ನವ ದೆಹಲಿ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಮೊಟ್ಟ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ ೮೦ ರೂ.ಗೆ ಮಂಗಳವಾರ ಕುಸಿತಕ್ಕೀಡಾಗಿದೆ.
ಕಳೆದ ಕೆಲ ದಿನಗಳಿಂದ ೮೦ ರೂ.ಗಳ ಅಂಚಿನಲ್ಲಿದ್ದ ರೂಪಾಯಿ ಮೌಲ್ಯ ಇಂದು ಬೆಳಗ್ಗೆ ೮೦.೦೧ಕ್ಕೆ ಕುಸಿಯಿತು. ಸೋಮವಾರ ೭೯.೯೭ಕ್ಕೆ ಸ್ಥಿರವಾಗಿತ್ತು. ಇಂದು ೭೯.೮೫-೮೦-೧೫ ರೇಂಜಿನಲ್ಲಿ ರೂಪಾಯಿ ವಹಿವಾಟು ನಡೆಸುವ ನಿರೀಕ್ಷೆ ಇದೆ. ಡಾಲರ್ ಎದುರು ರೂಪಾಯಿ ಕುಸಿತದಿಂದ ಆಮದು ದುಬಾರಿಯಾಗುತ್ತದೆ.
2014ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದಲ್ಲಿ ೨೫% ಕುಸಿತ ಸಂಭವಿಸಿದೆ. ಕಚ್ಚಾ ತೈಲ ಬಿಕ್ಕಟ್ಟು, ರಷ್ಯಾ-ಉಕ್ರೇನ್ ಸಂಘರ್ಷ, ವಿದೇಶಿ ಹೂಡಿಕೆಯ ಹೊರ ಹರಿವು ಇತ್ಯಾದಿ ಕಾರಣಗಳಿಂದ ರೂಪಾಯಿ ಮೌಲ್ಯ ಕುಸಿದಿದೆ. ಹೀಗಿದ್ದರೂ, ಬ್ರಿಟಿಷ್ ಪೌಂಡ್, ಜಪಾನಿನ ಯೆನ್, ಯುರೋಪಿನ ಯೂರೊ ಡಾಲರ್ ಎದುರು ಭಾರತದ ರೂಪಾಯಿಗಿಂತಲೂ ಹೆಚ್ಚು ಕುಸಿದಿದೆ. ಆದ್ದರಿಂದ ಈ ಕರೆನ್ಸಿಗಳಿಗೆ ಹೋಲಿಸಿದರೆ ರೂಪಾಯಿ ೨೦೨೨ರಲ್ಲಿ ತನ್ನ ಬಲ ವೃದ್ಧಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.