ಪಣಜಿ: ಪ್ರಧಾನಿ ನರೇಂದ್ರ ಮೋದಿ ಅವರು ಗೋವಾದ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ( Goa airport) ಇಂದು ಉದ್ಘಾಟಿಸಲಿದ್ದಾರೆ. ಗೋವಾದ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಇದು ಮಹತ್ವ ಪಡೆದಿದೆ. ಇದು ಗೋವಾದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಒಟ್ಟು 2,870 ಕೋಟಿ ರೂ. ವೆಚ್ಚದಲ್ಲಿ ಏರ್‌ಪೋರ್ಟ್ ನಿರ್ಮಾಣವಾಗಿದ್ದು, ಜನವರಿ 5ರಿಂದ ವಿಮಾನಗಳ ಹಾರಾಟ ಆರಂಭವಾಗಲಿದೆ.
ದೇಶಾದ್ಯಂತ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಕಲ್ಪಿಸುವುದು, ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಮಹತ್ತ್ವಾಕಾಂಕ್ಷೆಯಾಗಿದ್ದು, ಈ ನಿಟ್ಟಿನಲ್ಲಿ ಇದು ಮತ್ತೊಂದು ಹೆಜ್ಜೆಯಾಗಿದೆ ಎಂದು ಮೋಪಾ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಹೇಳಿಕೆ ನೀಡಿದೆ. ವಾರ್ಷಿಕ 44 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಅನುಕೂಲವನ್ನು ಏರ್‌ಪೋರ್ಟ್ ಹೊಂದಿದೆ.
ಉತ್ತರ ಗೋವಾದ ಮೋಪಾದಲ್ಲಿ ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬಂದಿದೆ. ಇಂಡಿಗೊ ಮತ್ತು ಗೋ ಫಸ್ಟ್ ಮುಂದಿನ ಜನವರಿ 5ರಿಂದ ವಿಮಾನ ಹಾರಾಟವನ್ನು ಇಲ್ಲಿಂದ ಆರಂಭಿಸಲಿವೆ. ದಿಲ್ಲಿ, ಬೆಂಗಳೂರು, ಮುಂಬಯಿ, ಅಹಮದಾಬಾದ್, ಜೈಪುರ, ಹೈದರಾಬಾದ್ ಮತ್ತು ಚೆನ್ನೈ ನಡುವೆ ಮೋಪಾದಿಂದ ವಿಮಾನ ಹಾರಾಟ ಸಂಪರ್ಕ ಶೀಘ್ರ ಏರ್ಪಡಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್‌ನಲ್ಲಿ ಈ ವಿಮಾನ ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. 2,312 ಎಕರೆಗಳಲ್ಲಿ ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬಂದಿದೆ.
ಮುಂಬಯಿ-ನಾಗ್ಪುರ ಸೂಪರ್ ಎಕ್ಸ್‌ಪ್ರೆಸ್‌ವೇ ಕೂಡ ಇಂದು ಲೋಕಾರ್ಣೆಯಾಗಲಿದೆ. ಮುಂಬಯಿ-ನಾಗ್ಪುರ ಸಮೃದ್ಧಿ ಮಹಾಮಾರ್ಗ್ ಎಂಬ ಹೆಸರಿನ ಈ ಎಕ್ಸ್‌ಪ್ರೆಸ್ ವೇ 520 ಕಿ.ಮೀ ಉದ್ದವನ್ನು ಹೊಂದಿದೆ. ಇದರ ಮೊದಲ ಹಂತ ಇಂದು ಲೋಕಾರ್ಪಣೆಯಾಗುತ್ತಿದೆ. ಇದು ಮುಂಬಯಿ ಹಾಗೂ ನಾಗ್ಪುರ ಸೇರಿದಂತೆ 10 ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸಲಿದೆ.