ನವ ದೆಹಲಿ: ವಾಡಿಯಾ ಗ್ರೂಪ್‌ನ ಭಾಗವಾಗಿರುವ ಗೋ ಫಸ್ಟ್ ಏರ್‌ಲೈನ್ ಸ್ವಯಂ ಪ್ರೇರಿತವಾಗಿ ದಿವಾಳಿ ಘೋಷಿಸಿದೆ. ಭಾರತೀಯ ಬ್ಯಾಂಕ್‌ಗಳು ಕೊಟ್ಟಿರುವ 6,521 ಕೋಟಿ ರೂ. ಸಾಲ (Go First bankruptcy ) ಇದೀಗ ಅತಂತ್ರವಾಗಿದೆ. ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಗೋ ಫಸ್ಟ್ ಏರ್‌ಲೈನ್ಸ್‌ಗೆ ಸಾಲ ವಿತರಿಸಿರುವ ಬ್ಯಾಂಕ್‌ಗಳಾಗಿವೆ.
ಗೋ ಫಸ್ಟ್ ದಿವಾಳಿ ಪ್ರಕ್ರಿಯೆ ಕೋರಿ ಸಲ್ಲಿಸಿರುವ ಅರ್ಜಿಯ ಪ್ರಕಾರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಡ್ಯೂಯಿಶ್ ಬ್ಯಾಂಕ್ ಕೂಡ ಸಾಲ ನೀಡಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಷೇರು ದರ ಬುಧವಾರ 5% ಇಳಿದಿದೆ. ಐಡಿಬಿಐ ಬ್ಯಾಂಕ್ 1.1%, ಎಕ್ಸಿಸ್ ಬ್ಯಾಂಕ್ 1.9%, ಬ್ಯಾಂಕ್ ಆಫ್ ಬರೋಡಾ ಷೇರು ದರ 2.5% ಇಳಿಕೆ ದಾಖಲಿಸಿದೆ.
ಯಾವ ಬ್ಯಾಂಕ್ ಎಷ್ಟು ಸಾಲ ಕೊಟ್ಟಿದೆ?
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾ 1300 ಕೋಟಿ ರೂ. ಸಾಲ ಕೊಟ್ಟಿದೆ. ಐಡಿಬಿಐ ಬ್ಯಾಂಕ್ 50 ಕೋಟಿ ರೂ. ಸಾಲ ನೀಡಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2,000 ಕೋಟಿ ರೂ. ಸಾಲ ನೀಡಿದೆ.
ಗೋ ಫಸ್ಟ್ ಏರ್‌ಲೈನ್ 2022ರಲ್ಲಿ ಭಾರಿ ನಷ್ಟಕ್ಕೀಡಾಗಿತ್ತು. ಕಳೆದ 15 ತಿಂಗಳುಗಳಲ್ಲಿ ವಾಡಿಯಾ ಗ್ರೂಪ್ 3,000 ಕೋಟಿ ರೂ.ಗಳನ್ನು ಏರ್‌ಲೈನ್‌ಗೆ ನೀಡಿತ್ತು ಎಂದು ಮೂಲಗಳು ತಿಳಿಸಿವೆ.
ಗೋ ಫಸ್ಟ್ ಬ್ಯಾಂಕ್ ಸಾಲ, ವೆಂಡರ್‌ಗಳಿಗೆ ಕೊಡಬೇಕಿರುವ ಬಾಕಿ ಸೇರಿದಂತೆ ಒಟ್ಟು 11,463 ಕೋಟಿ ರೂ.ಗಳ ಉತ್ತರದಾಯಿತ್ವವನ್ನು ಹೊಂದಿದೆ. ಗೋ ಫಸ್ಟ್‌ನಲ್ಲಿ 5000 ಉದ್ಯೋಗಿಗಳಿದ್ದು, ಇದೀಗ ಅವರ ಭವಿಷ್ಯ ಅತಂತ್ರವಾಗಿದೆ.
ಸ್ಪೈಸ್‌ಜೆಟ್ ವಿಮಾನಗಳಿಗೆ ಕಾಯಕಲ್ಪ:
ಈ ನಡುವೆ ದೇಶದ ಎರಡನೇ ಅತಿ ದೊಡ್ಡ ಏರ್‌ಲೈನ್ ಸ್ಪೈಸ್ ಜೆಟ್ 25 ವಿಮಾನಗಳಿಗೆ ಕಾಯಕಲ್ಪ ನೀಡಲು ಉದ್ದೇಶಿಸಿದೆ. ಈ ಸಂಬಂಧ 400 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. ಸ್ಪೈಸ್ ಜೆಟ್ ಕೂಡ ನಷ್ಟದಲ್ಲಿ ನಡೆಯುತ್ತಿದೆ. 2022ರ ಮಾರ್ಚ್ ವೇಳೆಗೆ 3,870 ಕೋಟಿ ರೂ. ನಷ್ಟದಲ್ಲಿತ್ತು.