ನವ ದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2,000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ಬಳಿಕ, ನೋಟಿನ ವಿನಿಮಯಕ್ಕೆ ಸಂಬಂಧಿಸಿ ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ ಹೊಸ ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದೆ. ಇದು ಗ್ರಾಹಕಸ್ನೇಹಿಯಾಗಿದೆ. ಹಾಗಾದರೆ ಅದರಲ್ಲಿ ಏನಿದೆ (2000 Notes Withdrawn) ಎಂದು ನೋಡೋಣ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಮಾರ್ಗದರ್ಶಿಯ ಪ್ರಕಾರ, 20,000 ರೂ. ಮೌಲ್ಯದ ತನಕದ 2,000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಯಾವುದೇ ಐಡಿ ಪ್ರೂಫ್ (ID Proof)̧ ರಿಕ್ವೆಶನ್ ಸ್ಲಿಪ್ (Requisition slip) ನೀಡಬೇಕಿಲ್ಲ.
ಒಂದು ಸಲಕ್ಕೆ ವಿನಿಮಯದ ವೇಳೆ 2,000 ರೂ. ನೋಟಿನ ಒಟ್ಟು ಮೌಲ್ಯ 20,000 ರೂ. ಒಳಗಿದ್ದರೆ, ಅದನ್ನು ವಿನಿಮಯ ಮಾಡಿಕೊಳ್ಳಲು ಬೇರೆ ಯಾವುದೇ ಸ್ಲಿಪ್ ಅಗತ್ಯ ಇಲ್ಲ ಎಂದು ಎಸ್‌ಬಿಐ ಹೊಸ ಮಾರ್ಗದರ್ಶಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: 2000 Notes Withdrawan : 2,000 ರೂ. ನೋಟು ಚಲಾವಣೆಯಿಂದ ಹಿಂತೆಗೆತ: ಆರ್‌ಬಿಐ ಘೋಷಣೆ
ಎರಡು ಸಾವಿರ ರೂ. ನೋಟಿನ ವಿನಿಮಯಕ್ಕೆ ಆಧಾರ್ ಕಾರ್ಡ್ ಸೇರಿದಂತೆ ಇತರ ದಾಖಲಾತಿಗಳನ್ನು ಕೇಳುತ್ತಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಎಸ್‌ಬಿಐ ಈ ವಿಷಯ ತಿಳಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ 2,000 ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿರುವುದಾಗಿ ಘೋಷಿಸಿತ್ತು. ಹಾಗೂ ಸೆಪ್ಟೆಂಬರ್ 30ರೊಳಗೆ ಜನ ನೋಟನ್ನು ಬ್ಯಾಂಕ್ ಶಾಖೆಗಳಲ್ಲಿ ಮೇ 23ರಿಂದ ವಿನಿಮಯ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.
ಅಗತ್ಯ ಬಿದ್ದರೆ ಆರ್‌ಬಿಐ ಸೆಪ್ಟೆಂಬರ್ 30ರ ಗಡುವನ್ನು ಮುಂದೂಡುವ ಸಾಧ್ಯತೆ ಇದೆ. ಆದರೆ ಈಗಿನ ಗಡುವು ಸಾಕಾಗಲಿದೆ ಎಂದು ವರದಿಯಾಗಿದೆ.
ವಿನಿಮಯಕ್ಕೆ ಸಂಬಂಧಿಸಿ ಆರ್‌ಬಿಐ ಹೇಳಿದ್ದೇನು?
2,000 ರೂ. ನೋಟು ವಿನಿಮಯಕ್ಕೆ 2023ರ ಸೆಪ್ಟೆಂಬರ್ 30 ತನಕ ಯಾವುದೇ ಅಡೆತಡೆ ಇಲ್ಲದೆ ವ್ಯವಸ್ಥೆ ಕಲ್ಪಿಸಬೇಕು. ಯಾವುದೇ ನಿರ್ಬಂಧ ಇಲ್ಲದೆ, ಒಂದು ಸಲಕ್ಕೆ ಒಟ್ಟು 20,000 ರೂ. ಮೌಲ್ಯದ 2,೦೦೦ ರೂ.ಗಳ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ತಿಳಿಸಿದೆ.