Site icon Vistara News

Foxconn : ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಆರ್&ಡಿ ಘಟಕ ಸ್ಥಾಪನೆಗೆ ಫಾಕ್ಸ್‌ಕಾನ್‌ ಚಿಂತನೆ

faxconn

faxconn

ಬೆಂಗಳೂರು: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ (R&D) ಸ್ಥಾಪನೆಗೆ ಐಫೋನ್‌ ತಯಾರಕ ಫಾಕ್ಸ್‌ಕಾನ್‌ ಚಿಂತನೆ ನಡೆಸಿದೆ. ಕಂಪನಿಯು ಚೆನ್ನೈನಲ್ಲಿರುವ ಘಟಕವನ್ನು ವಿಸ್ತರಿಸಲು ಕೂಡ ನಿರ್ಧರಿಸಿದೆ. ಇದಕ್ಕಾಗಿ ಎರಡು ಹೆಚ್ಚುವರಿ ಕಟ್ಟಡಗಳನ್ನು ಚೆನ್ನೈನಲ್ಲಿ ಹೊಂದಲಿದೆ.

ಭಾರತದಲ್ಲಿ ಆ್ಯಪಲ್‌ ತನ್ನ ಕಾರ್ಯಚಟುವಟಿಕೆಗಳನ್ನು ವ್ಯಾಪಕವಾಗಿ ವಿಸ್ತರಿಸುತ್ತಿರುವುದಕ್ಕೆ ಇದು ನಿದರ್ಶನವಾಗಿದೆ. ದೇಶದಲ್ಲಿ ಆ್ಯಪಲ್‌ನ ಮೊದಲ ರಿಟೇಲ್‌ ಮಳಿಗೆಯನ್ನು ತೆರೆಯಲು ಸಿಇಒ ಟಿಮ್‌ ಕುಕ್‌ ಭಾರತಕ್ಕೆ ಆಗಮಿಸಿರುವ ವೇಳೆಯಲ್ಲಿ ಫಾಕ್ಸ್‌ಕಾನ್‌ ತನ್ನ ವಿಸ್ತರಣೆಯನ್ನು ಪ್ರಕಟಿಸಿದೆ. ಭಾರತ ಜಗತ್ತಿನ ಎರಡನೇ ದೊಡ್ಡ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಯಾಗಿದೆ.

ಫಾಕ್ಸ್‌ಕಾನ್‌ ಆ್ಯಪಲ್‌ನ ಅತಿ ದೊಡ್ಡ ಐಫೋನ್‌ ತಯಾರಕ ಗುತ್ತಿಗೆದಾರನಾಗಿದೆ. ದೇಶೀಯ ಬೇಡಿಕೆ ಮತ್ತು ರಫ್ತು ಬೇಡಿಕೆ ವೃದ್ಧಿಸಿರುವುದು ಕಂಪನಿಯನ್ನು ಉತ್ತೇಜಿಸಿದೆ. ಕೇಂದ್ರ ಸರ್ಕಾರದ ಪಿಎಲ್‌ಐ ಯೋಜನೆಯ ಪ್ರಯೋಜನ ಪಡೆಯಲು ಫಾಕ್ಸ್‌ಕಾನ್‌ ಬಯಸಿದೆ. ಚೀನಾದಲ್ಲಿ ಪ್ರತಿಕೂಲ ವಾತಾವರಣ ಇರುವುದೂ ಭಾರತದಲ್ಲಿ ಕಂಪನಿಯ ವಿಸ್ತರಣೆಗೆ ಮತ್ತೊಂದು ಕಾರಣ.

ಭಾರತದಲ್ಲಿ ಆ್ಯಪಲ್‌ ಕಂಪನಿ ತನ್ನ ಐಫೋನ್‌ಗಳ ( Apple iPhone) ಮಾರಾಟವನ್ನು ಶುರು ಮಾಡಿ 15 ವರ್ಷಗಳ ಬಳಿಕ ಮೊದಲ ರಿಟೇಲ್‌ ಸ್ಟೋರ್‌ ಅನ್ನು ಮುಂಬಯಿನಲ್ಲಿ ತೆರೆದಿದೆ. ವಿಶ್ವದ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಾಗಿರುವ ಭಾರತದಲ್ಲಿ ಆ್ಯಪಲ್‌ ಹಲವಾರು ಬಿಸಿನೆಸ್‌ ಸವಾಲುಗಳನ್ನು ಎದುರಿಸಿತ್ತು. ಅಮೆರಿಕ ಮೂಲದ ಆ್ಯಪಲ್‌ ಕಂಪನಿ, ಭಾರತದಲ್ಲಿ ತನ್ನ ಗುತ್ತಿಗೆ ಆಧಾರಿತ ಉತ್ಪಾದಕರ ಮೂಲಕ ಐಫೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸಿದೆ.‌

ಐಫೋನ್‌ ರಫ್ತು ಗುರಿ ಎಷ್ಟಿದೆ ಗೊತ್ತೇ?

ಭಾರತದಿಂದ ಮೊಟ್ಟ ಮೊದಲ ಬಾರಿಗೆ 5 ಶತಕೋಟಿ ಡಾಲರ್‌ ಮೌಲ್ಯದ (40,000 ಕೋಟಿ ರೂ.) ಆ್ಯಪಲ್ ಐಫೋನ್‌ ರಫ್ತಾಗಿದೆ. (5 ಶತಕೋಟಿ ಡಾಲರ್)‌ ಆ್ಯಪಲ್ ಕಂಪನಿಯು 2021-22ರಲ್ಲಿ 11,000 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿತ್ತು. ಕೇಂದ್ರ ಸರ್ಕಾರದ ಪಿಎಲ್‌ಐ ಯೋಜನೆ ಕೂಡ ಇದಕ್ಕೆ ಕಾರಣವಾಗಿದೆ ಎಂದು ಇಂಡಿಯಾ ಸೆಲ್ಯುಲಾರ್‌ & ಎಲೆಕ್ಟ್ರಾನಿಕ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಪಂಕಜ್‌ ಮೊಹಿಂದಾರೊ ತಿಳಿಸಿದ್ದಾರೆ.

ಸ್ಮಾರ್ಟ್‌ಫೋನ್‌ಗಳ ಒಟ್ಟು ರಫ್ತು 10 ಶತಕೋಟಿ ಡಾಲರ್‌ಗೆ (82,000 ಕೋಟಿ ರೂ.) ಏರಿದೆ. ಭಾರತದಲ್ಲಿ ಆ್ಯಪಲ್ ಕಂಪನಿಯು ತನ್ನ ಐಫೋನ್‌ ಉತ್ಪಾದನೆಯನ್ನು ಗಣನೀಯವಾಗಿ ಏರಿಸಿರುವುದು ಇದಕ್ಕೆ ಕಾರಣ. ಭಾರತವನ್ನು ಸ್ಮಾರ್ಟ್‌ಫೋನ್‌ ಉತ್ಪಾದನೆಯ ಪ್ರಮುಖ ತಾಣವನ್ನಾಗಿಸುವ ಮೇಕ್‌ ಇನ್‌ ಇಂಡಿಯಾ ಅಭಿಯಾನಕ್ಕೆ ಇದರಿಂದ ಪುಷ್ಟಿ ಸಿಗಲಿದೆ.

ಆ್ಯಪಲ್ ಕಂಪನಿಯ ಭರ್ಜರಿ ಉತ್ಪಾದನೆಯ ಪರಿಣಾಮ ಭಾರತದಿಂದ 2022-23ರಲ್ಲಿ ಒಟ್ಟು 10 ಶತಕೋಟಿ ಡಾಲರ್‌ ಮೌಲ್ಯದ ಸ್ಮಾರ್ಟ್‌ಫೋನ್‌ಗಳು ರಫ್ತಾಗಿದೆ. (ಅಂದಾಜು 80,000 ಕೋಟಿ ರೂ.) ಸ್ಯಾಮ್‌ಸಂಗ್‌ 4 ಶತಕೋಟಿ ಡಾಲರ್‌ (32,000 ಕೋಟಿ ರೂ.) ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ ಎಂದು ಉದ್ಯಮ ವಲಯದ ಅಂಕಿ ಅಂಶಗಳು ತಿಳಿಸಿವೆ.

ಭಾರತದಲ್ಲಿ ತಯಾರಾಗುವ ಆ್ಯಪಲ್ ಐಫೋನ್‌ಗಳು ಈಗ ಬ್ರಿಟನ್‌, ಇಟಲಿ, ಫ್ರಾನ್ಸ್‌, ಮಧ್ಯಪ್ರಾಚ್ಯ, ಜಪಾನ್‌, ಜರ್ಮನಿ, ರಷ್ಯಾಕ್ಕೆ ರಫ್ತಾಗುತ್ತಿವೆ. ಆ್ಯಪಲ್ ಕಂಪನಿಯ ಒಟ್ಟು ಐಫೋನ್‌ ಉತ್ಪಾದನೆಯಲ್ಲಿ 5% ಪಾಲು ಭಾರತದಲ್ಲಿ ಈಹ ತಯಾರಾಗುತ್ತಿದೆ. 2020ರಲ್ಲಿ 1%ಗಿಂತಲೂ ಕಡಿಮೆ ಇತ್ತು. ಭಾರತದ ಎಲೆಕ್ಟ್ರಾನಿಕ್ಸ್‌ ರಫ್ತಿನಲ್ಲಿ ಮೊಬೈಲ್‌ ಫೋನ್‌ ಗಣನೀಯ ಪಾತ್ರವನ್ನು ವಹಿಸುತ್ತಿದೆ. ಜೆಪಿ ಮೋರ್ಗಾನ್‌ ವರದಿಯ ಪ್ರಕಾರ ಆ್ಯಪಲ್ 2025ರೊಳಗೆ ತನ್ನ ಐಫೋನ್‌ ಉತ್ಪಾದನೆಯಲ್ಲಿ 25% ಪಾಲನ್ನು ಭಾರತದಲ್ಲಿ ತಯಾರಿಸಲಿದೆ.

ಟಾಟಾ ಗ್ರೂಪ್‌ ನಡೆ ಏನಿರಬಹುದು?

ಟಾಟಾ ಗ್ರೂಪ್‌ ಬೆಂಗಳೂರಿಗೆ ಸಮೀಪದ ಕೋಲಾರದ ನರಸಾಪುರದಲ್ಲಿರುವ ವಿಸ್ಟ್ರಾನ್‌ ಐಫೋನ್‌ ಘಟಕವನ್ನು ಖರೀದಿಸಲು (Wistron iPhone plant) ಸಜ್ಜಾಗಿದೆ. ಏಪ್ರಿಲ್‌ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣವಾಗುವ ಸಾಧ್ಯತೆ ಇದೆ. ಇದು ಕಾರ್ಯಗತವಾದರೆ ಆ್ಯಪಲ್‌ ಐಫೋನ್‌ಗಳನ್ನು ತಯಾರಿಸುವ ಭಾರತದ ಮೊಟ್ಟ ಮೊದಲ ಕಂಪನಿಯಾಗಿ ಟಾಟಾ ಗ್ರೂಪ್‌ ಹೊರಹೊಮ್ಮಲಿದೆ. ಟಾಟಾ ಗ್ರೂಪ್‌ (Tata Group) ಈಗಾಗಲೇ ಇದಕ್ಕಾಗಿ ಪೂರ್ವ ತಯಾರಿ ನಡೆಸುತ್ತಿದೆ.

ಒಂದು ವೇಳೆ ಟಾಟಾ ಗ್ರೂಪ್‌, ವಿಸ್ಟ್ರಾನ್‌ ಘಟಕವನ್ನು ಖರೀದಿಸಿದರೆ 2,000 ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಮಧ್ಯಮ ಸ್ತರದಲ್ಲಿರುವ 400 ಸಿಬ್ಬಂದಿ ವಲಸೆ ಹೋಗುವ ಸಾಧ್ಯತೆಯೂ ಇದೆ. 4-5 ಹಿರಿಯ ಉದ್ಯೋಗಿಗಳಿಗೆ ಕಂಪನಿ ಬಿಡುವಂತೆ ತಿಳಿಸಲಾಗಿದೆ.

ಟಾಟಾ ಗ್ರೂಪ್‌, ತೈವಾನ್‌ ಮೂಲದ ವಿಸ್ಟ್ರಾನ್‌ನ ಘಟಕವನ್ನು ಖರೀದಿಸಿದರೆ, ಐಫೋನ್‌ 15 ಉತ್ಪಾದನೆಗೆ ಮುಂದಾಗುವ ಸಾಧ್ಯತೆಯೂ ಇದೆ. ಪ್ರಸ್ತುತ ಘಟಕವು ಐಫೋನ್‌ 12 ಮತ್ತು ಐಫೋನ್‌ 14 ಅನ್ನು ಉತ್ಪಾದಿಸುತ್ತಿದೆ. ಟಾಟಾ ಗ್ರೂಪ್‌ಗೆ ತನ್ನ ಘಟಕವನ್ನು ಮಾರಾಟ ಮಾಡಿದ ಬಳಿಕ ವಿಸ್ಟ್ರಾನ್‌ ಸಂಪೂರ್ಣವಾಗಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಲಿದೆ. ಏಕೆಂದರೆ ಕಂಪನಿಯು ಭಾರತದಲ್ಲಿ ಇದೊಂದೇ ಘಟಕದಲ್ಲಿ ಉತ್ಪಾದಿಸುತ್ತಿದೆ. ಭಾರತದ ಆ್ಯಪಲ್‌ ಐಫೋನ್‌ ಮಾರುಕಟ್ಟೆ 600 ದಶಲಕ್ಷ ಡಾಲರ್‌ಗಳಾಗಿದೆ.( 4920 ಕೋಟಿ ರೂ.)

ಬೆಂಗಳೂರಿನಿಂದ ಪೂರ್ವಕ್ಕೆ 50 ಕಿ.ಮೀ ದೂರದಲ್ಲಿ ವಿಸ್ಟ್ರಾನ್‌ನ ಐಫೋನ್ ಉತ್ಪಾದನಾ ಘಟಕ ಇದೆ. ಕಳೆದ ಕೆಲವು ತಿಂಗಳುಗಳಿಂದ ಮಾತುಕತೆ ನಡೆಯುತ್ತಿದೆ. ಅಮೆರಿಕ-ಚೀನಾ ವ್ಯಾಪಾರ ಸಂಘರ್ಷದ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾ ಮೂಲದ ಕ್ಯಪರ್ಟಿನೊ ಕಂಪನಿಯು ಕಳೆದ ವರ್ಷ 25% ಉತ್ಪಾದನೆಯನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸಲು ನಿರ್ಧರಿಸಿತ್ತು. ತೈವಾನ್‌ನ ಮೂರು ಕಂಪನಿಗಳು ಭಾರತದಲ್ಲಿ ಆ್ಯಪಲ್‌ ಐಫೋನ್‌ಗಳನ್ನು ತಯಾರಿಸುತ್ತಿವೆ, ಅವುಗಳೆಂದರೆ ವಿಸ್ಟ್ರಾನ್‌, ಪೆಗಟ್ರೋನ್‌, ಫಾಕ್ಸ್‌ಕಾನ್.

ಟಾಟಾ ಗ್ರೂಪ್‌ ಆ್ಯಪಲ್‌ ಕಂಪನಿಯ ಜತೆಗೂಡಿ ತನ್ನ ಉತ್ಪಾದನೆಯನ್ನು ಹೆಚ್ಚಿಸಲು ಉದ್ದೇಶಿಸಿದೆ. ಪೆಗಟ್ರೋನ್‌ನ ಐಫೋನ್‌ ಉತ್ಪಾದನಾ ಘಟಕವನ್ನು ಕೂಡ ಖರೀದಿಸಲು ಟಾಟಾ ಗ್ರೂಪ್‌ ಉದ್ದೇಶಿಸಿದೆ. 2021ರ ಡಿಸೆಂಬರ್‌ನಲ್ಲಿ ವಿಸ್ಟ್ರಾನ್‌ ನ ಐಫೋನ್‌ ಕಾರ್ಖಾನೆಯಲ್ಲಿ ಸಾವಿರಾರು ಗುತ್ತಿಗೆ ಆಧಾರಿತ ಕಾರ್ಮಿಕರು ವೇತನ ಬಾಕಿ ವಿತರಣೆಗೆ ಒತ್ತಾಯಿಸಿ ನಡೆಸಿದ ಪ್ರತಿ ಭಟನೆ ಹಿಂಸಾಚಾರಕ್ಕೆ ಕಾರಂವಾಗಿತ್ತು.

Exit mobile version