ನವ ದೆಹಲಿ: ಉದ್ಯಮಿ ನುಸ್ಲಿ ವಾಡಿಯಾ ಒಡೆತನದ ವಾಡಿಯಾ ಗ್ರೂಪ್‌ನ ಭಾಗವಾಗಿರುವ ಗೋ ಫಸ್ಟ್ ಏರ್‌ಲೈನ್ಸ್ (Go First airlines) ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದ್ದು ದಿವಾಳಿಯಾಗಿದೆ. ಕಂಪನಿಗಳ ಕಾನೂನಿನ ರಾಷ್ಟ್ರೀಯ ನ್ಯಾಯಾಧೀಕರಣದಲ್ಲಿ ( National Company law tribunal -NCLT) ಗೋ ಫಸ್ಟ್ ಸ್ವಯಂಪ್ರೇರಿತವಾಗಿ ದಿವಾಳಿ ಪ್ರಕ್ರಿಯೆ ನಡೆಸಲು (bankruptcy) ಕೋರಿ ಅರ್ಜಿ ಸಲ್ಲಿಸಿದೆ. ಸ್ವತಃ ಏರ್‌ಲೈನ್ ಸಿಇಒ ಕೌಶಿಕ್ ಖೋನಾ ಈ ವಿಷಯ ತಿಳಿಸಿದ್ದಾರೆ.
ತೈಲ ಮಾರುಕಟ್ಟೆ ಕಂಪನಿಗಳಿಗೆ ಕೊಡಬೇಕಿರುವ ಬಾಕಿಯನ್ನು ಗೋ ಫಸ್ಟ್ ಇನ್ನೂ ಪಾವತಿಸಿಲ್ಲ. ಹೀಗಾಗಿ ಗೋ ಫಸ್ಟ್ ಮೇ 3 ಮತ್ತು 4ರಂದು ತನ್ನ ಸುಮಾರು ಅರ್ಧದಷ್ಟು ವಿಮಾನಗಳ ಸಂಚಾರವನ್ನು ರದ್ದುಪಡಿಸಿದೆ. ಈಗಾಗಲೇ ಟಿಕೆಟ್ ಬುಕ್ ಮಾಡಿದವರಿಗೆ ಉಂಟಾಗಿರುವ ಅಡಚಣೆಗೆ ಏರ್ ಲೈನ್ ಕ್ಷಮೆ ಯಾಚಿಸಿದೆ. ಪ್ರಯಾಣಿಕರಿಗೆ ಟಿಕೆಟ್ ಹಣವನ್ನು ರಿಫಂಡ್ ಮಾಡುವುದಾಗಿ ತಿಳಿಸಿದೆ.
ಈ ಬೆಳವಣಿಗೆಗಳ ಬಗ್ಗೆ ಏರ್‌ಲೈನ್ ಸರ್ಕಾರಕ್ಕೆ ತಿಳಿಸಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (DGCA) ವಿಸ್ತೃತ ವರದಿ ಸಲ್ಲಿಸಿದೆ. ಅಮೆರಿಕದ ಪ್ರಾಟ್ & ವಿಟ್ನೆಸ್ ಇಂಟರ್ ನ್ಯಾಶನಲ್ ಏರೋ ಎಂಜಿನ್ ಸಂಸ್ಥೆ ಪೂರೈಸಿದ್ದ ಎಂಜಿನ್‌ಗಳು ಆಗಾಗ್ಗೆ ವಿಫಲವಾಗುತ್ತಿತ್ತು. ಹೀಗಾಗಿ ದಿವಾಳಿಯಾಗುವ ಸ್ಥಿತಿ ಬಂದಿದೆ ಎಂದು ಏರ್‌ಲೈನ್ ಆರೋಪಿಸಿದೆ. ಮೇ 1ರಿಂದ 25 ವಿಮಾನಗಳ ಸಂಚಾರವನ್ನು ರದ್ದುಪಡಿಸಿತ್ತು. ಇದೀಗ ಮೇ 3-4ರಂದು ತನ್ನೆಲ್ಲ ವಿಮಾನಗಳ ಸಂಚಾರವನ್ನು ರದ್ದುಪಡಿಸಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಡಿಜಿಸಿಎ, ಏರ್‌ಲೈನ್‌ಗೆ ನೋಟಿಸ್ ಜಾರಿಗೊಳಿಸಿದೆ.
ವಾಡಿಯಾ ಗ್ರೂಪ್‌ನ ಭಾಗವಾಗಿರುವ ಗೋ ಫಸ್ಟ್ ಏರ್‌ಲೈನ್ಸ್ ಅಲ್ಟ್ರಾ ಲೋ ಕಾಸ್ಟ್ ಏರ್‌ಲೈನ್ ಆಗಿದೆ. (ultra low cost) 2004ರ ಏಪ್ರಿಲ್ 29ರಂದು ಗೋ ಫಸ್ಟ್ ಅಸ್ತಿತ್ವಕ್ಕೆ ಬಂದಿತ್ತು. ಮುಂಬಯಿ-ಅಹಮದಾಬಾದ್ ನಡುವೆ 2005ರ ನವೆಂಬರ್‌ನಲ್ಲಿ ಮೊದಲ ವಿಮಾನ ಹಾರಾಟ ನಡೆದಿತ್ತು. 59 ವಿಮಾನಗಳನ್ನು ಹೊಂದಿದೆ. ಆರಂಭದಲ್ಲಿ ಇದನ್ನು ಗೋ ಏರ್ ಎಂದು ಹೆಸರಿಸಲಾಗಿತ್ತು.