ಬೆಂಗಳೂರು: ಜಿಎಸ್‌ಟಿ ದರ ಏರಿಕೆಯ (GST rate hike) ಪರಿಣಾಮ ನಿರೀಕ್ಷೆಯಂತೆ ಇಂದಿನಿಂದ ಅಕ್ಕಿ, ರಾಗಿ, ಗೋಧಿ ಇತ್ಯಾದಿ ಆಹಾರ ಧಾನ್ಯಗಳ ದರಗಳು ಹೆಚ್ಚಳವಾಗಿದೆ. ಬೆಲೆ ಹೆಚ್ಚಳದ ಹೊಸ ಹೊಡೆತವನ್ನು ಜನ ಸಾಮಾನ್ಯರು ಎದುರಿಸಬೇಕಾಗಿದೆ. ಮಾತ್ರವಲ್ಲದೆ ಹೋಟೆಲ್ ರೂಮ್‌ಗಳ ಬಾಡಿಗೆ, ಆಸ್ಪತ್ರೆಯ ಖರ್ಚುವೆಚ್ಚ ಕೂಡ ಹೆಚ್ಚಳವಾಗುತ್ತಿದೆ. ಬಳಕೆದಾರರು, ವ್ಯಾಪಾರಿಗಳು, ಹೆಲ್ತ್‌ಕೇರ್ ವಲಯದ ವ್ಯಾಪಕ ವಿರೋಧದ ನಡುವೆಯೂ ಜಿಎಸ್‌ಟಿ ಹೆಚ್ಚಳದ ಹೊಡೆತ ಬಿದ್ದಿದೆ.
ಚಂಡೀಗಢದಲ್ಲಿ ಇತ್ತೀಚೆಗೆ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿತ್ಯೋಪಯೋಗಿ ವಸ್ತುಗಳ ಮೇಲೆ ನೀಡಲಾಗಿದ್ದ ಜಿಎಸ್‌ಟಿ ವಿನಾಯಿತಿಯನ್ನು ರದ್ದುಪಡಿಸಿರುವುದು ಇದಕ್ಕೆ ಕಾರಣ.
ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುವ ಹಾಲು, ಮೊಸರು, ಮಜ್ಜಿಗೆ, ಅಕ್ಕಿ, ರಾಗಿ, ಗೋಧಿ ಮತ್ತಿತರ ಆಹಾರ ವಸ್ತುಗಳ ಮೇಲೆ ಈ ಹಿಂದೆ ನೀಡಿದ್ದ ಜಿಎಸ್‌ಟಿ ವಿನಾಯಿತಿಯನ್ನು ರದ್ದುಪಡಿಸಲಾಗಿದೆ. ಇದರ ಪರಿಣಾಮ ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುವ ಅಕ್ಕಿ, ರಾಗಿ, ಹಾಲು, ಮಜ್ಜಿಗೆ, ಮೊಸರು, ಲಸ್ಸಿ ಇತ್ಯಾದಿಗಳ ಮೇಲೆ ೫% ಜಿಎಸ್‌ಟಿ ಅನ್ವಯವಾಗಲಿದೆ. ಈ ಹೊರೆಯನ್ನು ಕಂಪನಿಗಳು ಗ್ರಾಹಕರ ಮೇಲೆ ವರ್ಗಾಯಿಸಲಿವೆ. ಇದರ ಪರಿಣಾಮ ಗ್ರಾಹಕರ ಜೇಬಿಗೆ ಭಾರವಾಗಲಿದೆ.
ನಂದಿನಿ ಮೊಸರು ಕೆ.ಜಿಗೆ ದರ ೪೬ ರೂ, ಹಾಲಿನ ದರ ಯಥಾಸ್ಥಿತಿ
ನಂದಿನಿ ಮೊಸರು, ನಂದಿನಿ ಮಸಾಲ ಮಜ್ಜಿಗೆ ಮತ್ತು ನಂದಿನಿ ಸ್ವೀಟ್ ಲಸ್ಸಿಗಳ ದರದಲ್ಲಿ ೧ ರೂ.ಗಳಿಂದ ೩ ರೂ. ತನಕ ಹೆಚ್ಚಳವಾಗಲಿದೆ. ಈ ಬಗ್ಗೆ ಕೆಎಂಎಫ್ ಪ್ರಕಟಣೆ ಹೊರಡಿಸಿದ್ದು, ನಂದಿನಿ ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಇಂದಿನಿಂದ ೨೦೦ ಗ್ರಾಂ ಮೊಸರಿನ ಪ್ಯಾಕೇಟ್ ಬೆಲೆಯಲ್ಲಿ ೨ ರೂ ಹೆಚ್ಚಳವಾಗಿದೆ. ಅಂದರೆ ೧೦ ರೂ.ಗಳಿಂದ ೧೨ ರೂ.ಗೆ ಏರಿದೆ. ೫೦೦ ಗ್ರಾಂ ಮೊಸರಿನ ಬೆಲೆ ೨೨ರಿಂದ ೨೪ ರೂ.ಗಳಿಗೆ ಏರಲಿದೆ. ಒಂದು ಕೆ.ಜಿ ಮೊಸರಿನ ಬೆಲೆ ೪೩ ರಿಂದ ೪೬ ರೂ.ಗೆ ಏರಿಕೆಯಾಗಲಿದೆ.
ನಂದಿನಿ ಮಸಾಲ ಮಜ್ಜಿಗೆ ಚಿಕ್ಕ ಪ್ಯಾಕೇಟ್ (೨೦೦ಗ್ರಾಂ)ನ ಬೆಲೆ ೭ರಿಂದ ೮ ರೂ.ಗಳಾದರೆ, ನಂದಿನಿ ಸ್ವೀಟ್ ಲಸ್ಸಿಯ ಬೆಲೆಯು (೨೦೦ಗ್ರಾಂ) ೧೦ರಿಂದ೧೧ರೂ.ಗೆ ಏರಲಿದೆ. ಈ ಸಂಬಂಧ ಕೆಎಂಎಫ್ ಶನಿವಾರ ಅಧಿಕೃತ ಆದೇಶ ಹೊರಡಿಸಿದ್ದು, ಜು.೧೮ರ ಸೋಮವಾರದಿಂದ ಜಾರಿಯಾಗಿದೆ. ಮೊಸರು, ಮಜ್ಜಿಗೆ, ಲಸ್ಸಿ ಪ್ಯಾಕೇಟ್ ಮೇಲೆ ಹಳೆಯ ದರವೇ ಇರಲಿದ್ದು, ಹೊಸ ದರವನ್ನು ಗ್ರಾಹಕರು ನೀಡಬೇಕಾಗುತ್ತದೆ.
ಜಿಎಸ್‌ಟಿ ದರ ಹೆಚ್ಚಳವು ಕೆಎಂಎಫ್‌ಗೆ ಹೊರೆಯಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಕೆಲ ಉತ್ಪನ್ನಗಳ ಮೇಲಿನ ಬೆಲೆಯನ್ನು ೨-೩ರೂ.ಗಳಷ್ಟು ಮಾತ್ರ ಹೆಚ್ಚಿಸಲಾಗುತ್ತಿದೆ. ಜಿಎಸ್‌ಟಿ ಮಂಡಳಿಯ ಈ ಕ್ರಮದಿಂದ ಹಾಲು ಒಕ್ಕೂಟಗಳಿಗೆ ತೀವ್ರವಾದ ಹೊಡೆತ ಬೀಳುತ್ತಿದ್ದು, ಪರಿಸ್ಥಿತಿಯನ್ನು ಎದುರಿಸಲು ಬೆಲೆ ಹೆಚ್ಚಳವು ಅನಿವಾರ್ಯವಾಗಿದೆ ಎಂದು ಕೆಎಂಎಫ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದು ದುಬಾರಿಯಾಗಲಿದೆ?
