ನವ ದೆಹಲಿ: ಅದಾನಿ ಸಮೂಹದ ಸಂಸ್ಥಾಪಕ ಗೌತಮ್ ಅದಾನಿ ಅವರು ( Adani) ಈಗ ವಿಶ್ವದ ಮೂರನೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಎಂದು ಬ್ಲೂಮ್‌ಬರ್ಗ್ ಬಿಇಯನೇರ್ ಇಂಡೆಕ್ಸ್‌ನ ವರದಿ ತಿಳಿಸಿದೆ. ಇದರೊಂದಿಗೆ ವಿಶ್ವದ ಮೂರನೇ ಸಿರಿವಂತ ವ್ಯಕ್ತಿಯಾದ ಏಷ್ಯಾದ ಮೊಟ್ಟ ಮೊದಲ ನಾಗರಿಕ ಎಂಬ ಹೆಗ್ಗಳಿಕೆಗೂ ಅದಾನಿ ಪಾತ್ರರಾಗಿದ್ದಾರೆ. ಮುಕೇಶ್ ಅಂಬಾನಿ, ಚೀನಾದ ಜಾಕ್ ಮಾ ಅವರಿಗೂ ಇದುವರೆಗೆ ಜಗತ್ತಿನ ಮೂರನೇ ಸಿರಿವಂತ ಎನ್ನಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಎಲಾನ್ ಮಸ್ಕ್ ಮತ್ತು ಜೆಫ್ ಬಿಜೋಸ್ ಅವರ ಬಳಿಕ ಮೂರನೇ ಅತ್ಯಧಿಕ ಶ್ರೀಮಂತ ಉದ್ಯಮಿ ಗೌತಮ್ ಅದಾನಿಯಾಗಿದ್ದಾರೆ ಎಂದು ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ತಿಳಿಸಿದೆ. ಅದಾನಿ ಅವರ ಈಗಿನ ಸಂಪತ್ತು ೧೩೭.೪ ಶತಕೋಟಿ ಡಾಲರ್ (೧೦.೮೫ ಲಕ್ಷ ಕೋಟಿ ರೂ.) ಎಂದಿದೆ.
ಗೌತಮ್ ಅದಾನಿ ಅವರು ಕಲ್ಲಿದ್ದಲು, ಬಂದರು, ಏರ್‌ಪೋರ್ಟ್, ಇಂಧನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಡೇಟಾ ಸೆಂಟರ್, ಸಿಮೆಂಟ್, ಮಾಧ್ಯಮ ಸೇರಿದಂತೆ ಹೊಸ ಕ್ಷೇತ್ರಗಳಿಗೆ ಪ್ರವೇಶಿಸುತ್ತಿದ್ದಾರೆ. ಭಾರತದ ಅತಿ ದೊಡ್ಡ ಖಾಸಗಿ ಬಂದರು ಮತ್ತು ವಿಮಾನ ನಿಲ್ದಾಣವನ್ನು ಅದಾನಿ ಸಮೂಹ ಹೊಂದಿದೆ. ಸಿಟಿ-ಗ್ಯಾಸ್ ವಿತರಕ ಎನ್ನಿಸಿದೆ. ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆ ನಡೆಸುತ್ತದೆ. ವಿಶ್ವದ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕವಾಗಲು ಅದಾನಿ ಗ್ರೂಪ್ ೭೦ ಶತಕೋಟಿ ಡಾಲರ್ (೫.೫೩ ಲಕ್ಷ ಕೋಟಿ ರೂ.) ಬಂಡವಾಳ ಹೂಡಿಕೆ ಮಾಡುತ್ತಿದೆ.
ಇದನ್ನೂ ಓದಿ:NDTV | ಅದಾನಿ ಗ್ರೂಪ್‌ನಿಂದ ಖರೀದಿ ಹಿನ್ನೆಲೆಯಲ್ಲಿ ಎನ್‌ಡಿಟಿವಿ ಷೇರು ದರ 5% ಜಿಗಿತ
ಹೀಗಿದ್ದರೂ, ಅದಾನಿ ಸಮೂಹದ ಬಹುಪಾಲು ವಿಸ್ತರಣೆ ಸಾಲದ ಆಧಾರದಲ್ಲಿ ಇದೆ ಎಂದು ಇತ್ತೀಚೆಗೆ ಫಿಚ್ ಗ್ರೂಪ್‌ನ ಭಾಗವಾಗಿರುವ ಕ್ರೆಡಿಟ್‌ಸೈಟ್ಸ್ ವರದಿ ತಿಳಿಸಿದೆ. ೨೦೨೦ರಿಂದೀಚೆಗೆ ಅದಾನಿ ಗ್ರೂಪ್ ಕಂಪನಿಗಳ ಷೇರು ದರದಲ್ಲಿ ೧,೦೦೦% ಕ್ಕೂ ಹೆಚ್ಚು ಏರಿಕೆಯಾಗಿದೆ. ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ ತಮ್ಮ ಸಂಪತ್ತಿನಲ್ಲಿ ಗಣನೀಯ ಮೊತ್ತವನ್ನು ಸಮಾಜಕಲ್ಯಾಣ ಸೇವೆಗೆ ವರ್ಗಾಯಿಸಿದ್ದರಿಂದ ಅದಾನಿ ಅವರು ಸಿರಿವಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಲು ಹಾದಿ ಸುಗಮವಾಗಿದೆ ಎಂಬ ವಿಶ್ಲೇಷಣೆಯೂ ಇದೆ. ಗೇಟ್ಸ್ ಜುಲೈನಲ್ಲಿ ೨೦ ಶತಕೋಟಿ ಡಾಲರ್ (೧.೫೮ ಲಕ್ಷ ಕೋಟಿ ರೂ.) ಹಾಗೂ ವಾರೆನ್ ಬಫೆಟ್ ೩೫ ಶತಕೋಟಿ ಡಾಲರ್ ( ೨.೭೬ ಲಕ್ಷ ಕೋಟಿ ರೂ.) ಮೊತ್ತವನ್ನು ಸಮಾಜ ಕಲ್ಯಾಣ ಚಟುವಟಿಕೆಗೆ ಧಾರೆ ಎರೆದಿದ್ದಾರೆ. ಅದಾನಿ ಕೂಡ ತಮ್ಮ ೬೦ನೇ ಜನ್ಮ ದಿನಾಚರಣೆ ಪ್ರಯುಕ್ತ ೭.೭ ಶತಕೋಟಿ ಡಾಲರ್ ಅನ್ನು (೬೦,೮೩೦ ಕೋಟಿ ರೂ.) ಸಾಮಾಜಿಕ ಹಿತಾಸಕ್ತಿ ಯೋಜನೆಗೆ ದೇಣಿಗೆ ನೀಡಿದ್ದಾರೆ.
ಇದನ್ನೂ ಓದಿ:ವಿಸ್ತಾರ Explainer | 2.30 ಲಕ್ಷ ಕೋಟಿ ರೂ. ಸಾಲದಲ್ಲಿ ಅದಾನಿ ಗ್ರೂಪ್, ಸ್ಫೋಟಕ ವರದಿಗೆ ಷೇರು ದರ ತತ್ತರ !