ನವ ದೆಹಲಿ: ಕೇಂದ್ರ ಸರ್ಕಾರ ಎಲ್ಲ ಮೊಬೈಲ್‌ಫೋನ್‌ಗಳಿಗೆ ಒಂದೇ ಚಾರ್ಜರ್ ಅನ್ನು ತಯಾರಿಸುವ ಸಂಬಂಧ ತಜ್ಞರ ಸಮಿತಿಗಳನ್ನು ರಚಿಸಲಿದೆ. ಆದರೆ ಇದನ್ನು ಜಾರಿಗೊಳಿಸಲು (Common charger ) ಕಾಲಮಿತಿಯನ್ನು ನಿಗದಿಪಡಿಸಿಲ್ಲ.
ಕಾಲಮಿತಿ ವಿಧಿಸುವುದಕ್ಕೆ ಮುನ್ನ ಉದ್ಯಮ ವಲಯದ ಜತೆಗೆ ಸುದೀರ್ಘ ಸಮಾಲೋಚನೆಯ ಅಗತ್ಯವನ್ನು ಸರ್ಕಾರ ಮನಗಂಡಿದೆ. ಈ ಬಗ್ಗೆ ಸರ್ಕಾರ ಮೂರು ಅಧ್ಯಯನ ಸಮಿತಿಗಳನ್ನು ರಚಿಸಲಿದೆ.
ಎಲ್ಲ ಮೊಬೈಲ್‌ಫೋನ್, ಲ್ಯಾಪ್‌ಟಾಪ್, ಟಾಬ್ಲೆಟ್, ಸ್ಮಾರ್ಟ್ ಸ್ಪೀಕರ್, ವೈರ್‌ಲೆಸ್ ಇಯರ್‌ಬಡ್ಸ್, ಸ್ಮಾರ್ಟ್ ವಾಚ್ ಇತ್ಯಾದಿಗಳಿಗೆ ಒಂದೇ ಚಾರ್ಜರ್ ಬಳಸಲು ಸಾಧ್ಯವಾಗುವಂತೆ ನಿರ್ದಿಷ್ಟ ದರ್ಜೆಯನ್ನು ಸಿದ್ಧಪಡಿಸಲು ಹಾಗೂ ಭವಿಷ್ಯದಲ್ಲಿ ಒಂದೇ ಚಾರ್ಜರ್ ಸಿಗುವಂತಾಗಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರ ಸಮಿತಿ ಶಿಫಾರಸು ನೀಡಲಿದೆ.
ಈ ಬಗ್ಗೆ ಗ್ರಾಹಕ ವ್ಯವಹಾರಗಳ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಉತ್ಪಾದಕರು ಮತ್ತು ಇಂಡಸ್ಟ್ರಿಯ ಪಾಲುದಾರರ ಜತೆಗೆ ಆಗಸ್ಟ್ ೧೭ರಂದು ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಏಕರೂಪದ ಚಾರ್ಜರ್ ಪ್ರಸ್ತಾಪದ ಬಗ್ಗೆ ಡೆಲ್, ಎಚ್‌ಪಿ ಕಂಪನಿಗಳು ವಿರೋಧಿಸಿವೆ. ಈಗಾಗಲೇ ಯುಎಸ್‌ಬಿ-ಸಿ ಮಾದರಿಯ ಹಾಗೂ ಫೀಚರ್ ಫೋನ್ ಹೊರತುಪಡಿಸಿ ಉಳಿದ ಎಲ್ಲದಕ್ಕೂ ಅನ್ವಯವಾಗಬಲ್ಲ ಚಾರ್ಜರ್ ಅನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಡೆಲ್ ಮತ್ತು ಎಚ್‌ಪಿ ತಿಳಿಸಿವೆ. ಸ್ಯಾಮ್‌ಸಂಗ್, ಆಪಲ್, ಎಚ್‌ಪಿ, ಡೆಲ್, ಲೆನೊವೊ, ಫಿಕ್ಕಿ, ಸಿಐಐ, ಐಸಿಇಎ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಯುಎಸ್‌ಬಿ-ಸಿ ಮಾದರಿಯ ಚಾರ್ಜರ್
