ನೀಡುತ್ತವೆ. 5 ಲಕ್ಷ ರೂ. ತನಕ ಠೇವಣಿ ವಿಮೆ (deposit insurance) ಇದ್ದರೆ, ಸಣ್ಣ ಹಣಕಾಸು ಬ್ಯಾಂಕ್‌ಗಳಲ್ಲಿ ಎಫ್‌ಡಿ ಇಡಬಹುದು.

Exit mobile version