ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) ಶುಕ್ರವಾರ 1,181 ಅಂಕ ಜಿಗಿಯಿತು. ಅಮೆರಿಕದಲ್ಲಿ ನಿರೀಕ್ಷೆಗೂ ಮೀರಿ ಹಣದುಬ್ಬರ ತೀವ್ರತೆ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಡ್ಡಿ ದರ ಏರಿಕೆಯ ಸಾಧ್ಯತೆ ಕಡಿಮೆಯಾಗಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಷೇರು ಸೂಚ್ಯಂಕಗಳು ಜಿಗಿಯಿತು. ಪ್ರಮುಖ ಕರೆನ್ಸಿಗಳೆದುರು ಡಾಲರ್ ಕೂಡ ಮೌಲ್ಯವನ್ನು ಇಳಿಸಿಕೊಂಡಿತು.
ಸೆನ್ಸೆಕ್ಸ್ 61,795ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 321 ಅಂಕ ಗಳಿಸಿ 18,349ಕ್ಕೆ ಸ್ಥಿರವಾಯಿತು. ಬಹುತೇಕ ಎಲ್ಲ ಕ್ಷೇತ್ರಗಳ ಷೇರುಗಳು ಲಾಭ ಗಳಿಸಿತು.
ಷೇರು ಸೂಚ್ಯಂಕ ಜಿಗಿತಕ್ಕೆ ಕಾರಣವೇನು?
ಅಕ್ಟೋಬರ್ ತಿಂಗಳಿನಲ್ಲಿ ಅಮೆರಿಕದ ಹಣದುಬ್ಬರ ಅಂಕಿ ಅಂಶಗಳು ಇಳಿಕೆಯನ್ನು ಬಿಂಬಿಸಿರುವುದರಿಂದ ಸಕಾರಾತ್ಮಕ ಪ್ರಭಾವ ಬೀರಿತು. ಅಮೆರಿಕದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಹಣದುಬ್ಬರ 8.2%ರಿಂದ 7.7%ಕ್ಕೆ ಇಳಿಕೆಯಾಗಿತ್ತು.
ವಿಪ್ರೊ, ಟೆಕ್ ಮಹೀಂದ್ರಾ, ಇನ್ಫೋಸಿಸ್, ಎಚ್‌ಸೊಎಲ್ ಟೆಕ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಟಿಸಿಎಸ್, ಬಜಾಜ್ ಫಿನ್ ಸರ್ವ್ ಷೇರು ದರ 2-3.5% ಏರಿಕೆಯಾಯಿತು. ಭಾರತದ ಷೇರು ಮಾರುಕಟ್ಟೆಗೆ ಪ್ರತಿ ತಿಂಗಳು ಸರಾಸರಿ 13,000 ಕೋಟಿ ರೂ. ಹೂಡಿಕೆಯಾಗುತ್ತಿದೆ.
ಬ್ಯಾಂಕ್ ನಿಫ್ಟಿ: ಬ್ಯಾಂಕ್ ನಿಫ್ಟಿ ಇಂದು ಸಾರ್ವಕಾಲಿಕ ಏರಿಕೆಯನ್ನು ದಾಖಲಿಸಿದೆ. ಬೆಳಿಗ್ಗೆ 559 ಅಂಕಗಳ ಭಾರಿ ಏರಿಕೆಯೊಂದಿಗೆ ಆರಂಭವಾದ ವಹಿವಾಟು 42345 ರವರೆಗೆ ಹೆಚ್ಚಳಗೊಂಡು ನಂತರ ಅಲ್ಪ ಇಳಿಕೆಯಾಗಿ 42137 ಅಂಕಗಳಲ್ಲಿ ಮುಕ್ತಾಯವಾಗಿದೆ.
ನಿಫ್ಟಿ ಮತ್ತು ಸೆನ್ಸೆಕ್ಸ್ ಸಹ ಸಾರ್ವಕಾಲಿಕ ಏರಿಕೆಯ ಸನಿಹದಲ್ಲಿದ್ದು, ಇದೇ ರೀತಿ ಏರಿಕೆ ಮುಂದುವರಿದರೆ ಮುಂದಿನ ವಾರ ಮಾರುಕಟ್ಟೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.
ಭಾರತದ ಕಂಪನಿಗಳಲ್ಲಿ ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಮುಖವಾಗಿದ್ದು, ಕಳೆದ ಒಂದು ವರ್ಷದಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸತತವಾಗಿ ಈ ಎರಡು ಕಂಪನಿಗಳ ಷೇರುಗಳನ್ನು ಮಾರಾಟ ಮಾಡುತ್ತಿದ್ದರು. ಇಂದು ಇದೇ ಷೇರುಗಳು ಶೇ. 5ಕ್ಕಿಂತ ಹೆಚ್ಚಾಗಿ ಏರಿಕೆಯಾಗಿರುವದರಿಂದ ಷೇರುಪೇಟೆ ಭಾರಿ ಏರಿಕೆಗೆ ಕಾರಣವಾಯಿತು. ಮತ್ತು ಈ ಎರಡು ಕಂಪನಿಗಳ ಬೆಳವಣಿಗೆಯನ್ನು ಅಳೆಯುವ ಮೌಲ್ಯದ ಅಂಕಿಅಂಶ ಕಡಿಮೆ ಇರುವುದು ಹೂಡಿಕೆದಾರರಿಗೆ ಹೆಚ್ಚು ಆಕರ್ಷಕವಾಗಿದೆ.