ನವ ದೆಹಲಿ: ವೈಮಾನಿಕ ವಲಯದ ನಿಯಂತ್ರಕ ಡಿಜಿಸಿಎ, ಆರ್ಥಿಕ ಸಂಕಷ್ಟದಲ್ಲಿರುವ ಗೋ ಫಸ್ಟ್ (Go First airline) ಏರ್‌ಲೈನ್ ಸಂಸ್ಥೆಗೆ ತನ್ನ ಮುಂದಿನ ಆದೇಶದ ತನಕ, ಏರ್ ಟಿಕೆಟ್‌ಗಳ ಮಾರಾಟವನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ. (directorate general of civil aviation) ಗೋ ಫಸ್ಟ್ ಏರ್‌ಲೈನ್ 15 ದಿನಗಳೊಳಗೆ ನೋಟಿಸ್‌ಗೆ ಉತ್ತರಿಸಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: Go First bankruptcy : ಗೋ ಫಸ್ಟ್ ದಿವಾಳಿ, 6,521 ಕೋಟಿ ರೂ. ಸಾಲ ಅತಂತ್ರ, ಇಲ್ಲಿದೆ ಸಾಲ ಕೊಟ್ಟಿರುವ ಬ್ಯಾಂಕ್‌ಗಳ ಡಿಟೇಲ್ಸ್
ಗೋ ಫಸ್ಟ್ ಏರ್‌ಲೈನ್ ದಿಢೀರನೆ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿರುವುದು, ದಿವಾಳಿ ಘೋಷಿಸಿರುವ ಹಿನ್ನೆಲೆಯಲ್ಲಿ ಡಿಜಿಸಿಎ ಈ ನೋಟಿಸ್ ಜಾರಿಗೊಳಿಸಿದೆ. ಗೋ ಫಸ್ಟ್ ಸೋಮವಾರ ಕಂಪನಿಗಳ ನ್ಯಾಯಾಧೀಕರಣಕ್ಕೆ, ಶೀಘ್ರ ಸೂಕ್ತ ನಿರ್ಣಯ ಕೈಗೊಳ್ಳುವಂತೆ ತಿಳಿಸಿದೆ.
ಉದ್ಯಮಿ ನುಸ್ಲಿ ವಾಡಿಯಾ ಒಡೆತನದ ವಾಡಿಯಾ ಗ್ರೂಪ್‌ನ ಭಾಗವಾಗಿರುವ ಗೋ ಫಸ್ಟ್ ಏರ್‌ಲೈನ್ಸ್ (Go First airlines) ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದ್ದು ದಿವಾಳಿಯಾಗಿದೆ. ಕಂಪನಿಗಳ ಕಾನೂನಿನ ರಾಷ್ಟ್ರೀಯ ನ್ಯಾಯಾಧೀಕರಣದಲ್ಲಿ ( National Company law tribunal -NCLT) ಗೋ ಫಸ್ಟ್ ಇತ್ತೀಚೆಗೆ ಸ್ವಯಂಪ್ರೇರಿತವಾಗಿ ದಿವಾಳಿ ಪ್ರಕ್ರಿಯೆ ನಡೆಸಲು (bankruptcy) ಕೋರಿ ಅರ್ಜಿ ಸಲ್ಲಿಸಿತ್ತು. ಸ್ವತಃ ಏರ್‌ಲೈನ್ ಸಿಇಒ ಕೌಶಿಕ್ ಖೋನಾ ಈ ವಿಷಯ ತಿಳಿಸಿದ್ದರು.
ತೈಲ ಮಾರುಕಟ್ಟೆ ಕಂಪನಿಗಳಿಗೆ ಕೊಡಬೇಕಿರುವ ಬಾಕಿಯನ್ನು ಗೋ ಫಸ್ಟ್ ಇನ್ನೂ ಪಾವತಿಸಿಲ್ಲ. ಹೀಗಾಗಿ ಗೋ ಫಸ್ಟ್ ಮೇ 3 ಮತ್ತು 4ರಂದು ತನ್ನ ಸುಮಾರು ಅರ್ಧದಷ್ಟು ವಿಮಾನಗಳ ಸಂಚಾರವನ್ನು ರದ್ದುಪಡಿಸಿತ್ತು. ಟಿಕೆಟ್ ಬುಕ್ ಮಾಡಿದವರಿಗೆ ಉಂಟಾಗಿರುವ ಅಡಚಣೆಗೆ ಏರ್ ಲೈನ್ ಕ್ಷಮೆ ಯಾಚಿಸಿತ್ತು. ಪ್ರಯಾಣಿಕರಿಗೆ ಟಿಕೆಟ್ ಹಣವನ್ನು ರಿಫಂಡ್ ಮಾಡುವುದಾಗಿ ತಿಳಿಸಿತ್ತು.
ಅಮೆರಿಕದ ಪ್ರಾಟ್ & ವಿಟ್ನೆಸ್ ಇಂಟರ್ ನ್ಯಾಶನಲ್ ಏರೋ ಎಂಜಿನ್ ಸಂಸ್ಥೆ ಪೂರೈಸಿದ್ದ ಎಂಜಿನ್‌ಗಳು ಆಗಾಗ್ಗೆ ವಿಫಲವಾಗುತ್ತಿತ್ತು. ಹೀಗಾಗಿ ದಿವಾಳಿಯಾಗುವ ಸ್ಥಿತಿ ಬಂದಿದೆ ಎಂದು ಏರ್‌ಲೈನ್ ಆರೋಪಿಸಿದೆ. ಮೇ 1ರಿಂದ 25 ವಿಮಾನಗಳ ಸಂಚಾರವನ್ನು ರದ್ದುಪಡಿಸಿತ್ತು. ಮೇ 3-4ರಂದು ತನ್ನೆಲ್ಲ ವಿಮಾನಗಳ ಸಂಚಾರವನ್ನು ರದ್ದುಪಡಿಸಿತ್ತು.