ಬೆಂಗಳೂರು: ಬಂಗಾರದ ದರದಲ್ಲಿ ಶುಕ್ರವಾರ 430 ರೂ. ಇಳಿಕೆಯಾಗಿದೆ. ಪ್ರತಿ 10 ಗ್ರಾಮ್‌ನ ೨೪ ಕ್ಯಾರಟ್ ಚಿನ್ನದ ದರ 56,780 ರೂ.ಗೆ ಇಳಿಕೆಯಾಗಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್ ಬಂಗಾರದ ದರದಲ್ಲಿ 400 ರೂ. ಇಳಿಕೆಯಾಗಿದ್ದು, 52,050 ರೂ.ಗೆ ತಗ್ಗಿದೆ. ಕಳೆದ ನಾಲ್ಕು ದಿನಗಳಲ್ಲಿ ಒಟ್ಟು 500 ರೂ. ಇಳಿಕೆ ಆಗಿರುವುದನ್ನು ಖರೀದಿದಾರರು ಹಾಗೂ ಹೂಡಿಕೆದಾರರು ಗಮನಿಸಬಹುದು. ಹೀಗಿದ್ದರೂ ಈ ವರ್ಷ ಒಟ್ಟಾರೆಯಾಗಿ ಬಂಗಾರ ತುಟ್ಟಿಯಾಗುವ ನಿರೀಕ್ಷೆಯೇ ಇದೆ. ಕಳೆದ 30 ದಿನಗಳಲ್ಲಿ ಬಂಗಾರದ ಸರಾಸರಿ ದರ 57,403 ರೂ ಇತ್ತು. ಕಳೆದ 10 ದಿನಗಳಲ್ಲಿ ಸರಾಸರಿ 57,351 ರೂ.ಗೆ ಇಳಿದಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1950 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಸ್ವರ್ಣ ದರ ಜಿಗಿದಿದೆ. ಸಾಮಾನ್ಯವಾಗಿ ಆರ್ಥಿಕ ವಿಪತ್ತಿನ ಸಂದರ್ಭ ಬಂಗಾರದ ದರ ಏರುಗತಿ ಪಡೆಯುತ್ತದೆ ಎನ್ನುತ್ತಾರೆ ಕೋಟಕ್ ಸೆಕ್ಯುರಿಟೀಸ್‌ನ ತಜ್ಞ ರವೀಂದ್ರ ರಾವ್. 1973ರಿಂದೀಚೆಗೆ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ 5 ಸಲ ಬಂಗಾರದ ದರ ಜಿಗಿದಿತ್ತು.
ಅತಿ ಹೆಚ್ಚು ಚಿನ್ನ ಖರೀದಿಸುವ ಚೀನಾದಲ್ಲಿ ಕೂಡ ಜನವರಿಯಲ್ಲಿ ದರ ಏರಿಕೆ ಉಂಟಾಗಿದೆ. ಚೀನಾದಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಸುತ್ತಿದ್ದು, ಬಂಗಾರಕ್ಕೆ ಬೇಡಿಕೆ ಕೂಡ ಜಿಗಿಯುವ ಸಾಧ್ಯತೆ ಇದೆ. ಅಲ್ಲಿನ ಸರ್ಕಾರ ಕೂಡ ಚಿನನದ ಉಳಿತಾಯ, ಬಳಕೆಗೆ ಉತ್ತೇಜನ ನೀಡುತ್ತಿರುವುದರಿಂದ ಬೇಡಿಕೆ ಹೆಚ್ಚಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನ ಇತ್ತೀಚಿನ ವರದಿ ತಿಳಿಸಿದೆ. ಅಮೆರಿಕ, ಯುರೋಪ್ ಮೊದಲಾದ ಕಡೆಗಳಲ್ಲಿ ಜನವರಿಯಲ್ಲಿ ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಸಾಂಸ್ಥಿಕ ಹಾಗೂ ವೈಯಕ್ತಿಕ ಹೂಡಿಕೆದಾರರು ತಮ್ಮ ಹೂಡಿಕೆಯ ಕಾರ್ಯತಂತ್ರಗಳಲ್ಲಿ ಚಿನ್ನಕ್ಕೂ ಆದ್ಯತೆ ನೀಡುತ್ತಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಜಗತ್ತಿನಾದ್ಯಂತ ಸೆಂಟ್ರಲ್ ಬ್ಯಾಂಕ್‌ಗಳು 28 ಟನ್ ಚಿನ್ನವನ್ನು ಖರೀದಿಸಿವೆ. ನವೆಂಬರ್‌ಗೆ ಹೋಲಿಸಿದರೆ ಇಳಿಕೆ ಕಂಡು ಬಂದಿದೆ. ಆದರೆ ಚೀನಾದ ಸೆಂಟ್ರಲ್ ಬ್ಯಾಂಕ್ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಡಿಸೆಂಬರ್‌ನಲ್ಲಿ ತನ್ನ ಚಿನ್ನದ ದಾಸ್ತಾನನ್ನು ಹೆಚ್ಚಳ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಹಣದುಬ್ಬರ ಎದುರಿಸಲು ಬಂಗಾರದ ಹೂಡಿಕೆ ಸೂಕ್ತ ಎಂಬ ಭಾವನೆ ಮೂಡುತ್ತಿದೆ. ಇದು ಕೂಡ ಬೇಡಿಕೆ ಹೆಚ್ಚಲು ಕಾರಣವಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ ತಿಳಿಸಿದೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಚಿನ್ನದ ಗಣಿಗಾರಿಕೆ ಕೂಡ ಸಾಕಷ್ಟು ಸುಧಾರಿಸಿದೆ. ಹೆಚ್ಚು ಜವಾಬ್ದಾರಿಯುತ ಗಣಿಗಾರಿಕೆ ಮುಂದುವರಿದಿದೆ ಎಂದು ವರದಿ ತಿಳಿಸಿದೆ.