ವಾಷಿಂಗ್ಟನ್: ಇಡೀ ವಿಶ್ವ ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಸಮಸ್ಯೆಗೀಡಾಗಿದೆ. ಇದರ ಪರಿಣಾಮ ಜಾಗತಿಕ ಆರ್ಥಿಕತೆ 2023ರಲ್ಲಿ ಕೇವಲ 2.2%ಕ್ಕೆ ವಿಸ್ತರಿಸಲಿದೆ (Recession is coming) ಎಂದು ಪ್ಯಾರಿಸ್ ಮೂಲದ ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋಪರೇಶನ್ & ಡೆವಲಪ್‌ಮೆಂಟ್ (OECD) ವರದಿ ತಿಳಿಸಿದೆ.
ಹೊಸ ಅಂದಾಜಿನ ಪ್ರಕಾರ, 2021ರ ಅಂತ್ಯಕ್ಕೆ ಗ್ರಹಿಸಿದ್ದಕ್ಕಿಂತ 2.8 ಲಕ್ಷ ಕೋಟಿ ಡಾಲರ್ ಕಡಿಮೆಯಾಗಿದೆ. ಒಇಸಿಡಿ, ಬಹುತೇಕ ಜಿ-20 ರಾಷ್ಟ್ರಗಳ ಜಿಡಿಪಿ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು ಕಡಿತಗೊಳಿಸಿದೆ. ಇಂಡೊನೇಷ್ಯಾದ ಜಿಡಿಪಿ ಮುನ್ನೋಟವನ್ನು ಮಾತ್ರ ಏರಿಕೆಯ ಮುನ್ನೋಟ ಎಂದು ಅಂದಾಜಿಸಿದೆ.
ಯುರೋಪ್‌ಗೆ ಅತಿ ಹೆಚ್ಚು ಹಾನಿ: ಜಾಗತಿಕ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಮರದಿಂದ ಜಗತ್ತಿನಲ್ಲಿ, ಮುಖ್ಯವಾಗಿ ಯುರೋಪ್‌ಗೆ ಭಾರಿ ಹಾನಿಯಾಗಲಿದೆ ಎಂದು ಒಇಸಿಡಿ ತಿಳಿಸಿದೆ. ಜತೆಗೆ ಬಡ್ಡಿ ದರಗಳ ಮತ್ತಷ್ಟು ಏರಿಕೆಯನ್ನೂ ಅಂದಾಜಿಸಿದೆ. ಜಾಗತಿಕ ಸೆಂಟ್ರಲ್ ಬ್ಯಾಂಕ್‌ಗಳು ಒಟ್ಟಾಗಿ 20% ಬಡ್ಡಿ ದರ ಏರಿಸಿವೆ. ಅದು ಇನ್ನೂ ಸಾಲದು. ಪ್ರಮುಖ ಆರ್ಥಿಕತೆಗಳಲ್ಲಿ ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ. ಯುರೋಪ್‌ನಲ್ಲಿ ಆರ್ಥಿಕ ಮಂದಗತಿ ಕಣ್ಣಿಗೆ ಕಾಣುತ್ತಿದೆ. ಜರ್ಮನಿ, ಇಟಲಿ, ಬ್ರಿಟನ್‌ನಲ್ಲಿ ಇಂಧನ ಬಿಕ್ಕಟ್ಟು ತಲೆದೋರಿದ್ದು, ಆರ್ಥಿಕತೆಗೆ ಹೊಡೆತ ಬಿದ್ದಿದೆ ಎಂದು ವರದಿ ತಿಳಿಸಿದೆ.
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ಪ್ರಕಾರ ಜಾಗತಿಕ ಆರ್ಥಿಕತೆಯ ಬೆಳವಣಿಗೆ 2021ರ 6.1% ರಿಂದ 2022ರಲ್ಲಿ 3.2%ಕ್ಕೆ ಇಳಿಕೆಯಾಗಲಿದೆ. 2023ರಲ್ಲಿ ಜಾಗತಿಕ ಉತ್ಪಾದನೆ ಕೇವಲ 2.9%ರಷ್ಟು ವಿಸ್ತರಿಸಬಹುದು ಎಂದು ತಿಳಿಸಿದೆ. ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಉದ್ಯೋಗ ನಷ್ಟದ ಆತಂಕವೂ ತಲೆದೋರಿದೆ. ಈಗಾಗಲೇ ಭಾರತದ ಐಟಿ ವಲಯದ ಕೆಲ ಸಣ್ಣ ಪುಟ್ಟ ಕಂಪನಿಗಳಲ್ಲಿ ಗುತ್ತಿಗೆ ಅಧಾರಿತ ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.