ನವ ದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇವಲ ಡಾಲರ್ ಒಂದರ ಏಕಸ್ವಾಮ್ಯವನ್ನು ಭಾರತದ ಅಧ್ಯಕ್ಷತೆಯ ಜಿ20 ದುರ್ಬಲಗೊಳಿಸಬೇಕಾದ ಅಗತ್ಯತೆ ಇದೆ ಎಂದು ಅರ್ಥಶಾಸ್ತ್ರಜ್ಞ ಸ್ವಾಮಿನಾಥನ್ ಅಯ್ಯರ್ (G20 Presidency) ಹೇಳಿದ್ದಾರೆ.
ಅನೇಕ ಮಂದಿ ಜಿ20 ಅಧ್ಯಕ್ಷತೆಯನ್ನು ಭಾರತ ವಹಿಸುತ್ತಿರುವುದರ ಬಗ್ಗೆ ಸಂಭ್ರಮಿಸುತ್ತಿದ್ದಾರೆ. ವಿಶ್ವದ ಪ್ರಮುಖ 20 ದೇಶಗಳು ಈ ಒಕ್ಕೂಟದಲ್ಲಿವೆ. ಆದರೆ ಈ ಒಕ್ಕೂಟದ ಮೂಲಕ ಪರಿಣಾಮಕಾರಿ ನೀತಿಗಳು ಜಾರಿಯಾಗಬೇಕು ಎಂದಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಡಾಲರ್ ದುರ್ಬಲವಾಗುತ್ತಿದೆ. ಅಮೆರಿಕದ ಆರ್ಥಿಕತೆ ಹೊಳಪು ಕಳೆದುಕೊಳ್ಳುತ್ತಿರುವುದನ್ನು ಇದು ಬಿಂಬಿಸಿದೆ. ಅಮೆರಿಕದ ಫೆಡರಲ್ ರಿಸರ್ವ್ ಭವಿಷ್ಯದಲ್ಲಿ ಬಡ್ಡಿ ದರ ಏರಿಕೆಯನ್ನು ತ್ವರಿತಗೊಳಿಸದು. ರಷ್ಯಾ-ಉಕ್ರೇನ್ ಸಂಘರ್ಷ ಅಂತ್ಯವಾದರೆ, ಹಣದುಬ್ಬರ ಹಠಾತ್ ಕಡಿಮೆಯಾಗಲಿದೆ. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಹಣದುಬ್ಬರ ಅಷ್ಟು ಸುಲಭವಾಗಿ ಕಡಿಮೆಯಾಗುವಂತೆ ಕಾಣಿಸುತ್ತಿಲ್ಲ. ಹೀಗಾಗಿ ಡಾಲರ್ ಪ್ರಾಬಲ್ಯವನ್ನು ಕೊನೆಗೊಳಿಸಲು ಜಿ20 ಚರ್ಚೆ ಆರಂಭಿಸಬೇಕು ಎಂದು ಸ್ವಾಮಿನಾಥನ್ ಅಯ್ಯರ್ ವಿವರಿಸಿದ್ದಾರೆ.
ಜಿ20 ಒಕ್ಕೂಟವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಕರೆನ್ಸಿಯ ಏಕಸ್ವಾಮ್ಯವನ್ನು ದುರ್ಬಲಗೊಳಿಸುವ ಬಗ್ಗೆ ಚರ್ಚೆಯನ್ನು ಆರಂಭಿಸಿದರೂ, ಅಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.