Site icon Vistara News

Form 16 : ವಿಸ್ತಾರ Money Guide: ಉದ್ಯೋಗಿಗಳಿಗೆ Form 16 ಯಾವಾಗ ಕೊಡುತ್ತಾರೆ?

tax

ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಯಲ್ಲಿ (Income tax return) ಫಾರ್ಮ್‌ 16 ಮಹತ್ವದ (Form 16) ದಾಖಲೆಯಾಗಿದೆ. ಮುಖ್ಯವಾಗಿ ವೇತನದಾರರಿಗೆ ಮಹತ್ವದ್ದಾಗಿದೆ. ಇದು ಟಿಡಿಎಸ್‌ ಸರ್ಟಿಫಿಕೇಟ್‌ (TDS Certificate) ಆಗಿದ್ದು, ವೇತನ, ಭತ್ಯೆ ಮತ್ತು ಇತರ ಬೆನಿಫಿಟ್‌ಗಳ ವಿವರಗಳನ್ನು ಒಳಗೊಂಡಿರುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಉದ್ಯೋಗದಾತ ಅಥವಾ ಕಂಪನಿಯು ತನ್ನ ಉದ್ಯೋಗಿಗೆ ನೀಡುವ ಈ ಎಲ್ಲ ಹಣಕಾಸು ಸೌಲಭ್ಯಗಳ ವಿವರಗಳ ದಾಖಲೆ ಇದಾಗಿದೆ. ವೇತನ ಮತ್ತು ಇತರ ಭತ್ಯೆಗಳಿಂದ ಕಡಿತವಾಗುವ ತೆರಿಗೆಯ ವಿವರವನ್ನೂ ಫಾರ್ಮ್‌ 16 ನೀಡುತ್ತದೆ.

ಯಾವಾಗ ಫಾರ್ಮ್‌ 16 ಬಿಡುಗಡೆಯಾಗುತ್ತದೆ? ಸಂಬಳದ ಆದಾಯದಲ್ಲಿ (salary income) ತೆರಿಗೆ ಕಡಿತ ಆಗುವುದಿದ್ದರೆ ಫಾರ್ಮ್‌ 16 ಅನ್ನು ಉದ್ಯೋಗಿಗಳಿಗೆ ಕಂಪನಿ ನೀಡುವುದು ಕಡ್ಡಾಯವಾಗಿದೆ. ಆದಾಯ ತೆರಿಗೆ ಕಾಯಿದೆಯ ಅಡಿಯಲ್ಲಿ ಉದ್ಯೋಗದಾತ ಅಥವಾ ಕಂಪನಿಯು ಉದ್ಯೋಗಿಗಳಿಗೆ ಜೂನ್‌ 15ರೊಳಗೆ ಫಾರ್ಮ್‌ 16 ಅನ್ನು ಬಿಡುಗಡೆಗೊಳಿಸುವುದು ಅಗತ್ಯ. ವೇತನ ಪಾವತಿಯಾಗಿರುವ ಹಿಂದಿನ ಆರ್ಥಿಕ ವರ್ಷದ (financial year) ಬಗ್ಗೆ ಫಾರ್ಮ್‌ 16 ನೀಡಲಾಗುತ್ತದೆ. ಹೀಗಾಗಿ ಈಗ ಉದ್ಯೋಗಿಗೆ ನೀಡುವ ಫಾರ್ಮ 16, 2022-23ರ ಸಾಲಿನ ವೇತನಕ್ಕೆ ಸಂಬಂಧಿಸಿರುತ್ತದೆ.

2022-23ರ ಫಾರ್ಮ್‌ 16ನಲ್ಲಿ ಕಡಿತವಾಗಿರುವ ತೆರಿಗೆ, ವೇತನ ಆದಾಯ ವಿವರ, ತೆರಿಗೆ ವಿನಾಯಿತಿ ಮತ್ತು ಡಿಡಕ್ಷನ್‌ ವಿವರಗಳು ಇರುತ್ತವೆ. ಈ ಫಾರ್ಮ್‌ 16 ಅನ್ನು ಐಟಿ ರಿಟರ್ನ್‌ ಸಲ್ಲಿಸಲು ಬಳಸಲಾಗುತ್ತದೆ. ಐಟಿಆರ್‌ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. 2022-23ರ ಆರ್ಥಿಕ ವರ್ಷಕ್ಕೆ ಅಸೆಸ್‌ಮೆಂಟ್‌ ಅಥವಾ ಮೌಲ್ಯಮಾಪನದ ವರ್ಷ 2023-24 ಆಗಿದೆ.

