ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನ ವಾಲ್ ಸ್ಟ್ರೀಟ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ, ಜಗತ್ತಿನ ಎರಡನೇ ಅತಿ ದೊಡ್ಡ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಆಗಿರುವ ಗೋಲ್ಡ್‌ಮನ್ ಸ್ಯಾಕ್ಸ್‌ನಲ್ಲಿ (Goldman Sachs) ನೂರಾರು ಹುದ್ದೆಗಳನ್ನು ಕಡಿತಗೊಳಿಸಲಾಗಿದೆ.
ಬ್ಯಾಂಕಿಂಗ್ ವ್ಯವಹಾರದಲ್ಲಿ ಮಂದಗತಿ ಸಂಭವಿಸಿರುವುದು ಇದಕ್ಕೆ ಕಾರಣವಾಗಿದೆ. ನಷ್ಟದಲ್ಲಿರುವ ರಿಟೇಲ್ ಬ್ಯಾಂಕಿಂಗ್ ವಿಭಾಗದಲ್ಲಿ 400 ಉದ್ಯೋಗ ಕಡಿತಕ್ಕೆ ಗೋಲ್ಡ್‌ಮನ್ ನಿರ್ಧರಿಸಿದೆ ಎಂದು ವರದಿಯಾಗಿದೆ. ಬ್ಯಾಂಕ್ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಬ್ಯಾಂಕ್ ಪ್ರತಿ ವರ್ಷ ಕಳಪೆ ಸಾಧನೆ ಮಾಡುವವರನ್ನು ವಜಾಗೊಳಿಸುವುದು ಸಾಮಾನ್ಯ. ಆದರೆ ಈ ಸಲ ಇದರಿಂದಾಚೆಯೂ ಉದ್ಯೋಗ ಕಡಿತ ಮಾಡಿದ್ದು, ವ್ಯವಹಾರ ಇಳಿಮುಖವಾಗಿರುವುದು ಇದಕ್ಕೆ ಕಾರಣ ಎಂದು ವರದಿಯಾಗಿದೆ. ವೆಚ್ಚವನ್ನು ತಗ್ಗಿಸಲು ಬ್ಯಾಂಕ್ ತಂತ್ರಜ್ಞಾನಕ್ಕೆ ಆದ್ಯತೆ ನೀಡುತ್ತಿದೆ. ಎರಡನೆಯದಾಗಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಮುಂಬರುವ ದಿನಗಳಲ್ಲಿ ಬ್ಯಾಂಕಿನ ಕನ್‌ಸ್ಯೂಮರ್ ಲೆಂಡಿಂಗ್ ವಿಭಾಗವನ್ನು ಕೂಡ ಸ್ಥಗಿತಗೊಳಿಸುವ ನಿರೀಕ್ಷೆ ಇದೆ.
ಏನಿದು ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್?
ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಎಂದರೆ, ಕಂಪನಿಗಳ ವಿಲೀನ, ಐಪಿಒ, ಕಂಪನಿಗಳ ಅಡಮಾನ ಇತ್ಯಾದಿಗಳಲ್ಲಿ ಒದಗಿಸುವ ಹಣಕಾಸು ಸೇವೆ. ಕಾರ್ಪೊರೇಟ್ ವಲಯದ ದಿಗ್ಗಜ ಕಂಪನಿಗಳು, ಕೈಗಾರಿಕಾ ಸಮೂಹಗಳ ಜತೆಗೆ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತವೆ.