ಲಂಡನ್: ವಾರದಲ್ಲಿ 4 ದಿನದ ಕೆಲಸದ (four day work week) ವ್ಯವಸ್ಥೆಯನ್ನು ಬ್ರಿಟನ್ ಪ್ರಾಯೋಗಿಕವಾಗಿ ಕೆಲವೆಡೆ ಜಾರಿಗೆ ತರುತ್ತಿದೆ. ಪೂರ್ಣ ಸಂಬಳ ಹಾಗೂ ವಾರದಲ್ಲಿ ಮೂರು ದಿನ ರಜೆ ಇದರ ಆಕರ್ಷಣೆ.
ನಿಗದಿತ ಕ್ಷೇತ್ರದಲ್ಲಿ ಕೆಲಸ ಮಾಡುವ ಕೆಲವು ಸಾವಿರ ಮಂದಿ ಉದ್ಯೋಗಿಗಳು ಈ ನಾಲ್ಕು ದಿನದ ವಾರದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಕಾರ್ಯಕ್ರಮ ಡಿಸೆಂಬರ್‌ವರೆಗೆ ಆರು ತಿಂಗಳು ನಡೆಯಲಿದ್ದು, ಸಿಬ್ಬಂದಿಯ ಉತ್ಪಾದಕತೆ ಮತ್ತು ಯೋಗಕ್ಷೇಮವನ್ನು ಈ ಮೂಲಕ ಅಳೆಯಲಾಗುತ್ತದೆ. ಸುಮಾರು 70 ಕಂಪನಿಗಳು ಇದರ ಭಾಗವಾಗಿವೆ.
4-ಡೇ ವೀಕ್ ಯುಕೆ ಪೈಲಟ್ ಕಾರ್ಯಕ್ರಮವನ್ನು ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳ ಶಿಕ್ಷಣತಜ್ಞರು, ಅಮೆರಿಕದ ಬೋಸ್ಟನ್ ಕಾಲೇಜ್‌ನ ಪರಿಣಿತರು ಸೇರಿದ ಥಿಂಕ್ ಟ್ಯಾಂಕ್ ಮತ್ತು ಎನ್‌ಜಿಒ ಸಂಯೋಜಿಸಿವೆ.
ಯುಕೆಯಾದ್ಯಂತ 30ಕ್ಕೂ ಹೆಚ್ಚು ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ 3,300ಕ್ಕೂ ಹೆಚ್ಚು ಕಾರ್ಮಿಕರು 80 ಪ್ರತಿಶತದಷ್ಟು ಸಮಯದಲ್ಲಿ 100 ಪ್ರತಿಶತ ವೇತನ ಪಡೆಯುತ್ತಿದ್ದಾರೆ ಎಂದು 4-ದಿನ ವಾರದ ಅಭಿಯಾನ ಹೇಳಿದೆ.
ಇದನ್ನೂ ಓದಿ: RBI rate hike: ನಿಮ್ಮ ಸಾಲಗಳ EMI ಎಷ್ಟು ಏರಲಿದೆ ಗೊತ್ತಾ?
4dayweek.co.uk ಪ್ರಕಾರ, ಉತ್ಪಾದಕತೆಯ ಅಳತೆಗಳು ಇಂದು ಬದಲಾಗುತ್ತಿವೆ. ಕೆಲಸದ ಸಮಯದ ಬದಲಾಗಿ ಆದಾಯದ ಪ್ರಮಾಣ, ಮಾರಾಟವಾದ ಉತ್ಪನ್ನ ಘಟಕಗಳ ಸಂಖ್ಯೆ, ನಿರ್ವಹಿಸಿದ ಗ್ರಾಹಕರ ಸಂಖ್ಯೆ ಅಥವಾ ಇತರ ಯಾವುದೇ ಅಳೆಯಬಹುದಾದ ಮಾನದಂಡಗಳು ಬಂದಿವೆ. ನಾಲ್ಕು ದಿನಗಳ ವಾರದಲ್ಲಿ ಹಿಂದೆ ಮಾಡುತ್ತಿದ್ದ ಕೆಲಸದ ಬೇಸ್‌ಲೈನ್ ಅನ್ನು ಹೊಂದಿಸಿಕೊಳ್ಳಲಾಗಿದೆ. ಶತಮಾನಗಳಷ್ಟು ಹಳೆಯದಾದ ಸಮಯ ಆಧಾರಿತ ವ್ಯವಸ್ಥೆಗೆ ಅಂಟಿಕೊಳ್ಳುವುದಲ್ಲಿ ಅರ್ಥವಿಲ್ಲ. ವಿಶೇಷವಾಗಿ ವೈಟ್ ಕಾಲರ್ ಕೆಲಸದ ಸ್ಥಳಗಳಲ್ಲಿ ವ್ಯವಹಾರಕ್ಕೆ ಹಾನಿಯಾಗದಂತೆ ಕೆಲಸದ ಸಮಯವನ್ನು ಕಡಿತಗೊಳಿಸಬಹುದು ಎಂದು ತಿಳಿಸಿದೆ.
ಜಾಗತಿಕವಾಗಿ ಅಮೆರಿಕ, ಕೆನಡಾ, ಬ್ರಿಟನ್, ಐರ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಾದ್ಯಂತ 7,000ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು 150 ಕಂಪನಿಗಳು ಈ ಕಾರ್ಯಕ್ರಮದ ಭಾಗವಾಗಿ ನಾಲ್ಕು ದಿನಗಳ ಕೆಲಸದ ವಾರದ ಪ್ರಯೋಗಗಳಲ್ಲಿ ಭಾಗವಹಿಸಲು ಮುಂದಾಗಿದ್ದಾರೆ. Cisco ಮತ್ತು Unilever Plcನಂತಹ ಕಂಪನಿಗಳು ಈಗಾಗಲೇ ಇದನ್ನು ಪರೀಕ್ಷಿಸಿವೆ. ಸಿಸ್ಕೊ ಪರೀಕ್ಷೆಯು ಈ ವರ್ಷದ ಆರಂಭದಲ್ಲಿ ಮಾನವ ಸಂಪನ್ಮೂಲ ಇಲಾಖೆಯ ಉದ್ಯೋಗಿಗಳೊಂದಿಗೆ ಪ್ರಾರಂಭವಾಗಿದೆ. ಬೆಲ್ಜಿಯಂ, ಐಸ್‌ಲ್ಯಾಂಡ್, ಸ್ಕಾಟ್ಲೆಂಡ್ ಮತ್ತು ವೇಲ್ಸ್, ಸ್ವೀಡನ್ ಮತ್ತು ಸ್ಪೇನ್‌ನಂತಹ ದೇಶಗಳು ಹೊಸ ವ್ಯವಸ್ಥೆಯನ್ನು ಪ್ರಯೋಗಿಸುತ್ತಿವೆ.
ಇದನ್ನೂ ಓದಿ: ವಿಸ್ತಾರ Explainer: ರಾಜ್ಯಸಭೆ ಮೇಲುಗೈಗೆ ಬಿಗ್ ಫೈಟ್, ಮೇಲ್ಮನೆಗೆ ಇರುವ ಪವರ್ ಏನು? ಸದಸ್ಯರ ಆಯ್ಕೆ ಮಾಡೋದು ಹೇಗೆ?