ಪ್ಯಾಕೇಜ್ಡ್ ಮೊಸರು, ಮಜ್ಜಿಗೆ, ಲಸ್ಸಿ, ಜೇನುತುಪ್ಪ : ಪ್ರಿ-ಪ್ಯೇಕೇಜ್ಡ್ ಮತ್ತು ಪ್ರಿ-ಲೇಬಲ್ಡ್ ಉತ್ಪನ್ನಗಳು ದುಬಾರಿಯಾಗಲಿವೆ. ಪ್ಯಾಕ್‌ಗಳಲ್ಲಿ ಸಿದ್ಧಪಡಿಸಿ ಮಾರಾಟ ಮಾಡುವ ಪನೀರ್, ಹಾಲು, ಮೊಸರು, ಲಸ್ಸಿ, ಮಜ್ಜಿಗೆ, ಜೇನುತುಪ್ಪ, ಮೀನು ಮತ್ತು ಮಾಂಸ, ಬಾರ್ಲಿ, ಓಟ್ಸ್, ಜೋಳದ ಹಿಟ್ಟು, ಬೆಲ್ಲ, ಮಂಡಕ್ಕಿಗೆ ನೀಡಿದ್ದ ತೆರಿಗೆ ವಿನಾಯಿತಿ ರದ್ದಾಗಲಿದೆ. ಈ ಹಿಂದೆ ಈ ಎಲ್ಲ ಉತ್ಪನ್ನಗಳಿಗೆ ಜಿಎಸ್‌ಟಿ ಇರಲಿಲ್ಲ. ಶಾಪಿಂಗ್ ಮಾಲ್, ಸೂಪರ್ ಮಾರ್ಕೆಟ್‌ಗಳಿಂದ ಸಾಮಾನ್ಯ ಸ್ಟೋರ್‌ಗಳಲ್ಲಿಯೂ ಇಂಥ ಪ್ಯಾಕೇಜ್ಡ್ ಆಹಾರ ವಸ್ತುಗಳ ಮಾರಾಟ ಸಾಮಾನ್ಯವಾಗಿದೆ. ಹೀಗಾಗಿ ಗ್ರಾಹಕರ ಜೇಬಿಗೆ ಭಾರವಾಗಲಿದೆ. ಹೀಗಿದ್ದರೂ, ನಂದಿನಿ ಹಾಲಿನ ದರ ಮಾತ್ರ ಬದಲಾವಣೆ ಆಗುತ್ತಿಲ್ಲ ಎಂಬುದು ಸ್ವಲ್ಪ ಸಮಾಧಾನ.
ಪ್ಯಾಕೇಜ್ಡ್ ಹಿಟ್ಟು, ಅಕ್ಕಿ: ಬ್ರ್ಯಾಂಡ್ ಅಲ್ಲದಿದ್ದರೂ ಪ್ರಿ-ಪ್ಯಾಕೇಜ್ಡ್ ಮತ್ತು ಲೇಬಲ್ಡ್ ಆಗಿರುವ ಅಕ್ಕಿ, ಹಿಟ್ಟುಗಳ ಮೇಲೆ ೫% ಜಿಎಸ್‌ಟಿ ಅನ್ವಯವಾಗಲಿದ್ದು, ಅವುಗಳ ದರ ಏರಿಕೆಯಾಗಲಿದೆ. ಪ್ರಸ್ತುತ ಬ್ರ್ಯಾಂಡೆಡ್ ಉತ್ಪನ್ನಗಳಿಗೆ ಮಾತ್ರ ೫% ಜಿಎಸ್‌ಟಿ ಇದೆ.
೫% ಜಿಎಸ್‌ಟಿ ಸೇರಿಸಿದರೆ ದರ ಎಷ್ಟಾಗಲಿದೆ?
- ಜಿಎಸ್‌ಟಿ ಸೇರಿಸಿದರೆ ೧ ಕೆ.ಜಿ ಅಕ್ಕಿಯ ದರ ೫೦ ರೂ.ಗೆ ಏರಿಕೆಯಾಗಲಿದೆ. ೧೦ ಕೆ.ಜಿಗೆ ೫೨೫ ರೂ.ಗೆ ವೃದ್ಧಿಸಲಿದೆ.
- ಹೆಸರು ಬೇಳೆ ದರ ೧ ಕೆ.ಜಿಗೆ ೧೧೦ ರೂ, ೧೦ ಕೆ.ಜಿಗೆ ೧,೧೫೫ ರೂ.ಗೆ ಏರಿಕೆಯಾಗಲಿದೆ.
- ತೊಗರಿ ಬೇಳೆ ದರ ಕೆ.ಜಿಗೆ ೧೦೦ ರೂ, ೧೦ ಕೆ.ಜಿಗೆ ೧,೧೫೫ ರೂ.ಗೆ ಹೆಚ್ಚಲಿದೆ.
- ಉದ್ದಿನ ಬೇಳೆ ಕೆ.ಜಿಗೆ ೧೨೦ ರೂ, ೧೦ ಕೆ.ಜಿಗೆ ೧೨೬೦ ರೂ.ಗೆ ಏರಿಕೆಯಾಗಲಿದೆ.
- ಕಡಲೆ ಬೇಳೆ ಕೆ.ಜಿಗೆ ೭೫ ರೂ, ೧೦ ಕೆ.ಜಿಗೆ ೬೮೨ ರೂ.ಗೆ ವೃದ್ಧಿಸಲಿದೆ.
- ಹುರಿಗಡಲೆ ಕೆ.ಜಿಗೆ ೮೦ ರೂ, ೧೦ ಕೆ.ಜಿಗೆ ೮೦೦ ರೂ.ಗೆ ಹೆಚ್ಚಳವಾಗಲಿದೆ.
- ಬಟಾಣಿ ಕೆ.ಜಿಗೆ ೮೫ ರೂ, ೧೦ ಕೆ.ಜಿಗೆ ೮೯೨ ರೂ.ಗೆ ಏರಿಕೆಯಾಗಲಿದೆ.
- ಗೋಧಿ ಕೆ.ಜಿಗೆ ೪೫ ರೂ, ೧೦ ಕೆ.ಜಿಗೆ ೪೭೨ ರೂ.ಗೆ ವೃದ್ಧಿಸಲಿದೆ.
- ಬೆಲ್ಲ ಕೆ.ಜಿಗೆ ೬೦ ರೂ. ೧೦ ಕೆ.ಜಿಗೆ ೪೭೨ ರೂ.ಗೆ ಹೆಚ್ಚಲಿದೆ.
ಚೆಕ್ ಪುಸ್ತಕ: ಬ್ಯಾಂಕ್‌ಗಳು ನೀಡುವ ಚೆಕ್ ಪುಸ್ತಕಗಳ ಮೇಲೆ ೧೮% ಜಿಎಸ್‌ಟಿ ಅನ್ವಯವಾಗಲಿದೆ. ಹೀಗಾಗಿ ಚೆಕ್ ಬುಕ್ ವೆಚ್ಚ ಏರಿಕೆಯಾಗಲಿದೆ.
ಆಸ್ಪತ್ರೆಯಲ್ಲಿ ಕೊಠಡಿ ಬಾಡಿಗೆ: ಆಸ್ಪತ್ರೆಗಳಲ್ಲಿ ದಿನಕ್ಕೆ ೫,೦೦೦ ರೂ.ಗೂ ಹೆಚ್ಚಿನ ಕೊಠಡಿ ಬಾಡಿಗೆಗೆ ( ಐಸಿಯು ಹೊರತುಪಡಿಸಿ) ೫% ಜಿಎಸ್‌ಟಿ ಅನ್ವಯಿಸಲಿದೆ.
ಹೋಟೆಲ್ ರೂಮ್ ಬಾಡಿಗೆ
ಹೋಟೆಲ್‌ಗಳಲ್ಲಿ ದಿನಕ್ಕೆ ೧,೦೦೦ ರೂ.ಗಿಂತ ಕಡಿಮೆ ಬಾಡಿಗೆಯ ರೂಮ್‌ಗಳಲ್ಲಿ ವಾಸ್ತವ್ಯಕ್ಕೆ ೧೨% ಜಿಎಸ್‌ಟಿ ಅನ್ವಯವಾಗಲಿದೆ. ಈ ಹಿಂದೆ ತೆರಿಗೆ ವಿನಾಯಿತಿ ಇತ್ತು. ಹೀಗಾಗಿ ಹೋಟೆಲ್ ಬಾಡಿಗೆ ದರ ಹೆಚ್ಚಳವಾಗಲಿದೆ.
ಇ-ತ್ಯಾಜ್ಯಗಳಿಗೆ ಜಿಎಸ್‌ಟಿ ಈಗಿನ ೫%ರಿಂದ ೧೮%ಕ್ಕೆ ಏರಿಕೆಯಾಗಲಿದೆ.
ಅಂಚೆ ಸೇವೆ: ಪೋಸ್ಟ್ ಕಾರ್ಡ್, ೧೦ ಗ್ರಾಮ್‌ಗಿಂತ ಕೆಳಗಿನ ಎನ್ವಲಪ್ ಹೊರತುಪಡಿಸಿ ಉಳಿದ ಅಂಚೆ ಇಲಾಖೆ ಸೇವೆಗೆ ತೆರಿಗೆ ವಿನಾಯಿತಿಯನ್ನು ರದ್ದುಪಡಿಸಲಾಗಿದ್ದು, ಅವುಗಳು ತುಟ್ಟಿಯಾಗಲಿದೆ.
ಸಕ್ಕರೆ, ನೇಚ್ಯುರಲ್ ಫೈಬರ್ ದಾಸ್ತಾನು, ವೇರ್‌ಹೌಸ್ (ಗೋದಾಮು) ಸೇವೆಗೆ ತೆರಿಗೆ ವಿನಾಯಿತಿ ರದ್ದಾಗಲಿದೆ.
ಎಲ್‌ಇಡಿ ಬಲ್ಬ್
ಎಲ್‌ಇಡಿ ಬಲ್ಬ್, ಮುದ್ರಣಕ್ಕೆ ಬಳಸುವ ಶಾಯಿ, ಚೂರಿ, ಬ್ಲೇಡ್, ವಿದ್ಯುತ್ ಚಾಲಿತ ಪಂಪ್, ಡೇರಿ ಯಂತ್ರೋಪಕರಣಗಳ ಮೇಲಿನ ಜಿಎಸ್‌ಟಿಯನ್ನು ೧೨%ರಿಂದ ೧೮%ಕ್ಕೆ ಏರಿಸಲಾಗುವುದು.
ಧಾನ್ಯಗಳ ಮಿಲ್‌ಗಳಲ್ಲಿ ಬಳಸುವ ಯಂತ್ರೋಪಕರಣಗಳ ಮೇಲಿನ ಜಿಎಸ್‌ಟಿ ೫%ರಿಂದ ೧೮%ಕ್ಕೆ ಏರಿಕೆಯಾಗಲಿದೆ.
ಸೋಲಾರ್ ವಾಟರ್ ಹೀಟರ್, ಸಂಸ್ಕರಿತ ಲೆದರ್ ಮೇಲೆ ಜಿಎಸ್‌ಟಿ ೧೨%ಕ್ಕೆ ಏರಿಕೆಯಾಗಲಿದೆ.
