ಬೆಂಗಳೂರು: ಕರ್ನಾಟಕವು ನೀತಿ ಆಯೋಗದ ಮಾದರಿಯಲ್ಲಿ ರಾಜ್ಯ ಮಟ್ಟದ ಸಾರ್ವಜನಿಕ ನೀತಿ ಕುರಿತ ಸಂಸ್ಥೆಯನ್ನು ಸ್ಥಾಪಿಸಲಿದೆ. ವಾರ್ಷಿಕ ೧೫೦ ಕೋಟಿ ರೂ.ಗಳ ಬಜೆಟ್ ಅನ್ನು ಇದಕ್ಕೆ ಒದಗಿಸಲಾಗುವುದು.
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಸಲುವಾಗಿ ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ಈ ನೂತನ “ಕರ್ನಾಟಕ ಪರಿವರ್ತನಾ ಸಂಸ್ಥೆ ( State Institute for Transformation of Karnataka- SITK) ಶಿಫಾರಸು ನೀಡಲಿದೆ. ರಾಜ್ಯದ ನೀತಿ ಆಯೋಗವನ್ನು ಇದು ಬದಲಿಸಲಿದೆ. ರಾಜ್ಯ ಮಟ್ಟದ ಚಿಂತನಾ ಬಳಗವಾಗಿ (Think Tank) ಆಗಿ ಇದು ಕಾರ್ಯ ನಿರ್ವಹಿಸಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಸ್ಥೆಯ ಅಧ್ಯಕ್ಷರಾಗಿ ಇರಲಿದ್ದಾರೆ.
ಕರ್ನಾಟಕ ಪರಿವರ್ತನೆ ಸಂಸ್ಥೆಯ ಸ್ವರೂಪ ಹೇಗಿರಲಿದೆ?: ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಅಭಿವೃದ್ಧಿಪರ ವಿಷಯಗಳಲ್ಲಿ ಪರಿಣತರನ್ನು ಉಪಾಧ್ಯಕ್ಷರಾಗಿ ನಾಮ ನಿರ್ದೇಶನ ಮಾಡಲಾಗುವುದು. ಒಟ್ಟು ೮ ಕ್ಷೇತ್ರಗಳ ಪರಿಣತರನ್ನು ಸಲಹೆಗಾರರಾಗಿ ನೇಮಿಸಲಾಗುವುದು. ಅವೆಂದರೆ-
೧. ಶಿಕ್ಷಣ, ೨. ಆರೋಗ್ಯ, ೩. ಕೃಷಿ ಮತ್ತು ಉದ್ಯಮ, ೪. ಗ್ರಾಮೀಣ ಮತ್ತು ನಗರಾಭಿವೃದ್ಧಿ, ೫. ವಿಜ್ಞಾನ ಮತ್ತು ತಂತ್ರಜ್ಞಾನ, ೬. ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ, ೭. ಶುದ್ಧ ಮತ್ತು ಹಸಿರು ಇಂಧನ, ೮. ಆರ್ಥಿಕತೆ ಮತ್ತು ಹಣಕಾಸು ವಲಯದ ಸಲಹೆಗಾರರನ್ನು ನೇಮಿಸಲಾಗುವುದು. ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುತ್ತಾರೆ.
ಪ್ರಮುಖ ಉದ್ದೇಶಗಳೇನು?
- ಸಂಪನ್ಮೂಲ ಅಭಿವೃದ್ಧಿಯ ಮೂಲಕ ಪ್ರಾದೇಶಿಕ ಅಸಮತೋಲನದ ನಿವಾರಣೆ. ಉತ್ತಮ ಆಡಳಿತ ಪದ್ಧತಿಯ ಅಳವಡಿಕೆ. ಆವಿಷ್ಕಾರಕ್ಕೆ ಉತ್ತೇಜನ.
- ರಾಜ್ಯ ಬಜೆಟ್ ಸಿದ್ಧಪಡಿಸಲು ನೆರವಾಗುವುದು. ರಾಜ್ಯದ ಒಟ್ಟು ಆಂತರಿಕ ಉತ್ಪನ್ನವನ್ನು (Gross state domestic product-GSDP) ಹೆಚ್ಚಿಸಲು ನೆರವಾಗುವುದು.
- ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಯೋಜನೆಗಳನ್ನು ಬಲಪಡಿಸುವುದು.
- ರಾಜ್ಯದ ಸಮಗ್ರ ಅಭಿವೃದ್ಧಿಗೆ ನಾಗರಿಕ ಸಮಾಜ, ವೃತ್ತಿಪರರು, ಅಂತಾರಾಷ್ಟ್ರೀಯ ತಜ್ಞರ ನೆರವುಪಡೆಯುವುದು.