Site icon Vistara News

ವಿಸ್ತಾರ Fact Check | ಎಟಿಎಂ ವಿತ್‌ಡ್ರಾವಲ್ಸ್‌ಗೆ 118 ರೂ. ಶುಲ್ಕ ಇಲ್ಲ, 24 ರೂ. ಮಾತ್ರ

atm

ನವ ದೆಹಲಿ: ಎಟಿಎಂನಿಂದ ಪ್ರತಿ ತಿಂಗಳು 5ಕ್ಕಿಂತ ಹೆಚ್ಚು ಸಲ ನಗದು ಹಣವನ್ನು ಡ್ರಾ ಮಾಡಿದರೆ, ಬಳಿಕ ಪ್ರತಿ ವಿತ್‌ ಡ್ರಾಗೂ ಜಿಎಸ್‌ಟಿ ಸೇರಿ 118 ರೂ. ಶುಲ್ಕ ತಗಲುತ್ತದೆ ಎಂಬ ವರದಿಗಳು ಇತ್ತೀಚೆಗೆ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿ ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಇನ್ನೂ ಕೆಲವು ವರದಿಗಳ ಪ್ರಕಾರ ತಿಂಗಳಿಗೆ 4 ಉಚಿತ ವಿತ್‌ ಡ್ರಾವಲ್ಸ್‌ ಬಳಿಕ 173 ರೂ. ಶುಲ್ಕ ಕಟ್ಟಬೇಕಾಗುತ್ತದೆ. ಆದರೆ ವಾಸ್ತವವೇನು? (ವಿಸ್ತಾರ Money Guide) ಇಲ್ಲಿದೆ ವಿವರ.

ಆರ್‌ಬಿಐ ಏನೆನ್ನುತ್ತದೆ?

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಳೆದ ವರ್ಷ ಜೂನ್‌ನಲ್ಲಿ ಬಿಡುಗಡೆಗೊಳಿಸಿದ ಅಧಿಸೂಚನೆಯ ಪ್ರಕಾರ, 2022ರ ಜನವರಿ 1 ರಿಂದ ಎಟಿಎಂಗಳಲ್ಲಿ ಮಾಸಿಕ ಉಚಿತ ವರ್ಗಾವಣೆಗಳ ಬಳಿಕ ಪ್ರತಿ ವರ್ಗಾವಣೆಗೆ ತಲಾ 21 ರೂ. ಶುಲ್ಕ ಸಂಗ್ರಹಿಸಬಹುದು. ಜತೆಗೆ ತೆರಿಗೆ ಅನ್ವಯವಾಗುತ್ತದೆ. ಇದಕ್ಕೂ ಮೊದಲು 20 ರೂ. ವಿಧಿಸಲಾಗುತ್ತಿತ್ತು. ಹೀಗಾಗಿ 18% ಜಿಎಸ್‌ಟಿ ಸೇರಿಸಿದರೂ 24 ರೂ. ಆಗುತ್ತದೆ.

ಆರ್‌ಬಿಐ ಪ್ರಕಾರ ಬ್ಯಾಂಕ್‌ನ ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್‌ನ ಎಟಿಎಂಗಳಿಂದ ತಿಂಗಳಿಗೆ 5 ಉಚಿತ ಹಣಕಾಸು ಅಥವಾ ಹಣಕಾಸೇತರ ಉಚಿತ ವರ್ಗಾವಣೆಗಳನ್ನು (transactions) ಮಾಡಬಹುದು. ಇತರ ಬ್ಯಾಂಕ್‌ಗಳ ಎಟಿಎಂಗಳಿಂದ ಮೆಟ್ರೊ ನಗರಗಳಲ್ಲಿ ಮೂರು ಮತ್ತು ಇತರ ಕಡೆಗಳಲ್ಲಿ 5 ಉಚಿತ ವರ್ಗಾವಣೆಗಳನ್ನು ಮಾಡಬಹುದು.

ಎಸ್‌ಬಿಐನಲ್ಲಿ ಎಟಿಎಂ ಶುಲ್ಕ ಎಷ್ಟು?

ದೇಶದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ (ಎಸ್‌ಬಿಐ) ಮಾಸಿಕ ಬ್ಯಾಲೆನ್ಸ್‌ 1 ಲಕ್ಷ ರೂ. ತನಕ ಇಡುವವರಿಗೆ 5 ಉಚಿತ ನಗದು ವಿತ್‌ ಡ್ರಾವಲ್ಸ್‌ಗೆ ಅವಕಾಶ ಇದೆ. ಇತರ ಬ್ಯಾಂಕ್‌ಗಳ ಎಟಿಎಂ ಬಳಕೆ ಮಾಡುವುದಿದ್ದರೆ 3 ಸಲ ಉಚಿತವಾಗಿರುತ್ತದೆ. ಹೀಗೆ ಒಟ್ಟು 8 ಉಚಿತ ವಿತ್‌ ಡ್ರಾವಲ್ಸ್‌ ಸಿಗುತ್ತದೆ. ಬಳಿಕ ಪ್ರತಿ ನಗದು ವಿತ್‌ ಡ್ರಾವಲ್ಸ್‌ಗೆ 10 ರೂ. ಶುಲ್ಕ ಅನ್ವಯವಾಗುತ್ತದೆ. ಒಂದು ವೇಳೆ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್‌ ಇಲ್ಲದೆ ಡಿಕ್ಲೈನ್‌ ಆದರೆ, 20 ರೂ.ಗಳನ್ನು ಎಸ್‌ಬಿಐ ವಿಧಿಸುತ್ತದೆ.

ಐಸಿಐಸಿಐ ಬ್ಯಾಂಕ್‌ನಲ್ಲಿ 21 ರೂ. ಶುಲ್ಕ: ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಐಸಿಐಸಿಐನ ಎಟಿಎಂಗಳಲ್ಲಿ ಒಟ್ಟು 8 ಉಚಿತ ವರ್ಗಾವಣೆಗಳನ್ನು ಮಾಡಬಹುದು. ಬಳಿಕ ಪ್ರತಿ ವರ್ಗಾವಣೆಗೆ 21 ರೂ. ತಗಲುತ್ತದೆ. ಎಕ್ಸಿಸ್‌ ಬ್ಯಾಂಕ್‌ನಲ್ಲೂ 21 ರೂ. ಅನ್ವಯವಾಗುತ್ತದೆ.

ಹೀಗಾಗಿ ಬ್ಯಾಂಕ್‌ಗಳ ಎಟಿಎಂಗಳಲ್ಲಿ ನಗದು ಹಿಂತೆಗೆತಕ್ಕೆ ಸಂಬಂಧಿಸಿ ಮಾಸಿಕ ಉಚಿತ ವರ್ಗಾವಣೆಯ ಬಳಿಕ ಪ್ರತಿ ವರ್ಗಾವಣೆಗೆ 118 ರೂ. ಶುಲ್ಕ ತಗಲುವುದಿಲ್ಲ. ಬಹುತೇಕ ಬ್ಯಾಂಕ್‌ಗಳು 21 ರೂ. ಶುಲ್ಕ ವಿಧಿಸುತ್ತವೆ. ಇದಕ್ಕೆ 18% ಜಿಎಸ್‌ಟಿ ಸೇರಿಸಿದರೂ ೨೪ ರೂ. ಮಾತ್ರ ತಗಲುತ್ತದೆ.

ಬ್ಯಾಂಕ್‌ನಿಂದ ಹಣ ತೆಗೆಯಲು ಜಿಎಸ್‌ಟಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದೇನು?

ಬ್ಯಾಂಕ್‌ನಿಂದ ನಮ್ಮದೇ ಹಣವನ್ನು ಹಿಂತೆಗೆದುಕೊಳ್ಳಲು ಕೂಡ ಜಿಎಸ್‌ಟಿ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ರಾಜ್ಯಸಭೆಯಲ್ಲಿ ಈ ಹಿಂದೆ ಉತ್ತರಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಬ್ಯಾಂಕ್‌ನಿಂದ ನಗದು ಹಿಂತೆಗೆತದ ಮೇಲೆ ಜಿಎಸ್‌ಟಿ ಅನ್ವಯವಾಗುವುದಿಲ್ಲ. ಚೆಕ್‌ ಬುಕ್‌ಗಳನ್ನು ಖರೀದಿಸುವ ಜನತೆಗೂ ಜಿಎಸ್‌ಟಿ ಇರುವುದಿಲ್ಲ. ಆದರೆ ಬ್ಯಾಂಕ್‌ಗಳು ಮುದ್ರಕರಿಂದ ಚೆಕ್‌ ಬುಕ್‌ಗಳನ್ನು ಖರೀದಿಸುವಾಗ ಬ್ಯಾಂಕ್‌ಗಳು ಜಿಎಸ್‌ಟಿ ನೀಡಬೇಕಾಗುತ್ತದೆಯೇ ಹೊರತು ಸಾರ್ವಜನಿಕರು ಅಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

Exit mobile version