ನವ ದೆಹಲಿ: ಕೇಂದ್ರ ಸಚಿವ ಸಂಪುಟವು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ, ಪ್ರತಿ ಕೆ.ಜಿಗೆ ೮ ರೂ. ಡಿಸ್ಕೌಂಟ್‌ನಲ್ಲಿ ೧೫ ಲಕ್ಷ ಟನ್ ಚನ್ನಾ (Chana, ಕಾಬೂಲ್ ಕಡ್ಲೆ) ಅನ್ನು ವಿತರಿಸಲು ಬುಧವಾರ ಸಮ್ಮತಿಸಿದೆ.
ನಾನಾ ಸಮಾಜ ಕಲ್ಯಾಣ ಯೋಜನೆಗಳಿಗೆ ಈ ಚನ್ನಾ ಬಳಕೆಯಾಗಲಿದೆ ಎಂದು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ತಿಳಿಸಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಖರೀದಿಸಿರುವ ಈ ಧಾನ್ಯಗಳನ್ನು, ಕಾಪು ದಾಸ್ತಾನಿನಿಂದ ಹಿಂಪಡೆದು ವಿತರಿಸಲಾಗುತ್ತಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಸಾರ್ವಜನಿಕ ವಿತರಣೆ, ಮಕ್ಕಳ ಪೌಷ್ಟಿಕಾಹಾರ ವಿತರಣೆ ಯೋಜನೆ (ಐಸಿಡಿಪಿ) ಇತ್ಯಾದಿ ಸಾಮಾಜಿಕ ಯೋಜನೆಗಳಿಗೆ ಚನ್ನಾವನ್ನು ಬಳಸಬಹುದು. ಕೇಂದ್ರ ಸರ್ಕಾರ ಇದಕ್ಕಾಗಿ ೧,೨೦೦ ಕೋಟಿ ರೂ.ಗಳನ್ನು ವಿನಿಯೋಗಿಸುತ್ತಿದೆ.
ಧಾನ್ಯಗಳ ಖರೀದಿ ಮಿತಿ ಹೆಚ್ಚಳ: ಕೇಂದ್ರ ಸಚಿವ ಸಂಪುಟವು ಬೆಂಬಲ ಬೆಲೆಯ ಅಡಿಯಲ್ಲಿ ತೊಗರಿ, ಉದ್ದು ಧಾನ್ಯಗಳನ್ನು ಖರೀದಿಸುವ ಮಿತಿಯನ್ನು ೨೫%ರಿಂದ ೪೦%ಕ್ಕೆ ಏರಿಕೆ ಮಾಡಿದೆ. ಚನ್ನಾ ಕಾಳುಗಳ ೩೦.೫೫ ಲಕ್ಷ ಟನ್ ಸಂಗ್ರಹ ಸರ್ಕಾರದ ದಾಸ್ತಾನಿನಲ್ಲಿದೆ.