ನವ ದೆಹಲಿ: ಅದಾನಿ ಸಮೂಹದ ಕಂಪನಿಗಳ ಷೇರು ದರದಲ್ಲಿ ಕುಸಿತದ ಪರಿಣಾಮ ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಗೌತಮ್ ಅದಾನಿ ಅವರು 3ರಿಂದ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. (Gautam Aadani) ಅದಾನಿ ಅವರ ನಿವ್ವಳ ಸಂಪತ್ತು 2023 ಜನವರಿ 27ಕ್ಕೆ 96.5 ಶತಕೋಟಿ ಡಾಲರ್‌ಗೆ (7.81 ಲಕ್ಷ ಕೋಟಿ ರೂ.) ಇಳಿಕೆಯಾಗಿದೆ. 19% ಕುಸಿತ ದಾಖಲಿಸಿದೆ. ಕೇವಲ 2 ದಿನಗಳಲ್ಲಿ ಷೇರುಗಳ ಮೌಲ್ಯದಲ್ಲಿ 4.17 ಲಕ್ಷ ಕೋಟಿ ರೂ. ಕುಸಿದಿದೆ ಎಂದು ಫೋರ್ಬ್ಸ್ ಅಂಕಿ ಅಂಶಗಳು ತಿಳಿಸಿವೆ.
ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್, ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ಗೋಲ್ ಮಾಲ್ ನಡೆಸಿದೆ ಎಂದು ಆರೋಪಿಸಿದ ಬೆನ್ನಲ್ಲೇ ಕಂಪನಿಯ ಷೇರುಗಳು 20% ತನಕ ನಷ್ಟಕ್ಕೀಡಾಗಿದೆ. ಮತ್ತೊಂದು ಕಡೆ ಅದಾನಿ ಗ್ರೂಪ್ ಈ ಆರೋಪಗಳನ್ನು ನಿರಾಕರಿಸಿದೆ. ಹಾಗೂ ಹಿಂಡೆನ್ ಬರ್ಗ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿಯೂ ಎಚ್ಚರಿಸಿದೆ.
ಅದಾನಿ ಟ್ರಾನ್ಸ್‌ಮಿಶನ್ ಷೇರು ದರ 19%, ಅದಾನಿ ಟೋಟಲ್ ಗ್ಯಾಸ್ 19.1%, ಅದಾನಿ ಗ್ರೀನ್ ಎನರ್ಜಿ 16% ದರ ಕುಸಿತಕ್ಕೀಡಾಗಿದೆ. ಈ ನಡುವೆ ಅದಾನಿ ಎಂಟರ್‌ಪ್ರೈಸಸ್ 20,000 ಕೋಟಿ ರೂ. ಮೌಲ್ಯದ ಫಾಲೋ ಆನ್ ಪಬ್ಲಿಕ್ ಆಫರ್ (ಮುಂದುವರಿದ ಷೇರು ಬಿಡುಗಡೆ) ನಡೆಸಿದೆ. ಜನವರಿ 31ಕ್ಕೆ ಮುಕ್ತಾಯವಾಗಲಿದೆ.