ಫಾರ್ಮ್‌ 16ನಲ್ಲಿ ಏನೆಲ್ಲ ಇರುತ್ತದೆ? ಫಾರ್ಮ್‌ 16ರಲ್ಲಿ Part A ಮತ್ತು Part B ಎಂದು ಎರಡು ವಿಭಾಗಗಳಿರುತ್ತದೆ. TRACES web portal ನಿಂದ ಡೌನ್‌ಲೋಡ್‌ ಮಾಡಿರಬೇಕು ಮತ್ತು TRACES ಲೋಗೊ ಅನ್ನು ಒಳಗೊಂಡಿರಬೇಕು. ಫಾರ್ಮ್‌ 16ರ part A ಭಾಗದಲ್ಲಿ ಉದ್ಯೋಗದಾತರು ಕಡಿತಗೊಳಿಸಿದ ಒಟ್ಟು ತೆರಿಗೆ, ಪ್ಯಾನ್‌ ಮತ್ತು ಟ್ಯಾನ್ ವಿವರ ಇರುತ್ತದೆ.‌ part B ಯಲ್ಲಿ ಒಟ್ಟಾರೆ ವೇತನ, ಇತರ ಭತ್ಯೆ, ಹೌಸ್‌ ರೆಂಟ್‌ ಅಲೊವೆನ್ಸ್‌, ಸ್ಪೆಶಲ್‌ ಅಲೊವೆನ್ಸ್‌, ಕಂಪನಿ ಕಾರಿನ ವೆಚ್ಚ, ಉಚಿತ ವಸತಿ ವ್ಯವಸ್ಥೆ ಇತ್ಯಾದಿಗಳ ವಿವರ ಇರುತ್ತದೆ.

ವೇತನ ಆದಾಯಕ್ಕೆ ಟಿಡಿಎಸ್‌ ಲೆಕ್ಕಾಚಾರ ಹೇಗೆ? ನಿಮ್ಮ ಒಟ್ಟು ವೇತನ ಆದಾಯವು ತೆರಿಗೆ ಕಾಯಿದೆಯ ಪ್ರಕಾರ ಯಾವ ಸ್ಲ್ಯಾಬ್‌ಗೆ ಬರುತ್ತದೆ ಎನ್ನುವುದರ ಆಧಾರದಲ್ಲಿ ಟಿಡಿಎಸ್‌ ಅನ್ವಯವಾಗುತ್ತದೆ. ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಉದ್ಯೋಗಿ, ಕಂಪನಿಗೆ ಯಾವ ತೆರಿಗೆ ಪದ್ಧತಿ ಆಯ್ಕೆ ಮಾಡಬಹುದು ಎಂಬುದನ್ನು ತಿಳಿಸಬೇಕು. ಉದ್ಯೋಗಿಗಳು ಹಳೆಯ ಅಥವಾ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಬಹುದು. ಹಳೆ ತೆರಿಗೆ ಪದ್ಧತಿಯಲ್ಲಿ tax exemptions ಮತ್ತು deductions ಇದ್ದರೆ ಹೊಸ ತೆರಿಗೆ ಪದ್ಧತಿಯಲ್ಲಿ ಸಾಮಾನ್ಯ ತೆರಿಗೆ ವಿನಾಯಿತಿ ಮತ್ತು ಡಿಡಕ್ಷನ್‌ ಇರುವುದಿಲ್ಲ. ಹಾಗೆಯೇ ನಿಮ್ಮ ವೇತನ ಆದಾಯ ಆಧರಿಸಿ ಹೊಸ ಅಥವಾ ಹಳೆ ತೆರಿಗೆ ಪದ್ಧತಿ ಅನುಸರಿಸುವುದು ಸೂಕ್ತ. ಉದಾಹರಣೆಗೆ ನಿಮ್ಮ ವಾರ್ಷಿಕ ಆದಾಯವು 9,60,000 ರೂ. ಇದ್ದರೆ ಹೊಸ ತೆರಿಗೆ ಪದ್ಧತಿಯಲ್ಲಿ ಟಿಡಿಎಸ್‌ 15% ಕಡಿತವಾಗುತ್ತದೆ. ನಿಮ್ಮ ವೇತನಕ್ಕೆ ಕಡಿತವಾಗುವ ಒಟ್ಟು ಟಿಡಿಎಸ್‌ ಅನ್ನು 1 2 ತಿಂಗಳಿಗೆ ವಿಭಾಗಿಸಿ ಪ್ರತಿ ತಿಂಗಳು ವೇತನ ಬಿಡುಗಡೆ ಆಗುವುದಕ್ಕೆ ಮುನ್ನ ಡಿಡಕ್ಟ್‌ ಮಾಡಲಾಗುತ್ತದೆ.

ಇದನ್ನೂ ಓದಿ: ವಿಸ್ತಾರ Money Guide : ಎಂಆರ್‌ಎಫ್‌ ಷೇರಿನಲ್ಲಿ 30,000 ರೂ. ಹೂಡಿಕೆ ಮಾಡಿರುತ್ತಿದ್ದರೆ ಈಗ 4 ಲಕ್ಷ ರೂ. ಲಾಭ!

Exit mobile version