ಬೆಂಗಳೂರು: ಬಜೆಟ್‌ನಲ್ಲಿ ಉದ್ಯೋಗಿಗಳಿಗೆ ವೃತ್ತಿಪರ ತೆರಿಗೆಯಲ್ಲಿ (Karnataka Budget 2023) ಬದಲಾವಣೆ ಮಾಡಲಾಗಿದೆ. ಕಡಿಮೆ ವೇತನ ಪಡೆಯುವವರಿಗೆ ಅನುಕೂಲವಾಗುವಂತೆ, ವೃತ್ತಿಪರ ತೆರಿಗೆಯ ವಿನಾಯಿತಿಯ ಮಿತಿಯನ್ನು ಮಾಸಿಕ 15,000 ರೂ.ಗಳಿಂದ 25,000 ರೂ.ಗೆ ಏರಿಸಲಾಗಿದೆ.
ಪ್ರಸ್ತುತ ಮಾಸಿಕ 15,000 ರೂ.ಗಿಂತ ಹೆಚ್ಚಿನ ವೇತನ ಪಡೆಯುವವರಿಗೆ ಮಾಸಿಕ 200 ರೂ. ವೃತ್ತಿಪರ ತೆರಿಗೆ ಇದೆ. ಇನ್ನು ಮುಂದೆ 25,000 ರೂ. ತನಕ ಸಂಬಳ ಪಡೆಯುವವರಿಗೆ ವಿನಾಯಿತಿ ಸಿಗಲಿದೆ.
ಕರ ಸಮಾಧಾನ: ಜಿಎಸ್‌ಟಿ ಪೂರ್ವ ತೆರಿಗೆ ವಿವಾದಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕರ ಸಮಾಧಾನ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ 2023ರ ಅಕ್ಟೋಬರ್ 30ರೊಳಗೆ ತೆರಿಗೆ ಬಾಕಿಯನ್ನು ಸಂಪೂರ್ಣವಾಗಿ ಪಾವತಿಸುವವರಿಗೆ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲಾಗುವುದು.
೨೦೨೨-೨೩ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಆಯವ್ಯಯದಲ್ಲಿ 15,000 ಕೋಟಿ ರೂ.ಗಳ ಗುರಿ ನೀಡಲಾಗಿದ್ದು, ವರ್ಷಾಂತ್ಯಕ್ಕೆ ಗುರಿ ಮೀರಿ 17,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆಯ ಗುರಿ ನಿಗದಿಪಡಿಸಲಾಗಿದೆ.
ಸಾರಾಯಿ, ಸೇಂದಿಗೆ ಸಂಬಂಧಪಟ್ಟ ಅಬಕಾರಿ ಬಾಕಿ ವಸೂಲು ಮಾಡಲು ಕರ ಸಮಾಧಾನ ವಿಸ್ತರಿಸಲಾಗಿದೆ. ಸಾರಾಯಿ, ಸೇಂದಿಗೆ ಬಾಡಿಗೆಗಳ ಕುರಿತ ಮೂಲಧನವನ್ನು 2023ರ ಜೂನ್ 30ರೊಳಗೆ ಪಾವತಿಸುವವರಿಗೆ ಬಡ್ಡಿ ಮತ್ತು ದಂಡಬಡ್ಡಿ ಪಾವತಿಯಲ್ಲಿ ರಿಯಾಯಿತಿ ನೀಡಲಾಗುವುದು. ೨೦೨೩ನೇ ಸಾಲಿಗೆ ಅಬಕಾರಿ ಇಲಾಖೆಗೆ 35,000 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
ಸಾರಿಗೆ ಇಲಾಖೆಗೆ ತೆರಿಗೆ ಸಂಗ್ರಹದ ಗುರಿ: 2022-23ನೇ ಸಾಲಿಗೆ ಸಾರಿಗೆ ಇಲಾಖೆಗೆ ಆಯವ್ಯಯದಲ್ಲಿ 8007 ಕೋಟಿ ರೂ.ಗಳ ಗುರಿಯನ್ನು ನೀಡಲಾಗಿದೆ. ಮಾರ್ಚ್ ಅಂತ್ಯಕ್ಕೆ 9007 ಕೋಟಿ ರೂ. ರಾಜಸ್ವ ಸಂಗ್ರಹಣೆ ನಿರೀಕ್ಷಿಸಲಾಗಿದೆ.
ಜಿಎಸ್‌ಟಿ ಸಂಗ್ರಹ ದಾಖಲೆ: ಕರ್ನಾಟಕ ಜಿಎಸ್‌ಟಿ ಸಂಗ್ರಹದಲ್ಲಿ ದಾಖಲೆಯ ಮಟ್ಟದಲ್ಲಿ ಪ್ರಗತಿ ಸಾಧಿಸಿದೆ. ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹವಾಗುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ. ವಾಣಿಜ್ಯ ತೆರಿಗೆ ಇಲಾಖೆಗೆ 2022-23ರಲ್ಲಿ 72,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ನಿಗದಿಪಡಿಸಲಾಗಿತ್ತು. ಆದರೆ ಜನವರಿ ಅಂತ್ಯದ ವೇಳೆಗೆ 83,010 ಕೋಟಿ ರೂ. ಸಂಗ್ರಹವಾಗಿದೆ. ಇದು ಬಜೆಟ್ ಅಂದಾಜಿಗಿಂತ 15% ಹೆಚ್ಚು. ರಾಜ್ಯ ಜಿಎಸ್‌ಟಿ ಪರಿಹಾರವಾಗಿ 10,548 ಕೋಟಿ ರೂ. ಪಡೆದಿತ್ತು. ವರ್ಷಾಂತ್ಯದ ವೇಳೆಗೆ ಜಿಎಸ್ ಟಿ ನಷ್ಟ ಪರಿಹಾರ ಬಾಬ್ತು 93,558 ಕೋಟಿ ರೂ. ಸಿಗಲಿದೆ. 2023-24ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಗೆ 92,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ನಿಗದಿಪಡಿಸಲಾಗಿದೆ. (ಜಿಎಸ್‌ಟಿ ನಷ್ಟ ಪರಿಹಾರ ಹೊರತುಪಡಿಸಿ)