Site icon Vistara News

ಪೆಟ್ರೋಲಿಯಂ ಡೀಲರ್‌ಗಳಿಂದ ಮೇ 31ರಂದು ಮುಷ್ಕರ, ಬಂಕ್ ಗಳಲ್ಲಿ ನೋ ಸ್ಟಾಕ್‌ ಬೋರ್ಡ್‌ ಕಾಣಿಸುವ ಸಾಧ್ಯತೆ

petrol

ಬೆಂಗಳೂರು: ಕರ್ನಾಟಕದಲ್ಲಿ ಪೆಟ್ರೋಲಿಯಂ ಡೀಲರ್‌ಗಳು ಮೇ 31 ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಅಂದು ತೈಲವನ್ನು ಖರೀದಿಸದಿರಲು ತೀರ್ಮಾನಿಸಿದ್ದಾರೆ.

ಕೇಂದ್ರ ಸರಕಾರ ಅಬಕಾರಿ ಸುಂಕ ಕಡಿತಗೊಳಿಸಿರುವುದರಿಂದ ಡೀಲರ್‌ಗಳಿಗೆ ವ್ಯಾಪಾರದಲ್ಲಿ ಗಣನೀಯ ನಷ್ಟವಾಗುತ್ತಿದೆ. ಇದಕ್ಕೆ ಕೇಂದ್ರ ಸರಕಾರ ಪರಿಹಾರ ನೀಡಬೇಕು ಎಂದು ಪೆಟ್ರೋಲಿಯಂ ಡೀಲರ್‌ಗಳು ದೂರಿದ್ದಾರೆ.

ರಾಜ್ಯಾದ್ಯಂತ ಪೆಟ್ರೋಲ್‌ ಬಂಕ್‌ಗಳು ಮುಷ್ಕರದ ದಿನವಾದ ಮೇ 31 ರಂದು ಎಂದಿನಂತೆ ತೆರೆಯಲಿವೆ. ಆದರೆ “ಪೆಟ್ರೋಲ್‌ ನೋ ಸ್ಟಾಕ್‌ʼ ಬೋರ್ಡ್‌ ಕಾಣಿಸುವ ಸಾಧ್ಯತೆ ಇದೆ ಎಂದು ಡೀಲರ್‌ ಗಳು ತಿಳಿಸಿದ್ದಾರೆ.

ಅನೇಕ ಡೀಲರ್‌ಗಳು ಅಬಕಾರಿ ಸುಂಕ ಕಡಿತಕ್ಕೆ ಮೊದಲೇ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸಿದ್ದಾರೆ. ಅಬಕಾರಿ ಸುಂಕ ಕಡಿತದ ಪರಿಣಾಮ ಅವರಿಗೆ ಈಗ ಕಡಿಮೆ ದರದಲ್ಲಿ ಮಾರಾಟದಿಂದ ನಷ್ಟ ಉಂಟಾಗಲಿದೆ. ಈ ನಷ್ಟವನ್ನು ಕೇಂದ್ರ ಸರಕಾರ ಭರಿಸಬೇಕು ಎಂದು ಅಖಿಲ ಕರ್ನಾಟಕ ಫೆಡರೇಷನ್‌ ಆಫ್‌ ಪೆಟ್ರೋಲಿಯಂ ಟ್ರೇಡರ್ಸ್‌ ಒತ್ತಾಯಿಸಿದೆ.

ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ಮೇ 31ರಂದು ನಾವು ಪೆಟ್ರೋಲ್‌ ಖರೀದಿಸುವುದಿಲ್ಲ ಎಂದು ಡೀಲರ್‌ ಗಳು ತಿಳಿಸಿದ್ದಾರೆ. ಹೀಗಿದ್ದರೂ ಗ್ರಾಹಕರಿಗೆ ಪೆಟ್ರೋಲ್-ಡೀಸೆಲ್‌ ಮಾರಾಟ ಮುಂದುವರಿಯಲಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಎ ತಾರಾನಾಥ್‌ ತಿಳಿಸಿದ್ದಾರೆ.

ಕೇಂದ್ರ ಸರಕಾರ ಯಾವುದೇ ನೋಟಿಸ್‌ ನೀಡದೆ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಇದರಿಂದ ಡೀಲರ್‌ ಗಳಿಗೆ ಕಷ್ಟವಾಗಿದೆ. ಡೀಲರ್‌ ಗಳ ಕಮಿಶನ್‌ ಹೆಚ್ಚಿಸುವಂತೆ 2017ರಿಂದಲೂ ನಾವು ಒತ್ತಾಯಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಪೆಟ್ರೋಲಿಯಂ ಡೀಲರ್‌ ಗಳು ನಷ್ಟ ಅನುಭವಿಸುತ್ತಿದ್ದಾರೆ. ಮಾಸಿಕ 60-100 ಕಿಲೋಲೀಟರ್‌ ಮಾರಾಟ ಮಾಡುವವರಿಗೆ ಸಂಕಷ್ಟವಾಗುತ್ತಿದೆ ಎಂದರು. ಕೇಂದ್ರ ಸರಕಾರ ಮೇ 22ರಂದು ಪೆಟ್ರೋಲ್‌ ಮೇಲೆ ಲೀಟರ್‌ ಗೆ 8 ರೂ. ಹಾಗೂ ಡೀಸೆಲ್‌ ಮೇಲೆ ಲೀಟರ್‌ಗೆ 6 ರೂ. ಅಬಕಾರಿ ಸುಂಕ ಕಡಿತಗೊಳಿಸಿತ್ತು.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್‌ ದರ ಎಷ್ಟಿದೆ?

Exit mobile version