ಪೆಟ್ರೋಲಿಯಂ ಮೂಲದ ನಿರ್ದಿಷ್ಟ ಉತ್ಪನ್ನಗಳ ಮೇಲೆ ಜಿಎಸ್‌ಟಿ ೫%ಯಿಂದ ೧೮%ಕ್ಕೆ ವೃದ್ಧಿಸಲಿದೆ.
ಈಶಾನ್ಯ ರಾಜ್ಯಗಳಿಗೆ ಬಿಸಿನೆಸ್ ಕ್ಲಾಸ್ ವಿಮಾನಯಾನಕ್ಕೆ ತೆರಿಗೆ ವಿನಾಯಿತಿ ರದ್ದಾಗಲಿದೆ.
ಕಸಾಯಿಖಾನೆ ಸೇವೆಗೆ ನೀಡಿದ್ದ ತೆರಿಗೆ ವಿನಾಯಿತಿ ರದ್ದಾಗಲಿದೆ.
ಕ್ಯಾಸಿನೊ, ಆನ್‌ಲೈನ್ ಗೇಮ್‌ಗೂ ೨೮% ಜಿಎಸ್‌ಟಿ ಅನ್ವಯವಾಗಲಿದೆ.
ಯಾವುದು ಅಗ್ಗ?
ರೋಪ್‌ವೇ ಪ್ರಯಾಣ, ಲಾಜಿಸ್ಟಿಕ್ಸ್
ರೋಪ್‌ವೇ ಪ್ರಯಾಣ ದರ ಕಡಿಮೆಯಾಗಲಿದೆ. ರೋಪ್‌ವೇಯ ಪ್ರಯಾಣ ದರ ಮತ್ತು ಸರಕು ಸಾಗಣೆ ದರದ ಜಿಎಸ್‌ಟಿಯನ್ನು ಶೇ.೧೮ರಿಂದ ಶೇ.೫ಕ್ಕೆ ಇಳಿಸಲಾಗಿದೆ.
ರಸ್ತೆ ಮೂಲಕ ಸರಕು ಸಾಗಣೆ ದರವೂ ಕಡಿಮೆಯಾಗಲಿದೆ. ಇದಕ್ಕೆ ವಿಧಿಸಲಾಗುತ್ತಿದ್ದ ಜಿಎಸ್‌ಟಿಯನ್ನು ಶೇ. ೧೮ರಿಂದ ಶೇ.೧೨ ಕ್ಕೆ ಇಳಿಸಲಾಗಿದೆ.
ಆರ್ಥೋಪೆಡಿಕ್ ಉಪಕರಣ
ಆರ್ಥೋಪೆಡಿಕ್ ಉಪಕರಣಗಳ ದರ ಇಳಿಕೆಯಾಗಲಿದೆ. ಸ್ಪ್ಲಿಂಟ್‌ಗಳು ಮತ್ತು ಮೂಳೆ ಮುರಿದಾಗ ಬಳಸುವ ಸಲಕರಣೆಗಳು, ದೇಹದ ಕೃತಕ ಭಾಗಗಳು, ದೇಹಕ್ಕೆ ಅಳವಡಿಸಿದ ಸಲಕರಣೆಗಳು ಮತ್ತು ದೇಹಕ್ಕೆ ಸಂಬಂಧಿಸಿದಂತೆ ಹೊರಗೆ ಬಳಸುವ ಸಾಧನಗಳ ಜಿಎಸ್‌ಟಿಯನ್ನು ಶೇ. ೧೨ ರಿಂದ ಶೇ.೫ಕ್ಕೆ ಇಳಿಸಲಾಗಿದೆ.
ರಕ್ಷಣಾ ಪಡೆಗಳು ಬಳಸುವ ಸಲಕರಣೆಗಳ ಜಿಎಸ್‌ಟಿಯನ್ನು ಇಳಿಸಲಾಗಿದ್ದು, ಇವುಗಳ ದರ ಕಡಿಮೆಯಾಗಲಿದೆ.