ತಜ್ಞರ ಸಮಿತಿಯು ಲ್ಯಾಪ್‌ಟಾಪ್, ಟಾಬ್ಲೆಟ್, ಸ್ಮಾರ್ಟ್‌ಫೋನ್ ಮತ್ತು ಫೀಚರ್‌ಫೋನ್, ಸ್ಟಾರ್ಟ್‌ವಾಚ್ ವಲಯವನ್ನು ಅಧ್ಯಯನ ನಡೆಸಲಿದೆ. ಈ ಎಲ್ಲವುಗಳಿಗೂ ಬಳಸಬಹುದಾದ ಯುಎಸ್‌ಬಿ-ಸಿ ಮಾದರಿಯ ಚಾರ್ಜರ್ ಅನ್ನು ಅಭಿವೃದ್ಧಿಪಡಿಸಲು ಪರಿಶೀಲಿಸಲಾಗುತ್ತಿದೆ. ಇದು ಅಭಿವೃದ್ಧಿಯಾದರೆ ಇ-ತ್ಯಾಜ್ಯವನ್ನು ಕಡಿಮೆ ಮಾಡಬಹುದು. ಇದು ಪರಿಸ್ರಸ್ನೇಹಿ ಯೋಜನೆಯಾಗಲಿದೆ. ಬಳಕೆದಾರರಿಗೂ ಫೀಚರ್ ಫೋನ್, ಸ್ಮಾರ್ಟ್‌ಫೋನ್, ಲ್ಯಾಪ್ ಟಾಪ್ ತನಕ ಎಲ್ಲದಕ್ಕೂ ಪ್ರತ್ಯೇಕ ಚಾರ್ಜರ್‌ಗಳ ಅವಶ್ಯಕತೆ ಆಗ ಇರುವುದಿಲ್ಲ.
ಲ್ಯಾಪ್‌ಟಾಪ್‌ಗೆ ಏಕರೂಪದ ಚಾರ್ಜರ್ ಸಾಧ್ಯವೇ?
ಐಟಿ ಹಾರ್ಡ್‌ವೇರ್ ಕಂಪನಿಗಳು ಲ್ಯಾಪ್ ಟಾಪ್‌ಗಳಿಗೆ ಏಕರೂಪದ ಚಾರ್ಜರ್ ಅಳವಡಿಸುವುದು ಕಷ್ಟಕರ ಎಂದಿವೆ. ಲ್ಯಾಪ್‌ಟಾಪ್‌ಗಳಿಗೆ ವಿದ್ಯುತ್ ಬೇಡಿಕೆ ಭಿನ್ನವಾಗಿರುತ್ತದೆ. ಆದ್ದರಿಂದ ಚಾರ್ಜಿಂಗ್ ಸ್ಟ್ಯಾಂಡರ್ಡ್‌ಗಳು ಭಿನ್ನವಾಗಿರುತ್ತದೆ ಎಂದು ಕಂಪನಿಗಳು ಪ್ರತಿಪಾದಿಸಿವೆ.
ಯುರೋಪಿನಲ್ಲಿ ಏಕರೂಪದ ಚಾರ್ಜರ್‌ಗೆ ಸಮ್ಮತಿ: ಯುರೋಪ್‌ನಲ್ಲಿ ಐರೋಪ್ಯ ಒಕ್ಕೂಟವು ಜೂನ್ ೭ರಂದು ಏಕರೀಪದ ಯುಎಸ್‌ಬಿ-ಸಿ ಚಾರ್ಜರ್‌ಗಳನ್ನು ಅಳವಡಿಸಲು ಸಮ್ಮತಿಸಲಾಗಿದೆ.
ಭಾರತವು ಚಾರ್ಜರ್‌ಗಳು ಮತ್ತು ಕೇಬಲ್‌ಗಳ ಅತಿ ದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಒಂದೇ ಚಾರ್ಜರ್ ಜಾರಿಯಾದರೆ ಈ ಉದ್ದಿಮೆಯ ಮೇಲೆ ಪ್ರಭಾವ ಬೀರಲಿದೆ.