ನವ ದೆಹಲಿ: ಗೌತಮ್ ಅದಾನಿ ಅವರು ಅತ್ಯಂತ ಮಾನವೀಯ ವ್ಯಕ್ತಿ. ಅವರನ್ನು ನಾನು ಅಪಾರವಾಗಿ ಗೌರವಿಸುತ್ತೇನೆ ಎಂದು ಐಎಎಸ್ ಅಧಿಕಾರಿ ಶಾ ಫೈಸೆಲ್ ಟ್ವೀಟ್ ಮಾಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದಾಗ ಪ್ರತಿಭಟಿಸಿದ್ದ ಐಎಎಸ್ ಅಧಿಕಾರಿ ಶಾ ಫೈಸಲ್, ಕೆಲ ಕಾಲ ರಾಜಕೀಯ ಪ್ರವೇಶಿಸಿದ್ದರು. 2022ರಲ್ಲಿ ಸರ್ಕಾರ ಅವರಿಗೆ ಎರಡನೇ ಸಲ ಐಎಎಸ್ ಅಧಿಕಾರಿಯಾಗಿ ಮುಂದುವರಿಯಲು ಅವಕಾಶ ಕೊಟ್ಟಿತ್ತು. ಈಗ ಮತ್ತೆ ಕೇಂದ್ರ ಸಚಿವಾಲಯದಲ್ಲಿ ಡೆಪ್ಯುಟಿ ಸೆಕ್ರೆಟರಿ ಆಗಿದ್ದಾರೆ.
ಪ್ರತಿಕೂಲ ಪರಿಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಅವಕಾಶ ಇದ್ದಾಗಲೂ ಹಾಗೆ ಮಾಡದಿರುವ ಅದಾನಿ ಅವರ ಬಗ್ಗೆ ನನಗೆ ಗೌರವ ಇದೆ. ಅವರನ್ನು ಗೌರವಿಸುವ ಬಹು ದೊಡ್ಡ ಜನಸ್ತೋಮ ಸಮಾಜದ ಎಲ್ಲ ಸ್ತರಗಳಲ್ಲೂ ಇದೆ. ಈ ಬಿಕ್ಕಟ್ಟಿನ ಅಗ್ನಿ ಪರೀಕ್ಷೆಯ ಸಂದರ್ಭದಲ್ಲಿ ಅವರು ಹಾಗೂ ಕುಟುಂಬಕ್ಕೆ ಒಳಿತನ್ನು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
2010ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ ಶಾ, 2019ರಲ್ಲಿ ಸೇವೆಗೆ ರಾಜೀನಾಮೆ ನೀಡಿ ಜಮ್ಮು ಕಾಶ್ಮೀರದಲ್ಲಿ ಸ್ವಂತ ರಾಜಕೀಯ ಪಕ್ಷ ಕಟ್ಟಿದ್ದರು. ಆದರೆ ಸರ್ಕಾರ ಅವರ ರಾಜೀನಾಮೆಯನ್ನು ಸ್ವೀಕರಿಸಿರಲಿಲ್ಲ. 2022ರಲ್ಲಿ ಸೇವೆಗೆ ಮತ್ತೆ ಸೇರಿದ್ದರು. ಸೇವೆಗೆ ಸೇರಿದ ಬಳಿಕ ಆಗಾಗ್ಗೆ ಸರ್ಕಾರವನ್ನು ಪ್ರಶಂಸಿಸುತ್ತಿದ್ದಾರೆ.