ಬೆಂಗಳೂರು: ಭಾರತದ ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರಿನಲ್ಲಿ ತಂತ್ರಜ್ಞಾನವನ್ನು ಜನ ಎಲ್ಲರಿಗಿಂತ ಮೊದಲು ಸ್ವೀಕರಿಸುತ್ತಾರೆ ಎಂಬ ವಾಡಿಕೆಯ ಮಾತಿದೆ. ಭಾರತದ ಸ್ಟಾರ್ಟಪ್ ತಾಣ ಎಂಬ ಹೆಗ್ಗಳಿಕೆಯೂ ಉದ್ಯಾನ ನಗರಿಗೆ ಇದೆ. ಇದೀಗ ಇಲ್ಲಿನ ರಸ್ತೆಬದಿಯ ಚಹಾ ವ್ಯಾಪಾರಿಯೊಬ್ಬರು (Frustrated dropout!) ಕ್ರಿಪ್ಟೊ ಮೂಲಕ ಹಣ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಚಾಯ್‌ವಾಲಾ ವೈರಲ್ ಆದ ಬಳಿಕ ಗ್ರಾಹಕರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ವಿಶೇಷವೇನೆಂದರೆ ಈ ಚಹಾದಂಗಡಿಯ ಹೆಸರು ” ಫ್ರಸ್ಟ್ರೇಟೆಡ್ ಡ್ರಾಪೌಟ್ʼʼ (Frustrated dropout). ಅಂದರೆ ವಾಚ್ಯಾರ್ಥದಲ್ಲಿ ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿ ನಿರಾಶೆಗೊಂಡ ವ್ಯಕ್ತಿ ಎಂಬ ಅರ್ಥ! ಕ್ರಿಪ್ಟೊ ಕರೆನ್ಸಿಯನ್ನು ಸ್ವೀಕರಿಸುವುದಾಗಿ ಚಿಕ್ಕ ಫಲಕ ಅಳವಡಿಸಿದ್ದ ಚಹಾ ವ್ಯಾಪಾರಿಯ ಬಗ್ಗೆ ಅಕ್ಷಯ್ ಸೈನಿ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಬಳಿಕ ರಾತ್ರೋರಾತ್ರಿ ಈ ಚಾಯ್ ವಾಲಾ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿದ್ದಾರೆ.
ಬಿಸಿಎ ಡ್ರಾಪ್ ಔಟ್ ಹುಡುಗನಿಂದ ರಸ್ತೆ ಬದಿ ಚಹಾ ವ್ಯಾಪಾರ!
ಅಂದ ಹಾಗೆ ಬೆಂಗಳೂರಿನ ಮಾರತಹಳ್ಳಿಯ ಸಮೀಪ ರಸ್ತೆ ಬದಿ ಚಹಾ ಮಾರಾಟ ಮಾಡುತ್ತ, ಕ್ರಿಪ್ಟೊ ಕರೆನ್ಸಿಯನ್ನೂ ಸ್ವೀಕರಿಸಿ ಜಾಲತಾಣಗಳಲ್ಲಿ ಸುದ್ದಿಯ ಕೇಂದ್ರ ಬಿಂದುವಾಗಿರುವ ಈ ಚಾಯ್ ವಾಲಾನ ಹೆಸರು ಶುಭಮ್ ಸೈನಿ. ತಮ್ಮ ವೆಬ್‌ಸೈಟ್‌ನಲ್ಲಿ http://www.frustrateddropout.com ತಮ್ಮ ಚಹಾ ವ್ಯಾಪಾರದ ಕಥೆಯನ್ನೂ ಬರೆದಿದ್ದಾರೆ. ಅದರ ಪ್ರಕಾರ ಶುಭಮ್ ಸೈನಿ ಬಿಸಿಎ ಅಂತಿಮ ವರ್ಷದ ತನಕ ಓದಿ ನಿರಾಸೆಯಿಂದ ಕೈಚೆಲ್ಲಿದ್ದಾರೆ. ಪದವಿ ಮಾಡಿದರೂ, ಬೇಕಾದ ಉದ್ಯೋಗ ಸಿಗದು ಎಂದು ಭಾವಿಸಿದ್ದ ಶುಭಮ್ ಸೈನಿ, ಕಾಲೇಜಿನಿಂದ ಡ್ರಾಪೌಟ್ ಆದ ಬಳಿಕ ಚಹಾ ಮಾರಾಟ ಆರಂಭಿಸಿದರು. ಈಗ ಜನರ ಪ್ರೋತ್ಸಾಹವೂ ಸಿಗುತ್ತಿದೆ ಎಂದು ಶುಭಂ ಸೈನಿ ತಿಳಿಸಿದ್ದಾರೆ.
ರಕ್ಷಣಾ ಸಿಬ್ಬಂದಿಗೆ ಉಚಿತ ಚಹಾ: ತಮ್ಮ ಚಹಾದಂಗಡಿಯಲ್ಲಿ ಸೇನೆಯಲ್ಲಿ ದುಡಿಯುವ ರಕ್ಷಣಾ ಸಿಬ್ಬಂದಿಗೆ ಉಚಿತ ಚಹಾ ದೊರೆಯುತ್ತದೆ ಎಂದು ಶುಭಂ ಸೈನಿ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ. ಭವಿಷ್ಯದಲ್ಲಿ ವಿಶ್ವದಲ್ಲೇ ದೊಡ್ಡ ಕೆಫೆ ಸರಣಿಯನ್ನು ಕಟ್ಟಬೇಕು ಎಂಬುದು ನನ್ನ ಕನಸು. ಜನ ತಮ್ಮ ಚಹಾದಂಗಡಿಗೆ ಬಂದು ಖುಶಿಯಿಂದ ಚಹಾ ಕುಡಿಯುವುದನ್ನು ನೋಡುವುದು ಆನಂದದಾಯಕ ಎನ್ನುತ್ತಾರೆ ಶುಭಂ ಸೈನಿ.
ಶುಭಂ ಸೈನಿ ತಮ್ಮ ಟೀ ಸ್ಟಾಲ್ ಸಲುವಾಗಿ 30,000 ರೂ. ಹೂಡಿಕೆ ಮಾಡಿದ್ದಾರೆ. 2021ರಲ್ಲಿ ಕ್ರಿಪ್ಟೊ ವಹಿವಾಟು ನಡೆಸಿ, ಮಾರುಕಟ್ಟೆ ಪತನವಾದಾಗ ದೊಡ್ಡ ಮೊತ್ತವನ್ನೂ ಕಳೆದುಕೊಂಡಿದ್ದೇನೆ ಎನ್ನುತ್ತಾರೆ ಅವರು.