ನವ ದೆಹಲಿ: ಭಾರತದ ವಿದೇಶಿ ವಿನಿಮಯ ಸಂಗ್ರಹವು ಏಪ್ರಿಲ್ 7ಕ್ಕೆ ಅಂತ್ಯವಾದ ವಾರದಲ್ಲಿ 584 ಶತಕೋಟಿ ಡಾಲರ್‌ಗೆ (ಅಂದಾಜು 47.8 ಲಕ್ಷ ಕೋಟಿ ರೂ.) ವೃದ್ಧಿಸಿದೆ. ವಿದೇಶಿ ವಿನಿಮಯ ಸಂಗ್ರಹದಲ್ಲಿ (Forex reserves ) ವಿದೇಶಿ ಕರೆನ್ಸಿಗಳ ಪಾಲು ಹೆಚ್ಚು. ಇದು 514 ಶತಕೋಟಿ ಡಾಲರ್‌ನಷ್ಟಿತ್ತು.
ವಿದೇಶಿ ವಿನಿಮಯ ಸಂಗ್ರಹದಲ್ಲಿ ಚಿನ್ನದ ಪಾಲು 46.69 ಶತಕೋಟಿ ಡಾಲರ್‌ಗೆ ವೃದ್ಧಿಸಿದೆ ಎಂದು ಆರ್‌ಬಿಐ ತಿಳಿಸಿದೆ. ಐಎಂಎಫ್‌ನಲ್ಲಿ ಭಾರತದ ಫಂಡ್‌ನಲ್ಲಿ 13 ದಶಲಕ್ಷ ಡಾಲರ್ ವೃದ್ಧಿಸಿದ್ದು, 5.178 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. (42,459 ಕೋಟಿ ರೂ.) 2021ರ ಅಕ್ಟೋಬರ್‌ನಲ್ಲಿ ಫೊರೆಕ್ಸ್ 645 ಶತಕೋಟಿ ಡಾಲರ್‌ಗೆ ವೃದ್ಧಿಸಿತ್ತು.
ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್‌ಗೆ ನೇರ ತೆರಿಗೆ, ಪರೋಕ್ಷ ತೆರಿಗೆಯನ್ನು ಸಂಗ್ರಹಿಸಲು ಆರ್‌ಬಿಐ ಅನುಮತಿ ನೀಡಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (CBDT) ತಿಳಿಸಿದೆ. ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಶಿಫಾರಸಿನ ಮೇರೆಗೆ ಆರ್‌ಬಿಐ ಈ ಅಧಿಕಾರವನ್ನು ಬ್ಯಾಂಕಿಗೆ ಕೊಟ್ಟಿದೆ.
ಗ್ರಾಹಕರು ಈಗಾಗಲೇ ಕಸ್ಟಮ್ಸ್ ಸುಂಕ ಪಾವತಿಯನ್ನು ಕರ್ಣಾಟಕ ಬ್ಯಾಂಕ್‌ನ ಮೂಲಕ ಮಾಡುತ್ತಿದ್ದಾರೆ. ಇಂಡಿಯನ್ ಕಸ್ಟಮ್ಸ್ ಎಲೆಕ್ಟ್ರಾನಿಕ್ ಗೇಟ್ವೇ (ICEGATE) ವೆಬ್ ಪೋರ್ಟಲ್‌ನಲ್ಲಿ ಕರ್ಣಾಟಕ ಬ್ಯಾಂಕ್‌ನ ಆಯ್ಕೆಯನ್ನೂ ಪಡೆಯಬಹುದು ಎಂದು ತಿಳಿಸಿದೆ. ಬ್ಯಾಂಕಿನ ಫೊರೆಕ್ಸ್ ಬಿಸಿನೆಸ್ ಮೇಲೆ ಇದು ಸಕಾರಾತ್ಮಕ ಪ್ರಭಾವ ಬೀರುವ ನಿರೀಕ್ಷೆ ಇದೆ.
ಕರ್ಣಾಟಕ ಬ್ಯಾಂಕ್ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಬಡ್ಡಿ ದರವನ್ನು ಪರಿಷ್ಕರಿಸಿದೆ. 375 ದಿನಗಳ ಠೇವಣಿಗೆ ಗರಿಷ್ಠ 7.30% ಬಡ್ಡಿ ದರ ಸಿಗಲಿದೆ. 7 ದಿನಗಳಿಂದ 10 ವರ್ಷ ಅವಧಿಗೆ 4.50%ರಿಂದ 5.80% ತನಕ ಬಡ್ಡಿ ದರ ಸಿಗಲಿದೆ.