ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರು ಫೋರ್ಬ್ಸ್ ಸಂಸ್ಥೆ ಬಿಡುಗಡೆಗೊಳಿಸಿರುವ 2023ರ ವಿಶ್ವದ ಪ್ರಮುಖ ಬಿಲಿಯನೇರ್‌ಗಳ (forbes Worlds Billionaires List 2023) ಪಟ್ಟಿಯಲ್ಲಿ 9ನೇ ಸ್ಥಾನ ಗಳಿಸಿದ್ದಾರೆ. ಅದಾನಿ ಸಮೂಹದ ಸಂಸ್ಥಾಪಕ ಗೌತಮ್ ಅದಾನಿ ಅವರು 24ಕ್ಕೆ ಕುಸಿದಿದ್ದಾರೆ.
ಫೋರ್ಬ್ಸ್ 37ನೇ ವಾರ್ಷಿಕ ಬಿಲಿಯನೇರ್‌ಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಅದರ ಪ್ರಕಾರ ಮುಕೇಶ್ ಅಂಬಾನಿ ಅವರ ಸಂಪತ್ತು 6.83 ಲಕ್ಷ ಕೋಟಿ ರೂ. (83.4 ಶತಕೋಟಿ ಡಾಲರ್) ಕಳೆದ ವರ್ಷ ಅವರ ಸಂಪತ್ತು 90.7 ಶತಕೋಟಿ ಡಾಲರ್ ಇತ್ತು (7.43 ಲಕ್ಷ ಕೋಟಿ ರೂ.)
ಗೌತಮ್ ಅದಾನಿ ಅವರು ಭಾರತದ ಎರಡನೇ ಅತಿ ದೊಡ್ಡ ಶ್ರೀಮಂತರಾದರೂ ವಿಶ್ವ ಬಿಲಿಯನೇರ್‌ಗಳ ಪಟ್ಟಿಯಲ್ಲಿ 24ನೇ ಸ್ಥಾನದಲ್ಲಿ ಇದ್ದಾರೆ. ಇತ್ತೀಚಿನ ಅದಾನಿ ಷೇರುಗಳ ಪತನ ಅವರ ಸಂಪತ್ತಿನ ಗ್ರಾಫ್ ಮೇಲೆ ಕೂಡ ಪ್ರತಿಕೂಲ ಪ್ರಭಾವ ಬೀರಿತ್ತು. ಅದಾನಿ ಅವರ ನಿವ್ವಳ ಸಂಪತ್ತು 47.2 ಶತಕೋಟಿ ಡಾಲರ್ (3.87 ಲಕ್ಷ ಕೋಟಿ ರೂ.) ವಿಶ್ವದ ಮೊದಲ 55 ಬಿಲಿಯನೇರ್‌ಗಳಲ್ಲಿ ಭಾರತದ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಶಿವ್ ನಡಾರ್ ಇದ್ದಾರೆ.
ಭಾರತದಲ್ಲಿ 169 ಬಿಲಿಯನೇರ್‌ಗಳು, ವಿಶ್ವದಲ್ಲಿ ಮೂರನೇ ಸ್ಥಾನ:
ಭಾರತದಲ್ಲಿ 2022ರಲ್ಲಿ 166 ಬಿಲಿಯನೇರ್‌ಗಳಿದ್ದರೆ 2023ರಲ್ಲಿ 169 ಕ್ಕೆ ಏರಿಕೆಯಾಗಿದೆ. ಷೇರುಗಳ ದರ ಪತನ, ಯುನಿಕಾರ್ನಗಳ ಬಿಕ್ಕಟ್ಟು, ಹೆಚ್ಚುತ್ತಿರುವ ಬಡ್ಡಿ ದರದ ಪರಿಣಾಮ ಬಿಲಿಯನೇರ್‌ಗಳ ಸಂಪತ್ತು ಇಳಿಕೆಯಾಗಿದೆ ಎಂದು ಫೋರ್ಬ್ಸ್ ತಿಳಿಸಿದೆ.
ಫೋರ್ಬ್ಸ್ ಪ್ರಕಾರ ಅಮೆರಿಕದಲ್ಲಿ ಈಗಲೂ ಅತಿ ಹೆಚ್ಚು ಬಿಲಿಯನೇರ್‌ಗಳು ಇದ್ದಾರೆ. ಅಲ್ಲಿ 735 ಬಿಲಿಯನೇರ್‌ಗಳಿದ್ದಾರೆ. ಚೀನಾದಲ್ಲಿ 562 ಬಿಲಿಯನೇರ್‌ಗಳಿದ್ದಾರೆ. ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 169 ಬಿಲಿಯನೇರ್‌ಗಳಿದ್ದಾರೆ.